
ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನಾಯಕತ್ವದ ಹಾದಿಯಲ್ಲಿ ಅಡಚಣೆಗಳು ಸಹಜವಾಗಿದ್ದು, ಅವುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಹಾಗೂ ಸಾರ್ವಜನಿಕ ಜೀವನದ ಆರಂಭದ ದಿನಗಳನ್ನು ಸ್ಮರಿಸಿಕೊಂಡರು.
“ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ. ನಾನು ಏಳನೇ ತರಗತಿಯಿಂದ ಶಾಸಕನಾಗುವವರೆಗೂ ಅನೇಕ ಅಡಚಣೆಗಳನ್ನು ಎದುರಿಸಿ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದೇನೆ.
ಯುವಕರು ನಾಯಕರಾಗಲು ಮುಂದೆ ಬರಬೇಕು. ನಾಯಕನಾದವನು ನಾಯಕರನ್ನು ಸೃಷ್ಟಿಸಬೇಕು” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಏಳನೇ ತರಗತಿಯ ಶಾಲಾ ಚುನಾವಣೆ ಹಾಗೂ ಕಾಲೇಜು ಚುನಾವಣೆಗಳಲ್ಲಿಯೂ ತಮಗೆ ಅನ್ಯಾಯವಾಗಿತ್ತು. ಬಳಿಕ ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಯ ಟಿಕೆಟ್ ಕೂಡ ತಪ್ಪಿಸಲಾಗಿತ್ತು.
ಪದವಿ ಓದುವ ಸಂದರ್ಭದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸುವ ಅವಕಾಶ ದೊರೆತರೂ ಆ ಚುನಾವಣೆಯಲ್ಲಿ ಸೋತಿದ್ದಾಗಿ ಅವರು ಹೇಳಿದರು.
ನಂತರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಅಲ್ಲಿಂದ ತಮ್ಮ ರಾಜಕೀಯ ಪಯಣ ಮುಂದುವರಿಯಿತು ಎಂದು ಶಿವಕುಮಾರ್ ವಿವರಿಸಿದರು.
ನಾಯಕತ್ವದ ಗುಣ ಹೊಂದಿರುವವರಿಗೆ ಹಲವು ರೀತಿಯ ಅಡಚಣೆಗಳು ಎದುರಾಗುತ್ತವೆ. ಆದರೆ ಅವುಗಳನ್ನು ಮೆಟ್ಟಿ ನಿಂತು ಮುನ್ನಡೆಯುವ ಮೂಲಕ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ನೀಡಿದರು.
ಶಾಲಾ-ಕಾಲೇಜುಗಳಲ್ಲಿ ಮಾದರಿ ಸಂಸತ್ಗಳನ್ನು ನಡೆಸುವ ಮೂಲಕ ಯುವ ಸಂಸತ್ ನಿರ್ಮಿಸುವ ಆಶಯವಿದೆ.
ಈ ಮೂಲಕ ಬಸವಣ್ಣನವರ ಕಾಲದ ಅನುಭವ ಮಂಟಪದ ಚಿಂತನೆಗಳನ್ನು ಯುವಜನರಿಗೆ ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R