

ವಾರಣಾಸಿ, 13 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಭಾರತದ ಭಾಷಾ ವೈವಿಧ್ಯವನ್ನು ಪತ್ರಿಕೋದ್ಯಮದ ಶಕ್ತಿಯಾಗಿ ಪರಿವರ್ತಿಸುವ ಮೂಲಕ ಹಿಂದೂಸ್ಥಾನ ಸಮಾಚಾರವು ಬಹುಭಾಷಾ ಸುದ್ದಿಸೇವೆಯ ವಿಶಿಷ್ಟ ಮಾದರಿಯನ್ನು ರೂಪಿಸಿದೆ. ಏಕಕಾಲದಲ್ಲಿ 15 ಭಾಷೆಗಳಲ್ಲಿ ಸುದ್ದಿ ಒದಗಿಸುವ ವಿಶ್ವದ ಏಕೈಕ ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ಥಾನ ಸಮಾಚಾರವಾಗಿದೆ ಎಂದು ಹಿಂದೂಸ್ಥಾನ ಸಮಾಚಾರ ಸಮೂಹದ ಅಧ್ಯಕ್ಷ ಅರವಿಂದ ಭಾಲಚಂದ್ರ ಮಾರ್ಡೀಕರ್ ಹೇಳಿದರು.
ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಗಾಂಧಿ ಅಧ್ಯಯನ ಪೀಠ ಸಭಾಂಗಣದಲ್ಲಿ ಹಿಂದಿ ದಿನಾಚರಣೆಯ ಮುನ್ನಾದಿನ ಭಾನುವಾರ ಆಯೋಜಿಸಿದ್ದ ಭಾರತೀಯ ಭಾಷಾ ಸಮಾಗಮ-2026ರಲ್ಲಿ ಅವರು ಮಾತನಾಡಿದರು. ಹಿಂದೂಸ್ಥಾನ ಸಮಾಚಾರದ ವತಿಯಿಂದ ‘ಭಾರತೀಯ ಜ್ಞಾನ ಪರಂಪರೆ, ಪ್ರಾದೇಶಿಕ ಭಾಷೆಗಳು ಮತ್ತು ಸಮೃದ್ಧ ಭಾರತ’ ವಿಷಯದ ಕುರಿತು ಸಮಾಗಮ ಆಯೋಜಿಸಲಾಗಿತ್ತು.
ಅರವಿಂದ ಮಾರ್ಡೀಕರ್ ಮಾತನಾಡಿ, ಸಂಸ್ಥೆಯ ಸ್ಥಾಪನೆಯ ಮೂಲ ಉದ್ದೇಶ ಭಾರತದ ನಾಗರಿಕರಿಗೆ ಅವರದೇ ಭಾಷೆಯಲ್ಲಿ ಸರಿಯಾದ ಹಾಗೂ ನಿಖರ ಮಾಹಿತಿಯನ್ನು ತಲುಪಿಸುವುದಾಗಿತ್ತು. ಸ್ವಾತಂತ್ರ್ಯಾನಂತರ ಆರಂಭವಾದ ಈ ಪಯಣಕ್ಕೆ ಸುಮಾರು ಎಂಟು ದಶಕಗಳಾಗಿವೆ. ಇಂದು ಸಂಸ್ಥೆಯು 14 ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ಸುದ್ದಿಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಭಾರತದಂತಹ ಬಹುಭಾಷಾ ಮತ್ತು ಬಹುಸಂಸ್ಕೃತಿಯ ದೇಶದಲ್ಲಿ ಒಂದೇ ಸಮಯದಲ್ಲಿ ಇಷ್ಟೊಂದು ಭಾಷೆಗಳಲ್ಲಿ ಸುದ್ದಿ ಒದಗಿಸುವುದು ಕೇವಲ ಪತ್ರಿಕೋದ್ಯಮದ ಸಾಧನೆಯಲ್ಲ. ಇದು ಭಾಷಾ ಏಕತೆ ಮತ್ತು ವೈವಿಧ್ಯತೆಯ ಅತ್ಯುತ್ತಮ ಉದಾಹರಣೆಯೂ ಆಗಿದೆ ಎಂದು ಅವರು ಹೇಳಿದರು.
ಭಾಷೆಗಳನ್ನು ಸಾಮಾನ್ಯ ಮಾಹಿತಿ ವೇದಿಕೆಗೆ ಜೋಡಣೆ
ಭಾರತೀಯ ಭಾಷೆಗಳು ಕೇವಲ ಮಾತನಾಡಲು ಮತ್ತು ಸಂವಹನ ನಡೆಸಲು ಬಳಸುವ ಮಾಧ್ಯಮಗಳಲ್ಲ. ಅವುಗಳಲ್ಲಿ ಸಾವಿರಾರು ವರ್ಷಗಳ ಜ್ಞಾನ ಪರಂಪರೆ, ಸಂಸ್ಕೃತಿ, ಇತಿಹಾಸ ಹಾಗೂ ಸಾಮಾಜಿಕ ಅನುಭವಗಳು ಅಡಕವಾಗಿವೆ ಎಂದು ಮಾರ್ಡೀಕರ್ ಹೇಳಿದರು.
ಈ ವೈವಿಧ್ಯತೆಯನ್ನೇ ತನ್ನ ಶಕ್ತಿಯನ್ನಾಗಿ ಮಾಡಿಕೊಂಡಿರುವ ಹಿಂದೂಸ್ಥಾನ ಸಮಾಚಾರವು ವಿವಿಧ ಭಾಷೆಗಳಲ್ಲಿ ಸುದ್ದಿಗಳನ್ನು ಒದಗಿಸುವ ಮೂಲಕ ದೇಶದ ಬೇರೆ ಬೇರೆ ಭಾಷಾ ಸಮುದಾಯಗಳನ್ನು ಸಾಮಾನ್ಯ ಮಾಹಿತಿ ವೇದಿಕೆಗೆ ಜೋಡಿಸಿದೆ ಎಂದು ಅವರು ವಿವರಿಸಿದರು.
ಶಿವರಾಮ ಶಂಕರ ಆಪ್ಟೆ ಅವರು ಸ್ವತಂತ್ರ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅವರದೇ ಭಾಷೆಯಲ್ಲಿ ಸರಿಯಾದ ಮಾಹಿತಿ ದೊರೆಯಬೇಕು ಎಂಬ ಆಶಯದೊಂದಿಗೆ ಹಿಂದೂಸ್ಥಾನ ಸಮಾಚಾರವನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಸಂಸ್ಥೆಯ ಪ್ರಮುಖ ಪ್ರೇರಣಾಸ್ರೋತಗಳಲ್ಲಿ ಒಬ್ಬರಾಗಿದ್ದರು. ಮುಂಬೈನಿಂದ ಆರಂಭವಾದ ಈ ಪಯಣ ಇಂದು 15 ಭಾಷೆಗಳವರೆಗೆ ವಿಸ್ತರಿಸಿದೆ ಎಂದು ಅವರು ಹೇಳಿದರು.
ಟೆಲಿಪ್ರಿಂಟರ್‌ನಿಂದ ಡಿಜಿಟಲ್ ಜಗತ್ತಿನವರೆಗೆ
ಹಿಂದೂಸ್ಥಾನ ಸಮಾಚಾರದ ಪಯಣವನ್ನು ವಿವರಿಸಿದ ಮಾರ್ಡೀಕರ್, 1962ರ ಚೀನಾ ಯುದ್ಧ ಸೇರಿದಂತೆ ಹಲವು ಮಹತ್ವದ ಘಟನೆಗಳ ಸಂದರ್ಭದಲ್ಲಿ ಸಂಸ್ಥೆಯು ಸುದ್ದಿಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು.
ದೇವನಾಗರಿ ಲಿಪಿಯಲ್ಲಿ ಟೆಲಿಪ್ರಿಂಟರ್ ಸೇವೆ ಆರಂಭಿಸಿದ್ದು ಸಂಸ್ಥೆಯ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಆ ಕಾಲದಲ್ಲಿ ಮಾಹಿತಿ ಪ್ರಸಾರದ ಸಾಧನಗಳು ಸೀಮಿತವಾಗಿದ್ದವು. ಭಾರತೀಯ ಭಾಷೆಗಳಲ್ಲಿ ತ್ವರಿತವಾಗಿ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿತ್ತು ಎಂದು ತಿಳಿಸಿದರು.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸಂಸ್ಥೆ ಗಂಭೀರ ಸಂಕಷ್ಟ ಎದುರಿಸಿತು. 1975ರ ನಂತರ ಸಂಘರ್ಷ ಹೆಚ್ಚಾಯಿತು. 1983ರಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ವೀಕರಿಸುವಾಧಿಕಾರಿಯನ್ನು ನೇಮಿಸಲಾಯಿತು. ಆದರೂ ಸಿಬ್ಬಂದಿ ಹಾಗೂ ಸಹಯೋಗಿಗಳ ಸಂಸ್ಥೆಯ ಮೇಲಿನ ವಿಶ್ವಾಸ ಮುಂದುವರಿಯಿತು. ನ್ಯಾಯಾಲಯದ ಹೋರಾಟದ ಬಳಿಕ ಸಂಸ್ಥೆ ಮತ್ತೆ ತನ್ನ ಪಯಣವನ್ನು ಆರಂಭಿಸಿತು ಎಂದು ಮಾರ್ಡೀಕರ್ ಹೇಳಿದರು.
ದೇಶದಿಂದ ವಿಶ್ವದತ್ತ ವಿಸ್ತರಣೆಗೆ ಸಿದ್ಧತೆ
ಹಿಂದೂಸ್ಥಾನ ಸಮಾಚಾರವು ಇನ್ನು ಮುಂದೆ ಭಾರತಕ್ಕೆ ಮಾತ್ರ ಸೀಮಿತವಾಗಿರಲು ಬಯಸುವುದಿಲ್ಲ. ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅರವಿಂದ ಭಾಲಚಂದ್ರ ಮಾರ್ಡೀಕರ್ ಹೇಳಿದರು.
ರಷ್ಯಾದ ಸುದ್ದಿ ಸಂಸ್ಥೆಯೊಂದಿಗೆ ಕಾರ್ಯ ಆರಂಭವಾಗಿದ್ದು, ಜಪಾನ್‌ನ ಸುದ್ದಿ ಸಂಸ್ಥೆಯೊಂದಿಗೂ ಮಾತುಕತೆ ನಡೆಯುತ್ತಿದೆ. ಬ್ರಿಕ್ಸ್‌ಗೆ ಸಂಬಂಧಿಸಿದ ಅವಕಾಶಗಳಿಂದಲೂ ಹಿಂದೂಸ್ಥಾನ ಸಮಾಚಾರಕ್ಕೆ ಪ್ರಯೋಜನವಾಗುವ ನಿರೀಕ್ಷೆಯಿದೆ. ವಿಶ್ವಾಸಾರ್ಹ ಸುದ್ದಿ ಸಂಸ್ಥೆಯಾಗಿ ತನ್ನ ಪಾತ್ರವನ್ನು ಮತ್ತಷ್ಟು ವಿಸ್ತರಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ಅವರು ತಿಳಿಸಿದರು.
ರಾಷ್ಟ್ರವನ್ನು ಸರ್ವೋಚ್ಚ ಸ್ಥಾನದಲ್ಲಿರಿಸಿ, ವೈಯಕ್ತಿಕ ಹಿತಾಸಕ್ತಿಗಳನ್ನು ಮೀರಿ ಪತ್ರಿಕೋದ್ಯಮ ನಡೆಸುವುದು ಹಿಂದೂಸ್ಥಾನ ಸಮಾಚಾರದ ಮೂಲ ಆಶಯವಾಗಿದೆ ಎಂದು ಅವರು ಹೇಳಿದರು.
350ಕ್ಕೂ ಹೆಚ್ಚು ಪತ್ರಿಕೆಗಳಿಗೆ ಸುದ್ದಿ ಸೇವೆ
ಪ್ರಸಾರ ಭಾರತೀ, ದೂರದರ್ಶನ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಹಿಂದೂಸ್ಥಾನ ಸಮಾಚಾರದ ಗ್ರಾಹಕರಾಗಿವೆ ಎಂದು ಮಾರ್ಡೀಕರ್ ತಿಳಿಸಿದರು. ಸುದ್ದಿ ಅಂತರ್ಜಾಲ ತಾಣಗಳ ಜೊತೆಗೆ ಸುಮಾರು 350ಕ್ಕೂ ಹೆಚ್ಚು ಪತ್ರಿಕೆಗಳು ಸಂಸ್ಥೆಯ ಸುದ್ದಿಗಳನ್ನು ಬಳಸುತ್ತಿವೆ. ಸುದ್ದಿಸೇವೆಯ ಜತೆಗೆ ಡಿಜಿಟಲ್ ಕ್ಷೇತ್ರದಲ್ಲಿಯೂ ಸಂಸ್ಥೆಯು ತನ್ನ ಅಸ್ತಿತ್ವವನ್ನು ಬಲಪಡಿಸಿದೆ ಎಂದು ಹೇಳಿದರು.
ಹಿಂದಿ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಗೆ ಸಮರ್ಪಿತವಾದ ಮಾಸಿಕ ಪತ್ರಿಕೆ ‘ನವೋತ್ಥಾನ’ ಹಾಗೂ ಸಮಕಾಲೀನ ವಿಷಯಗಳನ್ನು ಆಧರಿಸಿದ ಪಾಕ್ಷಿಕ ಪತ್ರಿಕೆ ‘ಯುಗವಾರ್ತಾ’ವನ್ನೂ ಪ್ರಕಟಿಸಲಾಗುತ್ತಿದೆ. ಇವುಗಳ ಮೂಲಕ ಭಾರತೀಯ ಸಂಸ್ಕೃತಿ, ಸಮಕಾಲೀನ ಘಟನೆಗಳು ಮತ್ತು ವಿಚಾರಗಳನ್ನು ವಿಶಾಲ ಓದುಗರ ಬಳಗಕ್ಕೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಜಕೀಯ, ಅಪರಾಧದಾಚೆಗೂ ಪತ್ರಿಕೋದ್ಯಮದ ವ್ಯಾಪ್ತಿ ವಿಸ್ತರಿಸಲಿ
ಪತ್ರಿಕೋದ್ಯಮದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವಂತೆ ಮಾರ್ಡೀಕರ್ ಕರೆ ನೀಡಿದರು. ರಾಜಕೀಯ ಮತ್ತು ಅಪರಾಧಗಳ ಹೊರತಾಗಿ ಸಮಾಜದಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಸೇವೆ, ನವೋದ್ಯಮ, ಕಲೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಕಾರಾತ್ಮಕ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಸುದ್ದಿಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಯುವ ಪೀಳಿಗೆಯನ್ನು ಭಾರತದ ಇತಿಹಾಸ ಮತ್ತು ಜ್ಞಾನ ಪರಂಪರೆಯೊಂದಿಗೆ ಸಂಪರ್ಕಿಸುವ ಅಗತ್ಯವಿದೆ. ಯುವಕರಿಗೆ ಇತಿಹಾಸವನ್ನು ತಿಳಿಸುವುದರ ಜತೆಗೆ ಅವರಿಂದ ಹೊಸ ಮಾಹಿತಿಯನ್ನೂ ಪಡೆದು ಅದನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಅವರು ಸಲಹೆ ನೀಡಿದರು.
ಸಮಾಜದಲ್ಲಿ ಯಾವುದೇ ಸಕಾರಾತ್ಮಕ ಹಾಗೂ ಮಹತ್ವದ ಕಾರ್ಯ ನಡೆಯುತ್ತಿದ್ದರೆ ಅದರ ಮಾಹಿತಿಯನ್ನು ಹಿಂದೂಸ್ಥಾನ ಸಮಾಚಾರದ ಸ್ಥಳೀಯ ಕಚೇರಿಗಳಿಗೆ ನೀಡಬೇಕು ಎಂದು ಮಾರ್ಡೀಕರ್ ಮನವಿ ಮಾಡಿದರು. ಅಂತಹ ಸುದ್ದಿಗಳನ್ನು ಸಂಬಂಧಪಟ್ಟ ವ್ಯಕ್ತಿಯ ಹೆಸರಿನೊಂದಿಗೆ ವ್ಯಾಪಕ ವೇದಿಕೆಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಹಿಂದೂಸ್ಥಾನ ಸಮಾಚಾರ ಇನ್ನೂ ಬಹಳ ದೂರ ಸಾಗಬೇಕಿದೆ. ಗುರಿ ಸ್ಪಷ್ಟವಾಗಿದ್ದು, ಸವಾಲುಗಳ ಅರಿವೂ ಇದೆ. ರಾಷ್ಟ್ರವನ್ನು ಸರ್ವೋಚ್ಚ ಸ್ಥಾನದಲ್ಲಿರಿಸಿ ವಿಶ್ವಾಸಾರ್ಹ ಪತ್ರಿಕೋದ್ಯಮದ ಈ ಪಯಣ ಮುಂದುವರಿಯಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕಾಶಿಯಿಂದ ವಿಶ್ವಕ್ಕೆ ಭಾಷಾ ಪತ್ರಿಕೋದ್ಯಮದ ಸಂದೇಶ
ಭಾರತೀಯ ಭಾಷಾ ಸಮಾಗಮ-2026ರಲ್ಲಿ ಹಿಂದೂಸ್ಥಾನ ಸಮಾಚಾರದ 15 ಭಾಷೆಗಳ ಪಯಣವನ್ನು ಭಾರತೀಯ ಭಾಷಾ ವೈವಿಧ್ಯದ ಶಕ್ತಿಯ ಪ್ರತೀಕವಾಗಿ ಪ್ರಸ್ತುತಪಡಿಸಲಾಯಿತು. ಕಾಶಿಯಿಂದ ಭಾಷೆ ಕೇವಲ ಗುರುತಿನ ಮಾಧ್ಯಮವಲ್ಲ; ಜ್ಞಾನ, ಮಾಹಿತಿ ಮತ್ತು ಅಭಿವೃದ್ಧಿಯ ಶಕ್ತಿಯೂ ಹೌದು ಎಂಬ ಸಂದೇಶ ರವಾನೆಯಾಯಿತು.
ಭಾರತೀಯ ಭಾಷೆಗಳಲ್ಲಿ ಅಡಗಿರುವ ಅಪಾರ ಜ್ಞಾನ ಸಂಪತ್ತನ್ನು ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಸಂವಹನ ಮಾಧ್ಯಮಗಳೊಂದಿಗೆ ಜೋಡಿಸುವ ಮೂಲಕ ಭಾರತೀಯ ಭಾಷೆಗಳಿಗೆ ಜಾಗತಿಕ ಜ್ಞಾನ ಚರ್ಚೆಯಲ್ಲಿ ಹೊಸ ಸ್ಥಾನ ಕಲ್ಪಿಸಬಹುದು. ಹಿಂದೂಸ್ಥಾನ ಸಮಾಚಾರದ ಬಹುಭಾಷಾ ಮಾದರಿ ಇದೇ ದಿಕ್ಕಿನಲ್ಲಿ ಭಾರತೀಯ ಪತ್ರಿಕೋದ್ಯಮದ ವಿಶಿಷ್ಟ ಪ್ರಯೋಗವಾಗಿ ಹೊರಹೊಮ್ಮಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.