ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಸಹಾಯ ವಲಯ ಆರಂಭ
ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಹೆಚ್ಚುವರಿ ನೆರವು ಅಗತ್ಯವಿರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ವಿಶೇಷ ಸಹಾಯ ವಲಯವನ್ನು ಆರಂಭಿಸಲಾಗಿದೆ. ಚಲನವಲನಕ್ಕೆ ತೊಂದರೆ ಇರುವವರು,
ವಿಶೇಷ ವಲಯ


ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಹೆಚ್ಚುವರಿ ನೆರವು ಅಗತ್ಯವಿರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ವಿಶೇಷ ಸಹಾಯ ವಲಯವನ್ನು ಆರಂಭಿಸಲಾಗಿದೆ.

ಚಲನವಲನಕ್ಕೆ ತೊಂದರೆ ಇರುವವರು, ಅಂಗವಿಕಲರು, ಹಿರಿಯ ನಾಗರಿಕರು, ಗರ್ಭಿಣಿಯರು, ಪೋಷಕರಿಲ್ಲದೆ ಪ್ರಯಾಣಿಸುವ ಮಕ್ಕಳು ಸೇರಿದಂತೆ ಹೆಚ್ಚುವರಿ ನೆರವು ಅಗತ್ಯವಿರುವ ಪ್ರಯಾಣಿಕರಿಗೆ ಈ ವಲಯದಲ್ಲಿ ಪ್ರಯಾಣದ ವಿವಿಧ ಹಂತಗಳಲ್ಲಿ ಅಗತ್ಯ ಸಹಾಯ ಒದಗಿಸಲಾಗುತ್ತದೆ.

ಭದ್ರತಾ ತಪಾಸಣೆಗೆ ಮುನ್ನವೇ ಪ್ರಯಾಣಿಕರ ನೋಂದಣಿ, ಸಾಮಾನು ನಿರ್ವಹಣೆ ಮತ್ತು ಕಾಯುವ ವ್ಯವಸ್ಥೆಯನ್ನು ಒಂದೇ ಸ್ಥಳದಲ್ಲಿ ಕಲ್ಪಿಸಲಾಗಿದೆ. ಆದ್ಯತಾ ದ್ವಾರ 5ಎ ಮೂಲಕ ವಿಶೇಷ ಸಹಾಯ ವಲಯಕ್ಕೆ ನೇರವಾಗಿ ಪ್ರವೇಶಿಸಬಹುದಾಗಿದೆ. ಇಲ್ಲಿ ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎರಡು ಪ್ರತ್ಯೇಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಗಾಲಿಕುರ್ಚಿ ಬಳಕೆದಾರರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಸಹಾಯ ಕೇಂದ್ರಕ್ಕೆ ಆಗಮಿಸಿದ ಬಳಿಕ ಪ್ರಯಾಣಿಕರ ಸಾಮಾನುಗಳನ್ನು ಸಿಬ್ಬಂದಿಯೇ ಸಂಗ್ರಹಿಸಿ ಸಾಮಾನು ಸಾಗಿಸುವ ಪಟ್ಟಿಗೆ ತಲುಪಿಸಲಿದ್ದಾರೆ. ಇದರಿಂದ ಪ್ರಯಾಣಿಕರು ಸ್ವತಃ ಸಾಮಾನು ಇಳಿಸುವ ಪ್ರಕ್ರಿಯೆ ನಡೆಸುವ ಅಗತ್ಯ ಇರುವುದಿಲ್ಲ.

ವಿಶೇಷ ಸಹಾಯ ವಲಯದಲ್ಲಿ ಚಾರ್ಜಿಂಗ್ ಸೌಲಭ್ಯ ಹೊಂದಿರುವ 20 ಅನುಕೂಲಕರ ಆಸನಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರೊಂದಿಗೆ ಬರುವ ಕುಟುಂಬ ಸದಸ್ಯರು ಹಾಗೂ ಆರೈಕೆದಾರರಿಗಾಗಿ ಹೊರಭಾಗದಲ್ಲಿಯೂ ಹೆಚ್ಚುವರಿ ಆಸನಗಳಿವೆ. ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸುವ ಪರದೆಗಳ ಮೂಲಕ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ಒದಗಿಸಲಾಗುತ್ತದೆ.

ಪ್ರಯಾಣಿಕರ ವಿಭಿನ್ನ ಅಗತ್ಯಗಳನ್ನು ಅರ್ಥಮಾಡಿಕೊಂಡು ವಿಮಾನ ನಿಲ್ದಾಣದ ಅನುಭವವನ್ನು ರೂಪಿಸುವುದು ಉದ್ದೇಶವಾಗಿದೆ. ವಿಶೇಷ ಸಹಾಯ ವಲಯವು ಹೆಚ್ಚುವರಿ ನೆರವು ಅಗತ್ಯವಿರುವ ಪ್ರಯಾಣಿಕರಿಗೆ ಪ್ರಯಾಣದ ಸವಾಲಿನ ಹಂತಗಳಲ್ಲಿ ಹೆಚ್ಚಿನ ಸುಲಭತೆ, ಗೌರವ ಮತ್ತು ಆತ್ಮವಿಶ್ವಾಸ ಒದಗಿಸಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದಲ್ಲಿ ಹಲವು ಪ್ರವೇಶಸೌಲಭ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂಗವಿಕಲ ಪ್ರಯಾಣಿಕರಿಗಾಗಿ ಚಲನಶೀಲತಾ ನೆರವು, ನರ ವೈವಿಧ್ಯ ಹೊಂದಿರುವ ಪ್ರಯಾಣಿಕರಿಗಾಗಿ ಸಂವೇದನಾ ಕೊಠಡಿ, ವಿಶೇಷ ನೆರವು ಅಗತ್ಯವಿರುವವರನ್ನು ಗುರುತಿಸಲು ಸನ್‌ಫ್ಲವರ್ ಲ್ಯಾನ್ಯಾರ್ಡ್ ಕಾರ್ಯಕ್ರಮ, ಸಿಬ್ಬಂದಿಗೆ ಪ್ರವೇಶಸೌಲಭ್ಯ ಕುರಿತ ತರಬೇತಿ ಹಾಗೂ ನರ ವೈವಿಧ್ಯ ಹೊಂದಿರುವ ಪ್ರಯಾಣಿಕರು ಮತ್ತು ಆರೈಕೆದಾರರಿಗೆ ನೆರವಾಗುವ ಡಿಜಿಟಲ್ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ.

ಪ್ರವೇಶಸೌಲಭ್ಯ ಮತ್ತು ಪ್ರಯಾಣಿಕರ ಅನುಭವ ಸುಧಾರಣೆಗೆ ಕೈಗೊಂಡ ಕ್ರಮಗಳಿಗೆ ಮಾನ್ಯತೆಯೂ ದೊರೆತಿದ್ದು, ಬೆಂಗಳೂರು ವಿಮಾನ ನಿಲ್ದಾಣವು ಎಸಿಐ ಪ್ರವೇಶಸೌಲಭ್ಯ ವರ್ಧನೆ ಮಾನ್ಯತೆಯ ಮೂರನೇ ಹಂತವನ್ನು ಪಡೆದಿದೆ. ಈ ಮಾನ್ಯತೆಯ ಅತ್ಯುನ್ನತ ಹಂತವನ್ನು ಪಡೆದ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande