
ಬೆಂಗಳೂರು, 26 ಆಗಸ್ಟ್ (ಹಿ.ಸ.):
ಆ್ಯಂಕರ್:ವಿದ್ಯಾವಂತರು ಜಾತಿ ವ್ಯವಸ್ಥೆ ಹಾಗೂ ಮೌಢ್ಯ, ಕಂದಾಚಾರಗಳನ್ನು ಪಾಲನೆ ಮಾಡುತ್ತಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಶೂದ್ರ ಸೇವಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯ ಮೂಲಕ ಯಾರನ್ನೂ ಕೀಳಾಗಿ ಕಾಣಬಾರದು. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂದರು.
ಶೂದ್ರ ವರ್ಗದವರು ಹಲವು ವರ್ಷಗಳ ಕಾಲ ಅಕ್ಷರ ಸಂಸ್ಕೃತಿ ಹಾಗೂ ಅವಕಾಶಗಳಿಂದ ವಂಚಿತರಾಗಿದ್ದರು. ಅಕ್ಷರ ವಂಚಿತರು ಅಕ್ಷರ ಕಲಿತವರೊಂದಿಗೆ ಸ್ಪರ್ಧಿಸುವುದು ಕಷ್ಟ. ಹೀಗಾಗಿ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯಬೇಕು ಎಂದು ಹೇಳಿದರು.
ಭಿನ್ನಾಭಿಪ್ರಾಯಗಳ ಪರಿಣಾಮ ಬ್ರಿಟಿಷರು ನಮ್ಮನ್ನು ಆಳಿದರು. ಇನ್ನು ಮುಂದಾದರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ವರ್ಗಗಳು ಒಂದಾಗಬೇಕು. ಅಸಮಾನತೆ ತೊಲಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರವೂ ಇದೇ ಆಗಿತ್ತು ಎಂದರು.
ಜಾತಿ ವ್ಯವಸ್ಥೆ ಹೋಗಬೇಕಾದರೆ ವಿದ್ಯಾವಂತರು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಆಲೋಚಿಸುವುದನ್ನು ಕಲಿಯಬೇಕು. ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ಬಂದರೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದಕ್ಕೆ ವಿದ್ಯಾವಂತರೂ ಕಾರಣರಾಗಿದ್ದಾರೆ ಎಂದು ಹೇಳಿದರು.
ಇಂದಿನ ಪೀಳಿಗೆ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳದಿದ್ದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯೂ ನಿರ್ಮೂಲನೆಯಾಗದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಅಸಮಾನತೆ ನಿವಾರಣೆಗೆ ಸಹಕಾರಿಯಾಗಿವೆ. ವ್ಯವಸ್ಥೆ ಬದಲಾವಣೆಗೆ ಎಲ್ಲರ ಪ್ರಯತ್ನ ಅಗತ್ಯವಾಗಿದ್ದು, ಅದಕ್ಕೆ ಸಮಯವೂ ಬೇಕು ಎಂದರು.
ಸಮಾರಂಭದಲ್ಲಿ ಶೂದ್ರ ಸೇವಾ ಸಂಘದ ಅಧ್ಯಕ್ಷ ಹಾಗೂ ಶೂದ್ರ ಪತ್ರಿಕೆ ಸಂಪಾದಕ ರಾಮೇಗೌಡ, ಸಂಚಾಲಕ ಮುರಳೀಧರ ಹಾಲಪ್ಪ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.