
ಬೆಂಗಳೂರು, 26 ಆಗಸ್ಟ್ (ಹಿ.ಸ.)
ಆ್ಯಂಕರ್:
ಕಸ್ತೂರಿರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ಕುರಿತು ಚರ್ಚಿಸಿ ಪಕ್ಷಾತೀತ ನಿರ್ಧಾರ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್ ಶಾಸಕರು ಹಾಗೂ ಹಿಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಏಕಪಕ್ಷೀಯ ನಿರ್ಧಾರವನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ ಎಂದರು.
ಕೇಂದ್ರದ 7ನೇ ಕರಡು ಅಧಿಸೂಚನೆಯಂತೆ ಕರ್ನಾಟಕದ 10 ಜಿಲ್ಲೆಗಳ 33 ತಾಲ್ಲೂಕುಗಳ 1,449 ಗ್ರಾಮಗಳು ಸೇರಿದಂತೆ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರುವ ಸಾಧ್ಯತೆಯಿದೆ. ಇದರಿಂದ ಕೃಷಿಕರ ಜೀವನೋಪಾಯ ಹಾಗೂ ಭವಿಷ್ಯದ ಅಭಿವೃದ್ಧಿಗೆ ತೊಂದರೆಯಾಗಬಹುದು ಎಂದು ಅವರು ಹೇಳಿದರು.
ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂದು ಕೇಂದ್ರಕ್ಕೆ ಮನವಿ ಮಾಡಲಾಗುವುದು. ಸಚಿವ ಸಂಪುಟದಲ್ಲಿ ಚರ್ಚಿಸಿ ಜನಾಭಿಪ್ರಾಯ ಪಡೆಯಲಾಗುವುದು. ರಾಜ್ಯದ ನಿಲುವನ್ನು ಕೇಂದ್ರ ಸರ್ಕಾರ ಗೌರವಿಸಬೇಕು ಎಂದರು.
ಬರ ನಿರ್ವಹಣೆಗೆ ಕ್ರಮ
ರಾಜ್ಯದ 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಕೇಂದ್ರದಿಂದ ಪರಿಹಾರ ಕೋರಿ ನಿಯೋಗದೊಂದಿಗೆ ತೆರಳಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಸಚಿವರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸಲು ಸೂಚಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿಯೂ ಜನರ ಸಮಸ್ಯೆಗಳನ್ನು ಆಲಿಸಲು ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ಅರ್ಹ ಮತದಾರರ ಹಕ್ಕು ರಕ್ಷಣೆಗೆ ಒತ್ತು
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮತಪಟ್ಟಿ ಪರಿಶೀಲನೆ ಹಾಗೂ ಮತದಾನದ ಹಕ್ಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಶಾಸಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಭಾರತ್ ಜೋಡೋ ಯುವಸಂಘಕ್ಕೆ 7 ಲಕ್ಷ ನೋಂದಣಿ
ಯುವಕರಿಗಾಗಿ ರೂಪಿಸಿರುವ ಭಾರತ್ ಜೋಡೋ ಯುವಸಂಘದಡಿ ಆನ್‌ಲೈನ್‌ನಲ್ಲಿ ಈಗಾಗಲೇ 7 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಕ್ರೀಡೆ, ಯೋಗ, ಪರಿಸರ ಸಂರಕ್ಷಣೆ, ಸಮುದಾಯ ಸೇವೆ, ನಾಯಕತ್ವ ಹಾಗೂ ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು. ಪ್ರತಿ ಸಂಘಕ್ಕೆ 10 ಲಕ್ಷ ರೂ. ನೆರವು ನೀಡಲಾಗುವುದು ಎಂದರು.
ಬಡವರಿಗೆ ಸೈಟ್ ಹಂಚಿಕೆ
ಪ್ರತಿ ಜಿಲ್ಲೆಯಲ್ಲಿ ಬಡವರಿಗೆ 50 ಸಾವಿರ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ನಕಲಿ ಬಿಲ್ ಹಾಗೂ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಶಾಸಕರಿಗೆ ಸೂಚಿಸಲಾಗಿದೆ ಎಂದರು.
ಎಸ್‌ಐಆರ್ ಪೂರ್ಣಗೊಂಡ ಬಳಿಕ ನವೆಂಬರ್ ಒಳಗೆ ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಜಲಮೂಲ, ಹಸಿರು ಪ್ರದೇಶ ಅಭಿವೃದ್ಧಿ
ಬೆಂಗಳೂರಿನ ಮುಂದಿನ 25 ವರ್ಷಗಳ ನೀರಿನ ಭದ್ರತೆಗಾಗಿ ಪ್ರಮುಖ ಕೆರೆಗಳ ಸಂರಕ್ಷಣೆ, ಅಂತರ್ಜಲ ಹೆಚ್ಚಳ ಹಾಗೂ ಒತ್ತುವರಿ ತೆರವುಗೊಳಿಸಲು ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಹೆಸರಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಎಲೆಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ, ಬಾಗಲೂರು ಹಾಗೂ ಬೈರಮಂಗಲ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ, ಬಿಎಂ ಕಾವಲ್ ಅರಣ್ಯ, ಬಸವಂತಪುರ, ಮಂಡೂರು ಹಾಗೂ ಜ್ಯೋತಿಪುರ ಸೇರಿದಂತೆ 5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದರ ಮೂಲಕ ಬೆಂಗಳೂರಿನ ಹಸಿರು ಹೊದಿಕೆ ಹೆಚ್ಚಿಸಿ ಪರಿಸರ ಸಂರಕ್ಷಣೆ ಹಾಗೂ ನೀರಿನ ಭದ್ರತೆಗೆ ಒತ್ತು ನೀಡಲಾಗುವುದು ಎಂದು ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.