
ವಿಜಯಪುರ, 05 ಆಗಸ್ಟ್ (ಹಿ.ಸ.)
ಆ್ಯಂಕರ್ : ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಇಂದು ಶಾಸಕ ಯಶವಂತ್ರಾಯಗೌಡ ಪಾಟೀಲ್ ಅವರನ್ನು ಭೇಟಿ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆಗೆ ಅವರ ನಾಯಕತ್ವ ಅಗತ್ಯವಾಗಿದ್ದು, ಶಾಸಕರಾಗಿ ಮುಂದುವರಿಯುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ, ಕ್ಷೇತ್ರದ ಜನರ ಭಾವನೆಗಳಿಗೆ ಗೌರವ ನೀಡಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಕೋರಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಜನಸೇವೆಯಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದ ಕಾರ್ಯಕರ್ತರು, ಮುಂದೆಯೂ ಅದೇ ರೀತಿಯ ನಾಯಕತ್ವ ನೀಡುವಂತೆ ವಿನಂತಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಯಶವಂತ್ರಾಯಗೌಡ ಪಾಟೀಲ್, ಇಂದು ನನ್ನನ್ನು ಭೇಟಿ ಮಾಡಿ ಅಪಾರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಗೆ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅವರು ವ್ಯಕ್ತಪಡಿಸಿರುವ ಭಾವನೆಗಳು ನನಗೆ ಅತ್ಯಂತ ಮೌಲ್ಯಯುತವಾಗಿವೆ. ನಿಮ್ಮೆಲ್ಲರ ನಿಷ್ಕಲ್ಮಷ ಪ್ರೀತಿ, ಬೆಂಬಲ ಮತ್ತು ವಿಶ್ವಾಸವೇ ನನಗೆ ದೊಡ್ಡ ಶಕ್ತಿ, ಎಂದು ಹೇಳಿದರು.
ಕಾರ್ಯಕರ್ತರು ಮತ್ತು ಅಭಿಮಾನಿಗಳ ಪ್ರೀತಿ ಸದಾ ನನ್ನೊಂದಿಗಿರಲಿ. ಕ್ಷೇತ್ರದ ಜನರ ಹಿತಾಸಕ್ತಿ ಹಾಗೂ ಪಕ್ಷದ ಸಂಘಟನೆಯ ಬಲವರ್ಧನೆಗಾಗಿ ನಾನು ಸದಾ ಬದ್ಧನಾಗಿದ್ದೇನೆ. ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಗೌರವ ನೀಡಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ, ಎಂದು ಅವರು ತಿಳಿಸಿದರು.
ಶಾಸಕರ ನಿವಾಸದಲ್ಲಿ ನಡೆದ ಈ ಭೇಟಿ ವೇಳೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಶಾಸಕ ಸ್ಥಾನದಲ್ಲಿ ಮುಂದುವರಿದು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವಂತೆ ಒಕ್ಕೊರಲಿನಿಂದ ಮನವಿ ಮಾಡಿದರು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande