ಸೆ.14ರಂದು ಮುಂಬೈನಲ್ಲಿ ಹಿಂದಿ ದಿನ, ಆರನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನ ಉದ್ಘಾಟಿಸಲಿರುವ ಅಮಿತ್ ಶಾ
ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸೆ.14ರಂದು ಮುಂಬೈನಲ್ಲಿ ನಡೆಯಲಿರುವ ಹಿಂದಿ ದಿನಾಚರಣೆ ಹಾಗೂ ಆರನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದ
अमित शाह


ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸೆ.14ರಂದು ಮುಂಬೈನಲ್ಲಿ ನಡೆಯಲಿರುವ ಹಿಂದಿ ದಿನಾಚರಣೆ ಹಾಗೂ ಆರನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ರಾಜಭಾಷೆ ಹಿಂದಿಯ ಅಭಿವೃದ್ಧಿ, ಭಾರತೀಯ ಭಾಷೆಗಳೊಂದಿಗೆ ಸಮನ್ವಯ, ಭಾಷೆ ಮತ್ತು ತಂತ್ರಜ್ಞಾನ, ಅನುವಾದ ಹಾಗೂ ಹಿಂದಿಯ ವ್ಯಾಪಕ ಪ್ರಸಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಉದ್ಘಾಟನಾ ಅಧಿವೇಶನದಲ್ಲಿ 2025-26ನೇ ಸಾಲಿನ ‘ರಾಜಭಾಷಾ ಗೌರವ’ ಮತ್ತು ‘ರಾಜಭಾಷಾ ಕೀರ್ತಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಸಚಿವಾಲಯದ ರಾಜಭಾಷಾ ಇಲಾಖೆ 2021ರಿಂದ ಪ್ರತಿವರ್ಷ ಅಖಿಲ ಭಾರತ ರಾಜಭಾಷಾ ಸಮ್ಮೇಳನ ಆಯೋಜಿಸುತ್ತಿದೆ. ವಾರಾಣಸಿಯಲ್ಲಿ ಆರಂಭಗೊಂಡ ಈ ಸಮ್ಮೇಳನದ ಪಯಣ ಸೂರತ್, ಪುಣೆ, ನವದೆಹಲಿ ಹಾಗೂ ಗಾಂಧಿನಗರದ ಬಳಿಕ ಈ ವರ್ಷ ಮಹಾರಾಷ್ಟ್ರಕ್ಕೆ ತಲುಪಿದೆ.

ಸಮ್ಮೇಳನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿಗಳು, ಸಂಸದರು, ವಿದ್ವಾಂಸರು, ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ರಾಜಭಾಷಾ ಪ್ರಶಸ್ತಿಗಳ ಪ್ರದಾನ

ರಾಜಭಾಷಾ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ಹಾಗೂ ಗಮನಾರ್ಹ ಕೊಡುಗೆ ನೀಡಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ 2025-26ನೇ ಸಾಲಿನ ‘ರಾಜಭಾಷಾ ಗೌರವ’ ಹಾಗೂ ‘ರಾಜಭಾಷಾ ಕೀರ್ತಿ’ ಪ್ರಶಸ್ತಿಗಳನ್ನು ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರದಾನ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಹಲವು ಪುಸ್ತಕಗಳು ಹಾಗೂ ಪ್ರಕಟಣೆಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಕುರಿತ ರಾಜಭಾಷಾ ಇಲಾಖೆಯ ‘ರಾಜಭಾಷಾ ಭಾರತಿ’ ಪತ್ರಿಕೆಯ ವಿಶೇಷ ಸ್ಮರಣ ಸಂಚಿಕೆ, ‘ಭಾರತೀಯ ಜ್ಞಾನತಂತ್ರ: ಮೂಲಗಳು ಮತ್ತು ಸ್ವರೂಪ’, ‘ಶಿವ ಅನಾದಿ, ಅನಂತ’ ಹಾಗೂ ಜೈಲು ಕೈದಿಗಳ ಬರಹಗಳ ಸಂಕಲನ ‘ಅಂಧಕಾರದಿಂದ ಬೆಳಕಿನೆಡೆಗೆ’ ಪ್ರಮುಖ ಪ್ರಕಟಣೆಗಳಾಗಿವೆ.

‘ವಂದೇ ಮಾತರಂ’ ಕುರಿತು ವಿಶೇಷ ಚರ್ಚೆ

ಸಮ್ಮೇಳನದ ಪ್ರಮುಖ ಆಕರ್ಷಣೆ ‘ವಂದೇ ಮಾತರಂ’ ಕುರಿತ ವಿಶೇಷ ವಿಚಾರಗೋಷ್ಠಿಯಾಗಿರಲಿದೆ. ಇದರಲ್ಲಿ ಹಿನ್ನೆಲೆ ಗಾಯಕ ಹರಿಹರನ್, ಹಿರಿಯ ಪತ್ರಕರ್ತ ಹಾಗೂ ಲೇಖಕ ನೀಲೇಶ್ ಮಿಶ್ರಾ ಮತ್ತು ‘ವಂದೇ ಮಾತರಂ’ ಕುರಿತು ಅಧ್ಯಯನ ನಡೆಸುತ್ತಿರುವ ಅಖಿಲೇಶ್ ಮಿಶ್ರಾ ಭಾಗವಹಿಸಲಿದ್ದಾರೆ.

ಸಂಶೋಧಕ ಮಿಲಿಂದ್ ಪ್ರಭಾಕರ್ ಸಬ್ನಿಸ್ ಅವರು ರಾಷ್ಟ್ರೀಯ ಗೀತೆಯ ಐತಿಹಾಸಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಕುರಿತು ಚರ್ಚಿಸಲಿದ್ದಾರೆ. ‘ವಂದೇ ಮಾತರಂ’ ರಚನೆಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಐದನೇ ತಲೆಮಾರಿನ ವಂಶಸ್ಥ ಜಯದೀಪ್ ಚಟ್ಟೋಪಾಧ್ಯಾಯ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ರಾಜಭಾಷಾ ಅನುಷ್ಠಾನ ಸಮಿತಿಗಳ ಪಾತ್ರದ ಕುರಿತು ಚರ್ಚೆ

ನಗರ ರಾಜಭಾಷಾ ಅನುಷ್ಠಾನ ಸಮಿತಿಗಳ ಪಾತ್ರದ ಕುರಿತು ಸಮ್ಮೇಳನದಲ್ಲಿ ವಿಶೇಷ ಅಧಿವೇಶನವೂ ನಡೆಯಲಿದೆ. ರಾಜಭಾಷೆ ಹಿಂದಿಯ ಅನುಷ್ಠಾನದಲ್ಲಿ ಈ ಸಮಿತಿಗಳ ಕಾರ್ಯವೈಖರಿ ಮತ್ತು ಸಾಧನೆಗಳ ಕುರಿತು ಚರ್ಚಿಸಲಾಗುತ್ತದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಮಿತಿಗಳಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ.

ಸೆ.15ರಂದು ನಡೆಯಲಿರುವ ಸಮ್ಮೇಳನದ ಎರಡನೇ ದಿನದ ವಿಶೇಷ ಅಧಿವೇಶನದಲ್ಲಿ ಗೀತರಚನೆಕಾರ ಹಾಗೂ ಲೇಖಕ ಮನೋಜ್ ಮುಂತಶಿರ್ ಭಾಗವಹಿಸಲಿದ್ದಾರೆ. ಬಳಿಕ ಮಹಾರಾಷ್ಟ್ರ ಸರ್ಕಾರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ.

32 ಮಳಿಗೆಗಳ ಪ್ರದರ್ಶನ

ಸಮ್ಮೇಳನದ ಸ್ಥಳದಲ್ಲಿ ಆಯೋಜಿಸಲಾಗಿರುವ ಪ್ರದರ್ಶನದಲ್ಲಿ ವಿವಿಧ ಸಂಸ್ಥೆಗಳು, ಸಂಘಟನೆಗಳು, ಬ್ಯಾಂಕ್‌ಗಳು ಹಾಗೂ ಸಚಿವಾಲಯಗಳ ಒಟ್ಟು 32 ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಹಿಂದಿ ಮತ್ತು ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಕಾರ್ಯಗಳು, ಪ್ರಕಟಣೆಗಳು, ವಿವಿಧ ಉಪಕ್ರಮಗಳು ಹಾಗೂ ಸಾಧನೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಎರಡು ದಿನಗಳ ಸಮ್ಮೇಳನದಲ್ಲಿ ಹಿಂದಿಯನ್ನು ರಾಜಭಾಷೆ, ಜನಭಾಷೆ ಹಾಗೂ ಸಂಪರ್ಕ ಭಾಷೆಯಾಗಿ ಅಭಿವೃದ್ಧಿಪಡಿಸುವುದು, ಭಾರತೀಯ ಭಾಷೆಗಳೊಂದಿಗೆ ಅದರ ಸಮನ್ವಯ, ತಂತ್ರಜ್ಞಾನ ಮತ್ತು ಭಾಷೆ, ಅನುವಾದ, ಸಾಹಿತ್ಯ ಹಾಗೂ ಹಿಂದಿಯ ಪ್ರಸಾರ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.

ಸಂವಿಧಾನದ 343ನೇ ವಿಧಿಯಲ್ಲಿ ಒಕ್ಕೂಟದ ರಾಜಭಾಷೆಯಾಗಿ ಹಿಂದಿ ಹಾಗೂ ಅದರ ಲಿಪಿಯಾಗಿ ದೇವನಾಗರಿಯನ್ನು ನಿಗದಿಪಡಿಸಲಾಗಿದೆ. 351ನೇ ವಿಧಿಯಲ್ಲಿ ಹಿಂದಿಯ ಪ್ರಸಾರ, ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಣೆಯನ್ನು ಒಕ್ಕೂಟ ಸರ್ಕಾರದ ಮೇಲೆ ವಹಿಸಲಾಗಿದೆ. ಈ ಸಾಂವಿಧಾನಿಕ ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳ ನಡುವಿನ ಸಂವಾದ ಮತ್ತು ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಸಮ್ಮೇಳನದಲ್ಲಿ ಒತ್ತು ನೀಡಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande