
ಗದಗ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ಹಾಗೂ ವರ್ತನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಸಿ.ಸಿ. ಪಾಟೀಲ್, ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಗದಗನಲ್ಲಿ ಮಾತನಾಡಿದ ಅವರು, “ನಿಮ್ಮ ಗ್ರಹಚಾರ ಬಿಡಿಸುತ್ತೇನೆ” ಎಂದು ಆವಾಜ್ ಹಾಕುವ ಅಧಿಕಾರಿಗೆ ಸರ್ಕಾರ ಸಮವಸ್ತ್ರ ನೀಡಿರುವುದು ಹಿಂದೂಗಳ ಗ್ರಹಚಾರ ಬಿಡಿಸಲು ಅಲ್ಲ. ದರೋಡೆಕೋರರು ಹಾಗೂ ಸಮಾಜಘಾತುಕ ಶಕ್ತಿಗಳ ಗ್ರಹಚಾರ ಬಿಡಿಸಲು ಸರ್ಕಾರ ಪೊಲೀಸ್ ಸಮವಸ್ತ್ರ ಮತ್ತು ಅಧಿಕಾರ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
“ಪೊಲೀಸ್ ಅಧಿಕಾರಿಯ ಭುಜದ ಮೇಲಿರುವ ಸ್ಟಾರ್ ಸರ್ಕಾರದ ಲಾಂಛನ. ಜನರ ರಕ್ಷಣೆ ಮಾಡಬೇಕಾದ ಅಧಿಕಾರಿಯೊಬ್ಬರು ಒಂದು ಸಮುದಾಯವನ್ನು ನಿಂದಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಹಿಂದೂಗಳನ್ನು ಬೈದರೆ ಗೃಹಮಂತ್ರಿಗಳು ಪ್ರಮೋಷನ್ ನೀಡುತ್ತಾರೆ ಎಂದು ಇನ್ಸ್ಪೆಕ್ಟರ್ ಧನಂಜಯ್ ಭಾವಿಸಿದ್ದರೇನೋ. ಸಿಪಿಐನಿಂದ ಎಸ್ಪಿಯಾಗಿ ಪ್ರಮೋಷನ್ ಸಿಗುತ್ತದೆ ಎಂದುಕೊಂಡಿದ್ದರೇನೋ” ಎಂದು ಸಿ.ಸಿ. ಪಾಟೀಲ್ ವ್ಯಂಗ್ಯವಾಡಿದರು.
ಟಿ. ನರಸೀಪುರದಲ್ಲಿ ಈ ಹಿಂದೆ ಯಾವುದೇ ಕೋಮುಗಲಭೆ ನಡೆದಿರಲಿಲ್ಲ. ಆದರೆ ಇಂತಹ ಅಧಿಕಾರಿಯ ವರ್ತನೆಯಿಂದ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ವಿಭಜನೆಯ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ ಅವರು, “ಇಂತಹ ಅಧಿಕಾರಿಯನ್ನೇ ಸಮಾಜಘಾತುಕ ಶಕ್ತಿ ಎಂದು ಕರೆಯಬೇಕಾಗುತ್ತದೆ” ಎಂದರು.
ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ಅಮಾನತು ಕ್ರಮ ಕೈಗೊಳ್ಳುವ ಕುರಿತು ಎಸ್ಪಿ ಅವರು ಹೇಳಿಕೆ ನೀಡಿದ್ದರೂ, ಗೃಹ ಸಚಿವರು ಅಮಾನತು ಮಾಡಬೇಕಾದವರು ತಾವು ಎಂದು ಹೇಳಿರುವುದು ಅಧಿಕಾರಿಗಳ ಕೈಕಟ್ಟಿ ಹಾಕಿದಂತಾಗಿದೆ ಎಂದು ಸಿ.ಸಿ. ಪಾಟೀಲ್ ಟೀಕಿಸಿದರು.
“ಗೃಹ ಸಚಿವರ ಕರ್ತವ್ಯ ಎಲ್ಲ ಸಮುದಾಯಗಳನ್ನೂ ರಕ್ಷಿಸುವುದು. ಯಾವುದೇ ಒಂದು ಸಮುದಾಯದ ಪರ ಅಥವಾ ವಿರೋಧವಾಗಿ ನಡೆದುಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.
ಗಣೇಶೋತ್ಸವಕ್ಕೆ ಹಲವು ಷರತ್ತುಗಳೇಕೆ?
ಗಣೇಶೋತ್ಸವದ ಆಚರಣೆಗೆ ಪೊಲೀಸ್ ಇಲಾಖೆ ವಿಧಿಸಿರುವ ಹಲವು ಷರತ್ತುಗಳ ಬಗ್ಗೆಯೂ ಸಿ.ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
“ಐದು ದಿನಗಳ ಕಾಲ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಎಷ್ಟೊಂದು ಕಂಡಿಷನ್ಗಳನ್ನು ಹಾಕಲಾಗುತ್ತಿದೆ. ಮಹತ್ವದ ಕಾರ್ಯ ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ಈಗ ಗಣೇಶನ ಕಾರ್ಯಕ್ರಮ ನಡೆಸಲು ಪೊಲೀಸರನ್ನೇ ಪೂಜಿಸಬೇಕಾದ ಪರಿಸ್ಥಿತಿ ಬಂದಿದೆ” ಎಂದು ಅವರು ವ್ಯಂಗ್ಯವಾಡಿದರು.
ಅಲ್ಪಸಂಖ್ಯಾತರ ಹಬ್ಬಗಳು ಅದ್ಧೂರಿಯಾಗಿ, ಡಿಜೆ ಸೇರಿದಂತೆ ನಡೆಯುವ ಸಂದರ್ಭದಲ್ಲಿ ಗಣೇಶೋತ್ಸವಕ್ಕೆ ಮಾತ್ರ ಹಲವು ನಿರ್ಬಂಧಗಳನ್ನು ವಿಧಿಸುವುದು ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ಎಲ್ಲರಿಗೂ ಸಮಾನ ನಿಯಮಗಳನ್ನು ಅನ್ವಯಿಸಬೇಕು ಎಂದು ಆಗ್ರಹಿಸಿದರು.
ವಂದೇ ಮಾತರಂ ವಿಚಾರದಲ್ಲೂ ಕಿಡಿ
ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಹಾಡುವ ವಿಚಾರದ ಕುರಿತು ಮಾತನಾಡಿದ ಸಿ.ಸಿ. ಪಾಟೀಲ್, ದೇಶದ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದರು.
“ವಂದೇ ಮಾತರಂ ಗೀತೆಯನ್ನು ಹಾಡುವ ವಿಚಾರ ಸಂಸತ್ತಿನಲ್ಲಿ ಜಾರಿಯಾದ ಕಾನೂನಿಗೆ ಸಂಬಂಧಿಸಿದೆ. ಈ ದೇಶದ ಕಾನೂನನ್ನು ದೇಶಭಕ್ತರು ಮಾತ್ರ ಪಾಲಿಸುತ್ತಾರೆ. ದೇಶಭಕ್ತರಲ್ಲದವರಿಗೆ ಈ ದೇಶದ ಕಾನೂನು ಅನ್ವಯಿಸುವುದಿಲ್ಲವೇ?” ಎಂದು ಪ್ರಶ್ನಿಸಿದರು.
ವಂದೇ ಮಾತರಂನ ಮುಂದಿನ ಚರಣಗಳಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದ ಅವರು, ಹಿಂದೆ ಯಾರೋ ಗೀತೆಯನ್ನು ಕತ್ತರಿಸಿದ್ದಾರೆ. ಈಗ ಅದೇ ನಿರ್ಧಾರವನ್ನು ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
“ಮೂರು-ನಾಲ್ಕು ಚರಣಗಳನ್ನು ಹಾಡುವ ಬದಲು ಇಟಲಿ ರಾಷ್ಟ್ರಗೀತೆಯನ್ನೇ ಹಾಡಲಿ” ಎಂದು ವ್ಯಂಗ್ಯವಾಗಿ ಸವಾಲು ಹಾಕಿದರು.
ಬರ ಘೋಷಣೆ ವಿಚಾರದಲ್ಲಿ ಆಶಾಭಾವನೆ
ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವ ವಿಚಾರದಲ್ಲಿ ಸದ್ಯಕ್ಕೆ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಹೇಳಲು ಹೋಗುವುದಿಲ್ಲ ಎಂದು ಸಿ.ಸಿ. ಪಾಟೀಲ್ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗದಗ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಕೂಡ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಒಂದು ದಿನ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ನಡೆಯಲಿದೆ. ಸೆಪ್ಟೆಂಬರ್ 22 ಮತ್ತು 23ರಂದು ಬರಗಾಲದ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ಸೆಪ್ಟೆಂಬರ್ 23ರಂದು ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಸಿ.ಸಿ. ಪಾಟೀಲ್ ಹೇಳಿದರು.
“ಆಶಾಭಾವನೆಯಿಂದ ಇರೋಣ. ಸೆಪ್ಟೆಂಬರ್ 23ರಂದು ಬರ ಘೋಷಣೆ ಮಾಡುವ ವಿಶ್ವಾಸ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರಗಾಲದ ಪರಿಸ್ಥಿತಿಯ ಅರಿವಿದೆ. ಆದರೆ ಏನು ಮಾಡಬೇಕು? ಅವರ ಕಿಸೆಯೇ ಖಾಲಿಯಾಗಿದೆ” ಎಂದು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಲೇವಡಿ ಮಾಡಿದರು.
ಸರ್ಕಾರದ ವಿರುದ್ಧ ವ್ಯಂಗ್ಯ
ರಾಜ್ಯ ಸರ್ಕಾರದ ವಿರುದ್ಧ ತೀವ್ರ ವ್ಯಂಗ್ಯವಾಡಿದ ಸಿ.ಸಿ. ಪಾಟೀಲ್, “ಬನಶಂಕರಿ ನಾಟಕ ನಡೆಯುವಾಗ ಟಾಕೀಸ್ ಫುಲ್ ಇರುತ್ತದೆ. ಆದರೆ ಗಲ್ಲೆ ಮಾತ್ರ ಖಾಲಿಯಾಗಿರುತ್ತದೆ. ಸರ್ಕಾರದಲ್ಲಿ 136 ಜನ ಇದ್ದಾರೆ, ಆದರೆ ಗಲ್ಲೆ ಖಾಲಿಯಾಗಿದೆ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬರಗಾಲದಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಹಾಗೂ ಬರ ಘೋಷಣೆ ಮಾಡಬೇಕು. ಯಾವುದೇ ರೀತಿಯ ತಾರತಮ್ಯ ಮಾಡದೆ ಸಂಕಷ್ಟದಲ್ಲಿರುವ ಎಲ್ಲ ತಾಲೂಕುಗಳ ರೈತರಿಗೆ ನೆರವಾಗಬೇಕು ಎಂದು ಅವರು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP