
ವಾರಣಾಸಿ, 13 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಇಂಗ್ಲಿಷ್ ಮಾತನಾಡುವವರನ್ನು ವಿದ್ವಾಂಸರೆಂದು ಹಾಗೂ ತಮ್ಮದೇ ಭಾಷೆಯಲ್ಲಿ ಮಾತನಾಡುವವರನ್ನು ಕೀಳು ಎಂದು ಪರಿಗಣಿಸುವ ಮನೋಭಾವ ಬದಲಾಗಬೇಕು ಎಂದು ಹಿಮಾಚಲ ಪ್ರದೇಶ ಕೇಂದ್ರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕುಲದೀಪ್ ಚಂದ್ ಅಗ್ನಿಹೋತ್ರಿ ಹೇಳಿದರು.
ಹಿಂದಿ ದಿನಾಚರಣೆಯ ಮುನ್ನಾದಿನ ಹಿಂದೂಸ್ಥಾನ ಸಮಾಚಾರ ಸುದ್ದಿ ಸಂಸ್ಥೆ ವತಿಯಿಂದ ಭಾನುವಾರ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಗಾಂಧಿ ಅಧ್ಯಯನ ಪೀಠ ಸಭಾಂಗಣದಲ್ಲಿ ಆಯೋಜಿಸಿದ್ದ ‘ಭಾರತೀಯ ಜ್ಞಾನ ಪರಂಪರೆ, ಪ್ರಾದೇಶಿಕ ಭಾಷೆಗಳು ಮತ್ತು ಸಮೃದ್ಧ ಭಾರತ’ ವಿಷಯದ ಭಾರತೀಯ ಭಾಷಾ ಸಮಾಗಮ-2026ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತದ ಪ್ರಾಚೀನ ಜ್ಞಾನ ಮತ್ತು ಆಧುನಿಕ ಜ್ಞಾನದ ನಡುವೆ ನಿರ್ಮಾಣವಾಗಿರುವ ಅಂತರವನ್ನು ನಿವಾರಿಸುವ ಅಗತ್ಯವಿದೆ ಎಂದು ಹೇಳಿದರು.
ಭಾರತದ ಪುರಾತನ ಜ್ಞಾನ ಮತ್ತು ಆಧುನಿಕ ಜ್ಞಾನದ ನಡುವೆ ಗೋಡೆಯೊಂದು ನಿರ್ಮಾಣವಾಗಿದೆ. ಈ ಗೋಡೆಯನ್ನು ಒಡೆದು ಎರಡೂ ಜ್ಞಾನಧಾರೆಗಳನ್ನು ಪರಸ್ಪರ ಜೋಡಿಸುವುದು ಇಂದು ಎದುರಾಗಿರುವ ಪ್ರಮುಖ ಸವಾಲಾಗಿದೆ. ಆರು ಸಾವಿರ ಅಥವಾ ಹತ್ತು ಸಾವಿರ ವರ್ಷಗಳ ಹಿಂದಕ್ಕೆ ಹೋಗಿ ಅಲ್ಲಿಯೇ ಉಳಿಯಬೇಕಿಲ್ಲ. ಬದಲಾಗಿ ನಮ್ಮ ಪ್ರಾಚೀನ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನ ಮತ್ತು ಶಿಕ್ಷಣದೊಂದಿಗೆ ಜೋಡಿಸಬೇಕು. ಇದರಿಂದ ಸನಾತನ ಜ್ಞಾನದ ಪ್ರವಾಹ ಮುಂದುವರಿಯುವುದರ ಜತೆಗೆ ದೇಶಕ್ಕೆ ಹೊಸ ಪ್ರಯೋಜನ ದೊರೆಯಲಿದೆ ಎಂದು ಅವರು ಹೇಳಿದರು.
ಭಾರತೀಯ ಜ್ಞಾನ ಪರಂಪರೆಯನ್ನು ಸೀಮಿತಗೊಳಿಸಬಾರದು
ಭಾರತೀಯ ಜ್ಞಾನ ಪರಂಪರೆಯನ್ನು ಕೇವಲ ತತ್ತ್ವ, ಆತ್ಮ ಮತ್ತು ಪರಮಾತ್ಮಕ್ಕೆ ಸೀಮಿತಗೊಳಿಸುವುದು ಅದರ ವಿಶಾಲ ಸ್ವರೂಪವನ್ನು ಕುಗ್ಗಿಸಿದಂತಾಗುತ್ತದೆ ಎಂದು ಡಾ. ಅಗ್ನಿಹೋತ್ರಿ ಹೇಳಿದರು.
ಗಣಿತ, ರಸಾಯನ ವಿಜ್ಞಾನ, ಸಸ್ಯಶಾಸ್ತ್ರ, ವೈದ್ಯಕೀಯ ವಿಜ್ಞಾನ ಹಾಗೂ ಖಗೋಳ ವಿಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ಮಹತ್ವದ ಜ್ಞಾನವನ್ನು ಹೊಂದಿತ್ತು. ಈ ಜ್ಞಾನವನ್ನು ಹುಡುಕಬೇಕು, ಅರ್ಥಮಾಡಿಕೊಳ್ಳಬೇಕು ಹಾಗೂ ಆಧುನಿಕ ಸಂದರ್ಭಕ್ಕೆ ಅನುಗುಣವಾಗಿ ಅದರ ಮೌಲ್ಯಮಾಪನ ಮಾಡಬೇಕು ಎಂದು ಅವರು ಹೇಳಿದರು.
ಕಾಶಿ ಕೇವಲ ನಂಬಿಕೆ ಮತ್ತು ಅಧ್ಯಾತ್ಮದ ನಗರವಾಗಿ ಉಳಿಯದೆ, ಭಾರತೀಯ ಜ್ಞಾನ ಪರಂಪರೆ ಮತ್ತು ಆಧುನಿಕ ಜ್ಞಾನದ ನಡುವೆ ಮುರಿದುಹೋಗಿರುವ ಸೇತುವೆಯನ್ನು ಮರುಜೋಡಿಸುವ ಕೇಂದ್ರವಾಗಬಹುದು. ಪುರಾತನ ಜ್ಞಾನವನ್ನು ವರ್ತಮಾನದ ಜ್ಞಾನದೊಂದಿಗೆ ಜೋಡಿಸಿ ಹೊಸ ಪೀಳಿಗೆಗೆ ತಲುಪಿಸುವ ದೊಡ್ಡ ಪ್ರಯೋಗ ಕಾಶಿಯಿಂದಲೇ ಆರಂಭವಾಗಬೇಕು. ಇಲ್ಲಿಂದ ಭಾರತೀಯ ಜ್ಞಾನ ಪರಂಪರೆಯ ಪುನರುಜ್ಜೀವನದ ಹೊಸ ಧಾರೆ ದೇಶಾದ್ಯಂತ ಹರಿಯಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜ್ಞಾನದ ಸೇತುವೆಯಲ್ಲಿ ಭಾಷೆ ಪ್ರಮುಖ ಕೊಂಡಿ
ಭಾರತೀಯ ಜ್ಞಾನ ಪರಂಪರೆಗೆ ಸೇರಿದ ಹೆಚ್ಚಿನ ಸಂಖ್ಯೆಯ ಹಸ್ತಪ್ರತಿಗಳು ಸಂಸ್ಕೃತದಲ್ಲಿವೆ. ಆದರೆ ಆಧುನಿಕ ವಿಷಯಗಳ ತಜ್ಞರಿಗೆ ಸಂಸ್ಕೃತದ ಬಗ್ಗೆ ಸಾಕಷ್ಟು ಪರಿಚಯವಿಲ್ಲ. ಭೌತಶಾಸ್ತ್ರದ ಪ್ರಾಧ್ಯಾಪಕರಿಗೆ ಸಂಸ್ಕೃತ ತಿಳಿದಿರುವುದಿಲ್ಲ; ಸಂಸ್ಕೃತ ವಿದ್ವಾಂಸರಿಗೆ ಭೌತಶಾಸ್ತ್ರದ ಪರಿಣತಿ ಇರುವುದಿಲ್ಲ. ಹೀಗಾಗಿ ಪ್ರಾಚೀನ ಜ್ಞಾನ ಸಂಪತ್ತನ್ನು ತಲುಪಲು ಇವರಿಬ್ಬರ ನಡುವೆ ಸಂವಾದದ ಸೇತುವೆ ನಿರ್ಮಿಸಬೇಕಿದೆ ಎಂದು ಹೇಳಿದರು.
ಭಾರತೀಯ ಜ್ಞಾನ ಪರಂಪರೆಯನ್ನು ಪ್ರಸ್ತುತ ಶಿಕ್ಷಣ ವ್ಯವಸ್ಥೆಯೊಂದಿಗೆ ಜೋಡಿಸಲು ಭಾಷಾ ತಜ್ಞರು ಮತ್ತು ವಿಷಯ ತಜ್ಞರನ್ನು ಒಟ್ಟಿಗೆ ತರಬೇಕು. ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಜ್ಞಾನ ಪರಂಪರೆಯನ್ನು ಪಠ್ಯಕ್ರಮದಲ್ಲಿ ಸೇರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಕೇವಲ ಪಠ್ಯಕ್ರಮ ರೂಪಿಸುವುದರಿಂದ ಉದ್ದೇಶ ಈಡೇರುವುದಿಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಆ ಕ್ಷೇತ್ರದಲ್ಲಿ ಭಾರತದ ಕೊಡುಗೆ ಏನು ಎಂಬುದನ್ನು ಹುಡುಕಬೇಕು ಎಂದು ಅವರು ಹೇಳಿದರು.
ರಸಾಯನ ವಿಜ್ಞಾನದ ಪ್ರಾಧ್ಯಾಪಕರೊಬ್ಬರು ಭಾರತೀಯ ರಸಾಯನ ಪರಂಪರೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಬಂಧಿತ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಇದಕ್ಕಾಗಿ ಸಂಸ್ಕೃತ ಹಾಗೂ ವಿಜ್ಞಾನ ತಜ್ಞರು ಒಟ್ಟಿಗೆ ಕುಳಿತು ಕಾರ್ಯನಿರ್ವಹಿಸಬೇಕು ಎಂದು ಡಾ. ಅಗ್ನಿಹೋತ್ರಿ ಉದಾಹರಿಸಿದರು.
ಕಾಶಿಯಲ್ಲಿ ಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯೋಗ ಅಗತ್ಯ
ಕಾಶಿ ಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು. ಇಂಗ್ಲಿಷ್ ಶಿಕ್ಷಣ ಪದ್ಧತಿಯ ಕಾಲದಲ್ಲಿ ಮಹಾಮನಾ ಮದನ್ ಮೋಹನ್ ಮಾಳವೀಯ ಅವರು ಕಾಶಿಯಲ್ಲಿ ಶಿಕ್ಷಣದ ದೊಡ್ಡ ಪ್ರಯೋಗ ನಡೆಸಿದ್ದರು. ಮಹಾತ್ಮ ಗಾಂಧೀಜಿ ಗುಜರಾತಿನಲ್ಲಿ ವಿದ್ಯಾಪೀಠ ಸ್ಥಾಪಿಸಿದರು. ಸ್ವಾಮಿ ಶ್ರದ್ಧಾನಂದರು ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ ಹಾಗೂ ಲಾಲಾ ಲಜಪತ್ ರಾಯ್ ಅವರು ಲಾಹೋರ್ನಲ್ಲಿ ರಾಷ್ಟ್ರೀಯ ಮಹಾವಿದ್ಯಾಲಯ ಸ್ಥಾಪಿಸಿದರು. ಆ ಕಾಲದಲ್ಲಿ ಭಾರತೀಯ ಶಿಕ್ಷಣ ಮತ್ತು ಜ್ಞಾನ ಪರಂಪರೆಯನ್ನು ಉಳಿಸಲು ಇಂತಹ ಪ್ರಯೋಗಗಳನ್ನು ನಡೆಸಲಾಗಿತ್ತು ಎಂದು ಹೇಳಿದರು.
ಇಂದು ಮತ್ತೆ ಅಂತಹ ಪ್ರಯೋಗಗಳ ಅಗತ್ಯವಿದೆ. ಕಾಶಿಯಲ್ಲಿ ಕಾರಿಡಾರ್ ನಿರ್ಮಾಣವಾಗಿದೆ. ಅದೇ ರೀತಿ ಜ್ಞಾನ ಕ್ಷೇತ್ರದಲ್ಲಿಯೂ ಪುರಾತನ ಜ್ಞಾನವನ್ನು ವರ್ತಮಾನದೊಂದಿಗೆ ಜೋಡಿಸುವ ಕಾರಿಡಾರ್ ನಿರ್ಮಾಣವಾಗಬೇಕು. ಹಿಂದೂಸ್ಥಾನ ಸಮಾಚಾರ ಸುದ್ದಿ ಸಂಸ್ಥೆ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಶಿಯ ಪ್ರಬುದ್ಧರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಭಾರತೀಯ ಜ್ಞಾನ ಪರಂಪರೆಯ ಮುರಿದ ಸೇತುವೆಯನ್ನು ಮತ್ತೆ ಜೋಡಿಸುವಂತಹ ವಾತಾವರಣ ನಿರ್ಮಿಸಬೇಕು ಎಂದು ಅವರು ಕರೆ ನೀಡಿದರು.
ಭಾಷೆಗಿಂತ ಅದರಲ್ಲಿರುವ ವಿಚಾರ ಮುಖ್ಯ
ಭಾರತೀಯ ಭಾಷೆಗಳ ಕುರಿತು ಮಾತನಾಡಿದ ಡಾ. ಅಗ್ನಿಹೋತ್ರಿ, ಭಾಷೆಗಿಂತ ಅದರಲ್ಲಿ ಏನು ಹೇಳಲಾಗಿದೆ ಎಂಬುದು ಹೆಚ್ಚು ಮುಖ್ಯ ಎಂದು ಹೇಳಿದರು.
ಕಾಶಿ ಯಾವಾಗಲೂ ಭಾಷೆಗಿಂತ ಹೇಳಲಾದ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಗೋಸ್ವಾಮಿ ತುಳಸೀದಾಸರು ಜನಭಾಷೆಯಲ್ಲಿ ರಾಮಚರಿತಮಾನಸ ರಚಿಸಿದರು. ಅದರಲ್ಲಿದ್ದ ವಿಚಾರಗಳು ಮಹತ್ವದ್ದಾಗಿದ್ದರಿಂದ ಸಮಾಜ ಅದನ್ನು ಸ್ವೀಕರಿಸಿತು ಎಂದು ಅವರು ಹೇಳಿದರು.
ಇಂಗ್ಲಿಷ್ ಕುರಿತು ನಿರ್ಮಾಣವಾಗಿರುವ ಮನೋಭಾವದಲ್ಲೂ ಬದಲಾವಣೆ ಅಗತ್ಯ. ಇಂಗ್ಲಿಷ್ ಮಾತನಾಡುವವರನ್ನು ವಿದ್ವಾಂಸರೆಂದು ಹಾಗೂ ಸ್ವಂತ ಭಾಷೆಯಲ್ಲಿ ಮಾತನಾಡುವವರನ್ನು ಕೀಳು ಎಂದು ಪರಿಗಣಿಸುವ ದೃಷ್ಟಿಕೋನ ಬದಲಾಗಬೇಕು. ಅಸ್ಸಾಮಿ, ಪಂಜಾಬಿ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಗುಜರಾತಿ, ಹಿಂದಿ ಸೇರಿದಂತೆ ಭಾರತದ ಎಲ್ಲ ಭಾಷೆಗಳಿಗೂ ರಾಷ್ಟ್ರೀಯ ಮಹತ್ವವಿದೆ. ಈ ಎಲ್ಲ ಭಾಷೆಗಳು ದೇಶದ ಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ವಾಹಕಗಳಾಗಿವೆ ಎಂದು ಹೇಳಿದರು.
ಹಿಂದೂಸ್ಥಾನ ಸಮಾಚಾರದಿಂದ ಭಾರತೀಯ ಭಾಷಾ ದಿನಾಚರಣೆ ಆರಂಭ
ಭಾರತೀಯ ಭಾಷಾ ದಿನಾಚರಣೆಯ ಪರಿಕಲ್ಪನೆ ಬಹುಭಾಷಾ ಸುದ್ದಿ ಸಂಸ್ಥೆಯಾದ ಹಿಂದೂಸ್ಥಾನ ಸಮಾಚಾರಕ್ಕೆ ಸಂಬಂಧಿಸಿದೆ ಎಂದು ಡಾ. ಅಗ್ನಿಹೋತ್ರಿ ಹೇಳಿದರು.
ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯುವ ಸಂದರ್ಭದಲ್ಲಿ ಅಸ್ಸಾಮಿ ಸೇರಿದಂತೆ ಇತರ ಭಾರತೀಯ ಭಾಷೆಗಳ ಸ್ಥಾನಮಾನ ಕುರಿತು ಪ್ರಶ್ನೆಗಳು ಎದುರಾದವು. ಆಗ ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಮಹತ್ವ ಹೊಂದಿರುವ ಭಾಷೆಗಳಾಗಿವೆ ಎಂಬ ವಿಚಾರ ಮುನ್ನೆಲೆಗೆ ಬಂತು. ಇದೇ ಭಾವನೆಯೊಂದಿಗೆ ಹಿಂದೂಸ್ಥಾನ ಸಮಾಚಾರ ಭಾರತೀಯ ಭಾಷಾ ದಿನಾಚರಣೆ ಆರಂಭಿಸಿತು ಎಂದು ಅವರು ವಿವರಿಸಿದರು.
ರಾಷ್ಟ್ರಭಾವದ ರಕ್ಷಣೆಯೂ ಅಗತ್ಯ
ಭಾರತದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ರಾಷ್ಟ್ರಭಾವವೂ ಒಂದು ಎಂದು ಡಾ. ಅಗ್ನಿಹೋತ್ರಿ ಹೇಳಿದರು.
ರಾಜ್ಯವನ್ನು ನೋಡಬಹುದು, ಆದರೆ ರಾಷ್ಟ್ರವನ್ನು ನೋಡಲು ಸಾಧ್ಯವಿಲ್ಲ. ರಾಷ್ಟ್ರ ಹೃದಯದಲ್ಲಿರುತ್ತದೆ. ರಾಜ್ಯಗಳು ನಿರ್ಮಾಣವಾಗುತ್ತವೆ, ಬದಲಾಗುತ್ತವೆ, ನಾಶವಾಗುತ್ತವೆ. ಆದರೆ ರಾಷ್ಟ್ರಭಾವ ಉಳಿದಿದ್ದರೆ ದೇಶ ಜೀವಂತವಾಗಿರುತ್ತದೆ ಎಂದು ಅವರು ಹೇಳಿದರು.
ಇಂದು ಸವಾಲುಗಳು ಬದಲಾಗಿವೆ. ಅವುಗಳ ಸ್ವರೂಪ ಮತ್ತು ವಿಧಾನಗಳೂ ಬದಲಾಗಿವೆ. ಹೀಗಾಗಿ ರಾಷ್ಟ್ರಭಾವವನ್ನು ರಕ್ಷಿಸಲು ಅನುಸರಿಸಬೇಕಾದ ಯೋಜನೆಗಳು ಮತ್ತು ದೃಷ್ಟಿಕೋನವನ್ನೂ ಹೊಸದಾಗಿ ಪರಿಶೀಲಿಸಬೇಕಾಗಿದೆ. ಭಾರತೀಯ ಜ್ಞಾನ ಪರಂಪರೆಯನ್ನು ನಮ್ಮ ಪರಂಪರೆಯೊಂದಿಗೆ ಜೋಡಿಸಿ ಅದನ್ನು ಹೊಸ ಪೀಳಿಗೆಗೆ ತಲುಪಿಸುವುದು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಕಾಶಿ ಭಾರತೀಯ ಜ್ಞಾನ ಪರಂಪರೆಯ ಮುರಿದ ಸೇತುವೆಯನ್ನು ಮರುಜೋಡಿಸುವ ಕಾರ್ಯವನ್ನು ಮಾಡಲಿದೆ. ಇಲ್ಲಿಂದ ಜ್ಞಾನದ ಹೊಸ ಧಾರೆ ಇಡೀ ದೇಶಕ್ಕೆ ಹರಿಯಲಿದೆ ಎಂಬ ವಿಶ್ವಾಸವನ್ನು ಡಾ. ಅಗ್ನಿಹೋತ್ರಿ ವ್ಯಕ್ತಪಡಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.