
ಗದಗ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- 2026-27ನೇ ಸಾಲಿನ ಗದಗ ಜಿಲ್ಲೆಯ ವಿವಿಧ ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ತಾಲೂಕು ಮಟ್ಟದ ಕ್ರೀಡಾಕೂಟಗಳು ಸೆಪ್ಟೆಂಬರ್ 17ರಿಂದ ವಿವಿಧೆಡೆ ಆರಂಭವಾಗಲಿವೆ. ಆಸಕ್ತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ.
ಕ್ರೀಡಾಪಟುಗಳು ವೆಬ್ಸೈಟ್ ಮೂಲಕ ಕ್ಯೂಆರ್ ಕೋಡ್ ಬಳಸಿ ತಮ್ಮ ಹೆಸರು ನೋಂದಾಯಿಸಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ನೋಂದಣಿ ಮಾಡಿಕೊಂಡಿರುವ ಕ್ರೀಡಾಪಟುಗಳು ನಿಗದಿತ ದಿನದಂದು ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಹಾಜರಿರಬೇಕು ಎಂದು ಇಲಾಖೆ ಸೂಚಿಸಿದೆ.
ತಾಲೂಕುವಾರು ಕ್ರೀಡಾಕೂಟದ ವಿವರ
ಗಜೇಂದ್ರಗಡ ತಾಲೂಕು:
ಸೆಪ್ಟೆಂಬರ್ 17 ಮತ್ತು 18ರಂದು ನರೇಗಲ್ನ ಎಸ್.ಎ.ವಿ. ಪ್ರೌಢಶಾಲೆ ಆವರಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ.
ಗದಗ ತಾಲೂಕು:
ಸೆಪ್ಟೆಂಬರ್ 18 ಮತ್ತು 19ರಂದು ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.
ನರಗುಂದ ತಾಲೂಕು:
ಸೆಪ್ಟೆಂಬರ್ 18 ಮತ್ತು 19ರಂದು ನರಗುಂದದ ತಾಲೂಕು ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ನಡೆಯಲಿದೆ.
ಮುಂಡರಗಿ ತಾಲೂಕು:
ಸೆಪ್ಟೆಂಬರ್ 19 ಮತ್ತು 20ರಂದು ಮುಂಡರಗಿಯ ಅನ್ನದಾನೇಶ್ವರ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.
ರೋಣ ತಾಲೂಕು:
ಸೆಪ್ಟೆಂಬರ್ 18 ಮತ್ತು 19ರಂದು ರೋಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ.
ಲಕ್ಷ್ಮೇಶ್ವರ ತಾಲೂಕು:
ಸೆಪ್ಟೆಂಬರ್ 19 ಮತ್ತು 20ರಂದು ಯಳವತ್ತಿಯ ಎಸ್.ಜೆ.ಎಫ್.ಸಿ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸಂಘಟಿಸಲಾಗುವುದು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯಲಿರುವ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ಇಲಾಖೆ ಮನವಿ ಮಾಡಿದೆ. ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಮುಂದಿನ ಹಂತದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ.
ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲ ಕ್ರೀಡಾಪಟುಗಳು ಅಗತ್ಯ ಸಿದ್ಧತೆಗಳೊಂದಿಗೆ ನಿಗದಿತ ಸಮಯಕ್ಕೆ ಸ್ಥಳದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ
ಗಜೇಂದ್ರಗಡ ತಾಲೂಕಿಗೆ ಸಂಬಂಧಿಸಿದಂತೆ ಲಕ್ಷ್ಮಣ ಬಾರಕೇರ, ದೈಹಿಕ ಶಿಕ್ಷಣ ಶಿಕ್ಷಕರು — 7975322259, ಬಸವರಾಜ ಹೊಸಳ್ಳಿ — 8970838603, ಮಂಜುನಾಥ ಬಾಗಡೆ — 9036533909 ಅವರನ್ನು ಸಂಪರ್ಕಿಸಬಹುದು.
ಗದಗ ತಾಲೂಕಿಗೆ ಚಂದ್ರಶೇಖರ ಮೇಲಿನಮನಿ, ದೈಹಿಕ ಶಿಕ್ಷಣ ಶಿಕ್ಷಕರು — 8618320040, ವಿದ್ಯಾ ಕುಲಕರ್ಣಿ, ಸೈಕ್ಲಿಂಗ್ ತರಬೇತುದಾರರು — 8951936636 ಅವರನ್ನು ಸಂಪರ್ಕಿಸಬಹುದು.
ನರಗುಂದ ತಾಲೂಕಿಗೆ ಎನ್.ಆರ್. ನಿಡಗುಂದಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ — 9945256311, ಬಾಹುಬಲಿ, ಕುಸ್ತಿ ತರಬೇತುದಾರರು — 9964731179 ಅವರನ್ನು ಸಂಪರ್ಕಿಸಬಹುದು.
ಮುಂಡರಗಿ ತಾಲೂಕಿಗೆ ಎಂ.ವಿ. ಪಾಟೀಲ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ — 9880249574, ವಿದ್ಯಾ ಕುಲಕರ್ಣಿ, ಸೈಕ್ಲಿಂಗ್ ತರಬೇತುದಾರರು — 8951936636 ಅವರನ್ನು ಸಂಪರ್ಕಿಸಬಹುದು.
ರೋಣ ತಾಲೂಕಿಗೆ ಲಕ್ಷ್ಮಣ ಬಾರಕೇರ, ದೈಹಿಕ ಶಿಕ್ಷಣ ಶಿಕ್ಷಕರು — 7975322259, ಬಸವರಾಜ ಹೊಸಳ್ಳಿ — 8970838603 ಅವರನ್ನು ಸಂಪರ್ಕಿಸಬಹುದು.
ಲಕ್ಷ್ಮೇಶ್ವರ ತಾಲೂಕಿಗೆ ರೇವಣಸಿದ್ದಪ್ಪ ಹನುಮಂತಪ್ಪ ನರೇಗಲ್, ದೈಹಿಕ ಶಿಕ್ಷಣ ಶಿಕ್ಷಕರನ್ನು ಸಂಪರ್ಕಿಸಬಹುದು.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳ ಯಶಸ್ವಿ ಆಯೋಜನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP