ಜೈಲುಗಳ ಮೇಲೆ ದಾಳಿ ಬಿಡದಿ ವಿಚಾರ ತಿರುಗಿಸಲು ಅಲ್ಲ: ಪ್ರಿಯಾಂಕ್ ಖರ್ಗೆ
ನಾನು ಕೇವಲ ನಾಲ್ಕು ಸೆಲ್ಗಳ ಗೃಹ ಸಚಿವನಲ್ಲ. ರಾಜ್ಯದ ಹಲವು ಜೈಲುಗಳ ಮೇಲೆ ರೇಡ್ ಮಾಡಿದ್ದೇವೆ
ಜೈಲುಗಳ ಮೇಲೆ ದಾಳಿ ಬಿಡದಿ ವಿಚಾರ ತಿರುಗಿಸಲು ಅಲ್ಲ: ಪ್ರಿಯಾಂಕ್ ಖರ್ಗೆ


ಕಲಬುರಗಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಬಿಡದಿ ವಿಚಾರವನ್ನು ತಿರುಗಿಸಲು ರಾಜ್ಯದ ಜೈಲುಗಳ ಮೇಲೆ ದಾಳಿ ನಡೆಸಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಲಾಗಿದೆ. ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.

ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ಅದನ್ನು ನಾವು ಮಾಡಬಾರದಾ ಎಂದು ಪ್ರಶ್ನಿಸಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಿರಂತರವಾಗಿ ದೂರವಾಣಿಯಲ್ಲಿ ಮಾತನಾಡಿರುವ ವಿಚಾರವನ್ನು ಪ್ರಸ್ತಾಪಿಸಿದ ಖರ್ಗೆ, ಪ್ರಜ್ವಲ್ ರೇವಣ್ಣ ಯಾರಿಗೆ ನಿರಂತರವಾಗಿ ಮಾತನಾಡುತ್ತಿದ್ದರು? ಇಷ್ಟೆಲ್ಲ ಮಾತನಾಡುತ್ತಿದ್ದವರು ಯಾಕೆ ಮಾಹಿತಿ ನೀಡಿಲ್ಲ? ಅವರು ಕುಟುಂಬದವರ ಜತೆ ತಾನೇ ಮಾತನಾಡಿದ್ದು ಎಂದು ಪ್ರಶ್ನಿಸಿದರು.

ಹಾಸನದಲ್ಲಿ ನಡೆದ ಘಟನೆಗಳ ಬಗ್ಗೆ ಮೊದಲು ಮಾತನಾಡಬೇಕು. ಈ ಬಗ್ಗೆ ಒಂದು ಬಾರಿಯಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಮೊದಲು ಆ ಕುಟುಂಬಗಳ ಕ್ಷಮೆ ಕೇಳಬೇಕು ಹಾಗೂ ನೊಂದ ಹೆಣ್ಣುಮಕ್ಕಳ ಕ್ಷೇಮ ವಿಚಾರಿಸಬೇಕು ಎಂದು ಹೇಳಿದರು.

ವಿಜಯದಶಮಿಯಿಂದ ಯುದ್ಧ ಆರಂಭವಾಗಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ, ಅಲ್ಲೋಲ-ಕಲ್ಲೋಲ ಆಗುವುದು ಮುಂದಕ್ಕೆ ಹೋಯ್ತಾ ಎಂದು ಪ್ರಶ್ನಿಸಿದರು.

ತಮ್ಮ ಕುಟುಂಬವನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಯಾರು ಪ್ರಯತ್ನ ಮಾಡುತ್ತಿದ್ದಾರೆ? ನಾವೇಕೆ ಅದನ್ನು ಮಾಡೋಣ ಎಂದು ತಿರುಗೇಟು ನೀಡಿದರು.

ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಬಿಂಬಿಸುವ ವಿಚಾರದ ಕುರಿತು ಮಾತನಾಡಿದ ಖರ್ಗೆ, ಉಮರ್ ಖಾಲಿದ್ ಎಷ್ಟು ದಿನಗಳಿಂದ ಜೈಲಿನಲ್ಲಿದ್ದಾನೆ? ಕೇಂದ್ರ ಸರ್ಕಾರ ಯಾಕೆ ವಿಚಾರಣೆ ನಡೆಸುತ್ತಿಲ್ಲ? ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪು ನೀಡಲಿ. ಆಗ ಎಲ್ಲರೂ ಆತ ಅಪರಾಧಿ ಎಂದು ಒಪ್ಪಿಕೊಳ್ಳುತ್ತಾರೆ. ಬಿಜೆಪಿ ಹೇಳಿದರೆ ನಾವು ಒಪ್ಪಿಕೊಳ್ಳಬೇಕೇ ಎಂದು ಪ್ರಶ್ನಿಸಿದರು.

ಟಿ. ನರಸೀಪುರ ಇನ್ಸ್‌ಪೆಕ್ಟರ್ ವಿರುದ್ಧದ ಹಳೆಯ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆದಿರಬೇಕು. ಅದಕ್ಕೂ ಇದಕ್ಕೂ ಏನು ಸಂಬಂಧ? ಅವರ ವಿರುದ್ಧ ಆರೋಪ ಇದ್ದರೆ ದೂರು ನೀಡಲಿ, ನಾವು ತನಿಖೆ ನಡೆಸುತ್ತೇವೆ ಎಂದರು.

ಗಣೇಶೋತ್ಸವ ಸೇರಿದಂತೆ ಹಬ್ಬಗಳ ಆಚರಣೆ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ನಮ್ಮ ಸಂಭ್ರಮ ಇತರರಿಗೆ ಆತಂಕ ಉಂಟುಮಾಡಬಾರದು. ಎಲ್ಲರೂ ವಿಜೃಂಭಣೆಯಿಂದ ಹಬ್ಬ ಆಚರಿಸಲಿ ಎಂದು ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande