
ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಮಾದರಿಯಾಗುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನೀತಿ, ಗ್ಯಾರಂಟಿ ಯೋಜನೆಗಳು ಹಾಗೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಕುರಿತು ವಿವರಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಆರಂಭದಲ್ಲಿ ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಇಂದು ಕರ್ನಾಟಕದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸುತ್ತಿವೆ. ಅಮೆರಿಕದಲ್ಲಿಯೂ ಇದೇ ರೀತಿಯ ಆಲೋಚನೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಶಿವಕುಮಾರ್ ಹೇಳಿದರು.
“ನನಗೆ ಮತ ಹಾಕಿ, ಇಂತಿಷ್ಟು ಡಾಲರ್ ಹಣ ನೀಡುತ್ತೇನೆ ಎಂಬ ರೀತಿಯ ಭರವಸೆಗಳನ್ನು ನೀಡಲಾಗುತ್ತಿದೆ. ನಮ್ಮ ಆಲೋಚನೆಗಳು ಇಡೀ ವಿಶ್ವಕ್ಕೆ ಪರಿಚಯವಾಗುತ್ತಿವೆ” ಎಂದರು.
ಗ್ಯಾರಂಟಿ ಯೋಜನೆಗಳನ್ನು ಪಕ್ಷ, ಜಾತಿ ಎಂಬ ಭೇದವಿಲ್ಲದೆ ಎಲ್ಲರಿಗೂ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಗಳ ಸಂಖ್ಯೆ 1.34 ಲಕ್ಷವಾಗಿದ್ದರೂ, 4.44 ಕೋಟಿ ಜನರಿಗೆ ಅನ್ನಭಾಗ್ಯ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಜನರ ನಡುವೆ ಇದ್ದರೆ ಜಾತಿ ಕೇಳುವುದಿಲ್ಲ
ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ. ಜನರ ನಡುವೆ ಇರುವ ನಾಯಕನಿಗೆ ಜನರು ಜಾತಿ ಕೇಳುವುದಿಲ್ಲ. ನಾಯಕ ಕ್ರಿಯಾಶೀಲನಾಗಿದ್ದರೆ ಜನರು ಗೆಲ್ಲಿಸುತ್ತಾರೆ. ಕೆಲವರು ಭಾವನೆಗಳ ಆಧಾರದ ಮೇಲೆ ಜಾತಿ ರಾಜಕಾರಣ ಮಾಡುತ್ತಾರೆ. ತಮಗೆ ಜಾತಿಗಿಂತ ನೀತಿ ಮತ್ತು ಸಿದ್ಧಾಂತದ ಮೇಲೆ ನಂಬಿಕೆ ಇದೆ ಎಂದು ಶಿವಕುಮಾರ್ ಹೇಳಿದರು.
“ನನಗೆ ಶ್ರಮ, ಸಿದ್ಧಾಂತ ಮತ್ತು ಕಾಯಕದ ಮೇಲೆ ನಂಬಿಕೆ ಇದೆ. ಶ್ರಮ ಇರುವ ಕಡೆ ಫಲವಿದೆ. ಒಂಟಿಯಾಗಿರುವ ನಾಯಕ ಎಂದಿಗೂ ಗೆಲುವು ಕಾಣುವುದಿಲ್ಲ” ಎಂದರು.
ವಿವಿಧ ಕ್ಷೇತ್ರಗಳ ಚುನಾವಣಾ ಉದಾಹರಣೆಗಳನ್ನು ನೀಡಿದ ಅವರು, ಜಾತಿಯ ಲೆಕ್ಕಾಚಾರಕ್ಕಿಂತ ಜನರ ವಿಶ್ವಾಸ ಮತ್ತು ನಾಯಕನ ಕೆಲಸ ಮುಖ್ಯ ಎಂದು ಹೇಳಿದರು.
ಪಂಚಾಯಿತಿ ಮಟ್ಟದಲ್ಲಿ 70 ಸಾವಿರ ಜನರಿಗೆ ಅಧಿಕಾರ
ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿಯೂ ಜನರಿಗೆ ಅಧಿಕಾರ ನೀಡಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
“ಪ್ರತಿ ಪಂಚಾಯಿತಿಯಲ್ಲೂ ಆರು ಜನರಿಗೆ ಗ್ಯಾರಂಟಿ ಸಮಿತಿಯಲ್ಲಿ ಇರಲು ಅವಕಾಶ ನೀಡಲಾಗಿದೆ. ಇದರಿಂದ ಸುಮಾರು 70 ಸಾವಿರ ಜನರಿಗೆ ಅಧಿಕಾರ ಸಿಗಲಿದೆ. ವಿಧಾನಸೌಧಕ್ಕೆ ಬಂದು ಜನರ ಸೇವೆ ಮಾಡಲು ನಿಮಗೆ ಅವಕಾಶ ಸಿಗಲಿದೆ” ಎಂದರು.
ಯುವಕರು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಕೌಶಲ್ಯ ಅಗತ್ಯ. ಕೌಶಲ್ಯ ಹೊಂದಿದವರಿಗೆ ಉದ್ಯೋಗದ ಅವಕಾಶಗಳು ಹೆಚ್ಚಾಗಲಿವೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ದುಡಿಯುವವರಿಗೆ ಅವಕಾಶ
ಕಾಂಗ್ರೆಸ್ ಪಕ್ಷದಲ್ಲಿ ಹಳಬರು, ಹೊಸಬರು ಎಂಬ ಭೇದವಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಅವಕಾಶ ನೀಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋತ ನಂತರವೂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಹಲವು ಮಂದಿ ಬೇರೆ ಪಕ್ಷಗಳಿಂದ ಬಂದವರಿಗೂ ಕಾಂಗ್ರೆಸ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿಗೆ ಕಾಂಗ್ರೆಸ್‌ನಿಂದ 13 ಮಂದಿಯನ್ನು ಕರೆದುಕೊಂಡು ಹೋಗಲಾಗಿತ್ತು. ಅವರಲ್ಲಿ ಕೆಲವರು ಮಾತ್ರ ಸಕ್ರಿಯವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂದವರಿಗೆ ಇಲ್ಲಿ ರಾಜಕೀಯವಾಗಿ ಬದುಕಲು ಅವಕಾಶವಿದೆ ಎಂದು ಹೇಳಿದರು.
ಬಿಜೆಪಿ ಹಾಗೂ ಜನತಾದಳದ ಹಲವು ನಾಯಕರು ತಮ್ಮೊಂದಿಗೆ ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರ ಮೇಲೆ ನಂಬಿಕೆ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಲು ಜಿಲ್ಲಾ ಸಚಿವರು ಹಾಗೂ ನಾಯಕರಿಗೆ ಅಧಿಕಾರ ನೀಡಲಾಗಿದೆ. ಪಕ್ಷಕ್ಕೆ ಬರುವವರಿಗೆ ಸೂಕ್ತ ಅವಕಾಶ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ: ವಿಶ್ವಾಸ
ಭಾರತ್ ಜೋಡೋ ಪಾದಯಾತ್ರೆ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವ ಸಂದೇಶ ನೀಡಲಾಗಿದೆ. ಪಾದಯಾತ್ರೆ ನಡೆದ ಹಲವು ಪ್ರದೇಶಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದೇ ಅಲೆ 2028ರಲ್ಲಿಯೂ ಮುಂದುವರಿಯಲಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಶಿವಕುಮಾರ್ ಹೇಳಿದರು.
ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆ ಸೇರಿದಂತೆ ದೇಶಕ್ಕೆ ಹಲವು ಕೊಡುಗೆಗಳನ್ನು ಕಾಂಗ್ರೆಸ್ ನೀಡಿದೆ. ಬಡವರ ಪರವಾಗಿ ಆಲೋಚಿಸುವುದು ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದರು.
‘ಮಾನವೀಯತೆಯೇ ಕಾಂಗ್ರೆಸ್‌ನ ಆಧಾರ ಸ್ತಂಭ’
ಎಲ್ಲ ಜಾತಿಗಳೂ ಸಮಾನ ಎಂಬ ನಂಬಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ಶಾಲೆಗಳಲ್ಲಿ ಯಾರೂ ಜಾತಿ ಕೇಳುವುದಿಲ್ಲ. ಎಲ್ಲರ ರಕ್ತ ಕೆಂಪು, ಬೆವರು ಉಪ್ಪು. ಮಾನವೀಯತೆಯೇ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ ಎಂದು ಶಿವಕುಮಾರ್ ಹೇಳಿದರು.
ಯುವಕರು ಭಾರತ್ ಜೋಡೋ ಸಂಘಗಳನ್ನು ಸದುಪಯೋಗಪಡಿಸಿಕೊಂಡು ನಾಟಕ, ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯುವಕರು ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.
‘ಪಂಕ್ಚರ್ ಹಾಕದಿದ್ದರೆ ಗಾಡಿ ಓಡುತ್ತದೆಯೇ?’
ಅಲ್ಪಸಂಖ್ಯಾತರ ಕುರಿತು ನಡೆಯುತ್ತಿರುವ ರಾಜಕೀಯ ಟೀಕೆಗಳಿಗೂ ಶಿವಕುಮಾರ್ ಪ್ರತಿಕ್ರಿಯಿಸಿದರು.
“ಈ ದೇಶದ ಅಲ್ಪಸಂಖ್ಯಾತರನ್ನು ವೈರಿಗಳಂತೆ ನೋಡಲಾಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಇಲಾಖೆಯನ್ನು ಮುಚ್ಚಿಬಿಡಲಿ. ದೇಶದಿಂದ ಹೊರಗೆ ಹೋಗಿ ಎಂದು ಹೇಳಲು ಸಾಧ್ಯವೇ? ಅವರ ಜನಸಂಖ್ಯೆ ಶೇ.13ರಷ್ಟಿದೆ” ಎಂದರು.
ಅಲ್ಪಸಂಖ್ಯಾತರನ್ನು ಪಂಕ್ಚರ್ ಹಾಕುವವರು ಎಂದು ಕರೆದವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಆತ ಪಂಕ್ಚರ್ ಹಾಕದಿದ್ದರೆ ಅವನ ಗಾಡಿ ಓಡುತ್ತದೆಯೇ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಪ್ರಜಾಸೇವೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.
‘ದುಡಿಯುವ ಕಾರ್ಯಕರ್ತರಿಗೆ ಅವಕಾಶ’
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನರೇಂದ್ರಬಾಬು ಅವರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತಂದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತನ ನಿಷ್ಠೆಯೇ ನಾಯಕನ ಗೆಲುವಿಗೆ ಕಾರಣ. ಪಕ್ಷಕ್ಕಾಗಿ ದುಡಿಯುವ ಎಲ್ಲ ಕಾರ್ಯಕರ್ತರಿಗೂ ಅವಕಾಶವಿದೆ. ಆದರೆ ತಾಳ್ಮೆ ಇರಬೇಕು ಎಂದು ಶಿವಕುಮಾರ್ ಹೇಳಿದರು.
ತಾವು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನಗಳನ್ನು ಸ್ಮರಿಸಿದ ಅವರು, ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಸೂಕ್ತ ಸಮಯದಲ್ಲಿ ಗುರುತಿಸಿ ಅವಕಾಶ ನೀಡಲಾಗುತ್ತದೆ ಎಂದರು.
“ಶ್ರಮ ಇರುವ ಕಡೆ ಫಲ ಇರುತ್ತದೆ. ಪಕ್ಷಕ್ಕಾಗಿ ಕೆಲಸ ಮಾಡಿದರೆ ಅವರನ್ನು ಗುರುತಿಸುವ ಕೆಲಸ ಪಕ್ಷ ಮಾಡಲಿದೆ” ಎಂದು ಹೇಳಿದರು.
ದೇಶವನ್ನು ಉಳಿಸಲು ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಬೇರೆ ಪರ್ಯಾಯವಿಲ್ಲ. ಕಳೆದ 13 ವರ್ಷಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶ ನೀಡಲಾಗಿದೆ. ಇದೀಗ ಯುವಜನತೆ ಕಾಂಗ್ರೆಸ್‌ನತ್ತ ಎದುರು ನೋಡುತ್ತಿದ್ದು, ಅವರಿಗೆ ಅವಕಾಶ ನೀಡುವುದು ಅಗತ್ಯ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಯುವ ಪೀಳಿಗೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಮೂಲಕ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.