
ಗದಗ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆಗಟ್ಟುವ ಹಾಗೂ ಅರ್ಹ ರೈತರಿಗೆ ಮಾತ್ರ ಹಣ ನೇರವಾಗಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಕೆವೈಸಿ ಪ್ರಕ್ರಿಯೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದೆ. ಮುಂದಿನ ಕಂತಿನ ಹಣ ಪಡೆಯಲು ಬಾಕಿ ಇರುವ ಫಲಾನುಭವಿಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ಅಥವಾ ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ದಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು ₹6,000 ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಯೋಜನೆಯ 24ನೇ ಕಂತಿನ ಹಣ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಂತಿನ ಹಣ ಪಡೆಯಲು ಇ-ಕೆವೈಸಿ ಪೂರ್ಣಗೊಳಿಸಿರುವುದು ಪ್ರಮುಖ ಷರತ್ತಾಗಿದೆ.
ನಕಲಿ ಫಲಾನುಭವಿಗಳಿಗೆ ಕಡಿವಾಣ
ಪಿಎಂ ಕಿಸಾನ್ ಯೋಜನೆಯಡಿ ಹಣ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಅರ್ಹ ಫಲಾನುಭವಿಗಳನ್ನು ಮಾತ್ರ ಯೋಜನೆಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದ್ದು, ಎನ್ಪಿಸಿಐಗೆ ಖಾತೆ ಲಿಂಕ್ ಆಗಿದ್ದರೂ ಸಹ ಪ್ರತಿಯೊಬ್ಬ ಫಲಾನುಭವಿಯೂ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಈ ಕ್ರಮದ ಮೂಲಕ ಮೃತ ಫಲಾನುಭವಿಗಳ ಹೆಸರಿನಲ್ಲಿ ಮುಂದುವರಿದಿರುವ ಖಾತೆಗಳನ್ನು ಗುರುತಿಸಿ, ಅಂತಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಟ್ಟು ಅರ್ಹ ರೈತರ ಪಟ್ಟಿಯನ್ನು ಮತ್ತಷ್ಟು ಶುದ್ಧೀಕರಿಸಲು ಸರ್ಕಾರ ಮುಂದಾಗಿದೆ.
ಈ ಹಿಂದೆ ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ವ್ಯವಸ್ಥೆಯ ಮೂಲಕ ರೈತರು ತಮ್ಮ ಇ-ಕೆವೈಸಿ ಪೂರ್ಣಗೊಳಿಸುತ್ತಿದ್ದರು. ಆದರೆ ಕೆಲವು ಸಂದರ್ಭಗಳಲ್ಲಿ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೂ ಹಣ ವರ್ಗಾವಣೆಯಾದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಇ-ಕೆವೈಸಿ ಪ್ರಕ್ರಿಯೆಯಲ್ಲಿ ಮತ್ತಷ್ಟು ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಹೀಗಾಗಿ ಈ ಬಾರಿ ಒಟಿಪಿ ಆಧಾರಿತ ಇ-ಕೆವೈಸಿಗೆ ಬದಲಾಗಿ ಬಯೋಮೆಟ್ರಿಕ್ ಅಥವಾ ಮುಖ ದೃಢೀಕರಣ ಆಧಾರಿತ ಇ-ಕೆವೈಸಿಗೆ ಆದ್ಯತೆ ನೀಡಲಾಗಿದೆ. ರೈತರು ಯಾವುದೇ ಕಾರಣಕ್ಕೂ ಇ-ಕೆವೈಸಿ ಬಾಕಿ ಉಳಿಸಿಕೊಳ್ಳದೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.
ಎಲ್ಲೆಲ್ಲಿ ಇ-ಕೆವೈಸಿ ಮಾಡಿಸಬಹುದು?
ಇ-ಕೆವೈಸಿ ಬಾಕಿ ಇರುವ ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ), ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು.
ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಲು ತಮ್ಮ ಗ್ರಾಮದ ವಿಎನ್ಒ, ನೋಡಲ್ ಅಧಿಕಾರಿ, ಕೃಷಿ ಸಖಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಇದರ ಜೊತೆಗೆ ರೈತರು ಸ್ವತಃ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಮುಖ ದೃಢೀಕರಣದ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವ ಅವಕಾಶವೂ ಇದೆ.
ಕಂತಿನ ಹಣದಿಂದ ವಂಚಿತರಾಗದಂತೆ ಎಚ್ಚರ
ಪಿಎಂ ಕಿಸಾನ್ ಯೋಜನೆಯಡಿ ನಿಯಮಿತವಾಗಿ ಕಂತಿನ ಹಣ ಪಡೆಯುತ್ತಿರುವ ರೈತರು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು. ಇ-ಕೆವೈಸಿ ಬಾಕಿ ಉಳಿದಿದ್ದಲ್ಲಿ ಮುಂದಿನ ಕಂತಿನ ಹಣ ಜಮೆಯಾಗುವ ಸಂದರ್ಭದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ರೈತರು ಮುನ್ನೆಚ್ಚರಿಕೆಯಿಂದ ಕೂಡಲೇ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ.
ಅರ್ಹ ರೈತರಿಗೆ ಯೋಜನೆಯ ಹಣ ಯಾವುದೇ ಅಡಚಣೆಯಿಲ್ಲದೆ ತಲುಪಬೇಕು ಹಾಗೂ ನಕಲಿ ಅಥವಾ ಅನರ್ಹ ಫಲಾನುಭವಿಗಳನ್ನು ತಡೆಗಟ್ಟಬೇಕು ಎಂಬ ಉದ್ದೇಶದಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಜಿಲ್ಲೆಯ ರೈತರು ಕೊನೆಯ ಕ್ಷಣದವರೆಗೆ ಕಾಯದೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಕೇಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP