
ಕೋಲಾರ, 26 ಆಗಸ್ಟ್ (ಹಿ.ಸ):
ಆ್ಯಂಕರ್ : ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಈ ಅರವತ್ತು ದಿನಗಳ ಉಚಿತ ಕಾನೂನು ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರದಿಂದ ದೂರವಿರುವ, ದುರ್ಬಲ ವರ್ಗದವರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳನ್ನು ಗುರುತಿಸಿ ಈ ಅಭಿಯಾನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ೧೩ ವಿವಿಧ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಸದಸ್ಯ ಕಾರ್ಯದರ್ಶಿ ಪ್ರಭು ನೀಲಾಚಾರಿ ಬಡಿಗೇರ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಳಬಾಗಿಲುತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಲ್ಲಿ ಬೈರಕೂರು ಗ್ರಾಮ ಪಂಚಾಯಿತಿ ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲ್ಲಿ ಕಾನೂನು ಸೇವಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಬಡವರು, ಶೋಷಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕಾನೂನು ಸೇವೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ, ತಾಲೂಕಿನ ಪೆತ್ತಾಂಡಹಳ್ಳಿ ಗ್ರಾಮದಲ್ಲಿ 'ಕಾನೂನು ಸಲಹಾ ಕೇಂದ್ರ'ವನ್ನು ಉದ್ಘಾಟಿಸಲಾಗಿದೆ.
ಈ ಅಭಿಯಾನದಡಿ, ಹಿರಿಯ ವಕೀಲರು ಹಾಗೂ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ಒಳಗೊಂಡ ತಂಡವು ವಾರಕ್ಕೆ ಎರಡು ದಿನ ಗ್ರಾಮದ ಪ್ರತಿಯೊಂದು ಮನೆಗೂ ಭೇಟಿ ನೀಡಲಿದೆ. ಬಡತನ ನಿರ್ಮೂಲನೆ, ೧೪ ವರ್ಷದೊಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ, ರೇಷನ್ ಕಾರ್ಡ್ ಸಮಸ್ಯೆ, ಪಿಂಚಣಿ ಸೌಲಭ್ಯ ಸೇರಿದಂತೆ ಜನರಿಗೆ ಸಿಗಬೇಕಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಯಾವುದೇ ಸೌಲಭ್ಯಗಳಿಂದ ವಂಚಿತರಾಗಿದ್ದರೆ, ಅವರಿಂದ ಸ್ಥಳದಲ್ಲೇ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಸೌಲಭ್ಯ ದೊರಕಿಸಿಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂಪೂರ್ಣ ಪ್ರಕ್ರಿಯೆಯು ಉಚಿತವಾಗಿದ್ದು, ಸಾರ್ವಜನಿಕರು ಆತಂಕಪಡದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ, ಸಲ್ಲಿಕೆಯಾದ ಅರ್ಜಿಗಳ ವಿವರಗಳನ್ನು ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ದಾಖಲಿಸಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಬಾಗಿಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಾಬು ಅವರು ವಹಿಸಿದ್ದರು. ಅಭಿಯಾನದಲ್ಲಿ ಮುಳಬಾಗಿಲು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಗೌಡ ಜಗದೀಶ್ ರುದ್ರ, ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ್ ಜಿ., ಬೈರಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ವಿ. ಮತ್ತು ಚಂದ್ರಶೇಖರ್, ಮುಳಬಾಗಿಲು ವಕೀಲರ ಸಂಘದ ಅಧ್ಯಕ್ಷ ಪಿ.ಎಂ. ಸದಾಶಿವಯ್ಯ, ಉಪಾಧ್ಯಕ್ಷರಾದ ಬಿ.ವಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಂ. ರಮೇಶ್ ಹಾಗೂ ಕೋಲಾರ ಪ್ಯಾನಲ್ ವಕೀಲರಾದ ಶಿವಾನಂದ ಕೆ. ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್