
ಚಿಕ್ಕಬಳ್ಳಾಪುರ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪ್ರಜಾಪ್ರಭುತ್ವದ ತತ್ವ, ಆಶಯ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಾರಿಗೆ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ಚಿಕ್ಕಬಳ್ಳಾಪುರದ ಕನ್ನಡಭವನದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅಸಮಾನತೆ ಇರುವವರೆಗೆ ಮೀಸಲಾತಿ ಅಗತ್ಯ. ಹಿಂದುಳಿದವರು ಹಾಗೂ ದೀನದಲಿತರ ಸಬಲೀಕರಣಕ್ಕೆ ಮೀಸಲಾತಿ ಪ್ರಮುಖ ಸಾಧನವಾಗಿದೆ. ಮೀಸಲಾತಿ ತೆಗೆದುಹಾಕಿದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಉಳಿಯುವ ಸಾಧ್ಯತೆ ಇದೆ.
ಇದರಿಂದ ಅಸಮಾನತೆಯ ಕಂದಕ ಮತ್ತಷ್ಟು ವಿಸ್ತರಿಸಲಿದೆ ಎಂದು ಅವರು ಹೇಳಿದರು.“ಮೊದಲು ನಾವೆಲ್ಲರೂ ಭಾರತೀಯರು. ಭಾರತೀಯರಾಗಿಯೇ ಸಹಬಾಳ್ವೆಯಿಂದ ಜೀವನ ಸಾಗಿಸೋಣ. ನಂತರ ಜಾತಿ, ಧರ್ಮದ ಬಗ್ಗೆ ಚಿಂತಿಸೋಣ,” ಎಂದು ಬೈರತಿ ಸುರೇಶ್ ಕರೆ ನೀಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. “ಸಂವಿಧಾನವೇ ನಮಗೆ ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಇದ್ದಂತೆ. ಸಂವಿಧಾನ ದೇಶದ ಬೆನ್ನೆಲುಬಾದರೆ, ಅದರ ಪೀಠಿಕೆ ಆತ್ಮ,” ಎಂದು ಅವರು ಬಣ್ಣಿಸಿದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಹಲವು ಮೌಲ್ಯಗಳು ಸಂವಿಧಾನದಲ್ಲಿವೆ. ಅಸಮಾನತೆಯ ವ್ಯವಸ್ಥೆಯಲ್ಲಿ ಸಮಾನತೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಯುವ ಸಮುದಾಯದ ಪಾತ್ರ ಹಿರಿದುಈ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ವಿಷಯ ‘ಯುವ ಸಂಸತ್ತು’ ಆಗಿದ್ದು, ದಿನವನ್ನು ಅರ್ಥಪೂರ್ಣವಾಗಿಸಲು ರಾಜ್ಯಾದ್ಯಂತ ಯುವ ಸಂಸತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಹಾಗೂ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ.
ಯುವಕರು ಅತ್ಯಂತ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು. ಪ್ರಜಾಪ್ರಭುತ್ವದ ಆಶಯ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿ, ಸಮಾಜ ಮತ್ತು ದೇಶದ ಹಲವು ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಹೇಳಿದರು.
ಜಾತಿ, ಧರ್ಮ, ಭಾಷೆ ಹಾಗೂ ಸಂಸ್ಕೃತಿಯಲ್ಲಿ ಭಿನ್ನತೆಗಳಿದ್ದರೂ ಅವುಗಳನ್ನು ಮೀರಿ ಭಾರತೀಯರಾಗಿ ಹಾಗೂ ವಿಶ್ವಮಾನವರಾಗಿ ಬದುಕಬೇಕು. ಅಂತಹ ಮನೋಭಾವದಿಂದಲೇ ಸರ್ವಜನಾಂಗದ ಶಾಂತಿಯ ತೋಟದಂತಹ ಸಮಾಜ ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸರ್ ಎಂ.ವಿ. ಸಾಧನೆ ಸ್ಮರಣೆಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಾಧನೆ ಹಾಗೂ ದೇಶ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಸಚಿವರು ಸ್ಮರಿಸಿದರು.
ದೇಶ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯ ಅವರ ಸೇವೆ ಅನನ್ಯ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬ ಅವರ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
“ನಾನು ಮಾತನಾಡುವ ಮಂತ್ರಿಯಲ್ಲ, ಕೆಲಸ ಮಾಡುವ ಮಂತ್ರಿ. ಕೇವಲ ಭಾಷಣ ಮಾಡುತ್ತಾ ಹೋದರೆ ಕೆಲಸಗಳು ಆಗುವುದಿಲ್ಲ. ಮಾತಿಗಿಂತ ಕೃತಿ ಲೇಸು ಎಂಬುದನ್ನು ನಂಬಿದ್ದೇನೆ,” ಎಂದು ಬೈರತಿ ಸುರೇಶ್ ಹೇಳಿದರು.
ಜಿಲ್ಲೆಯ ಅಭಿವೃದ್ಧಿ ಹಾಗೂ ತಮಗೆ ವಹಿಸಿರುವ ಸಾರಿಗೆ ಇಲಾಖೆಯ ಉನ್ನತಿಗೆ ಅಗತ್ಯವಾದ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R