
ಬೆಂಗಳೂರು, 04 ಆಗಸ್ಟ್ (ಹಿ.ಸ.):
ಆ್ಯಂಕರ್:ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸಭಾಧ್ಯಕ್ಷ ಮತ್ತು ಉಪಸಭಾಪತಿ ಹುದ್ದೆಗಳ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ನಾಯಕರು ಮೊದಲು ಭಾರತದ ಸಂವಿಧಾನವನ್ನು ಓದಲಿ, ನಂತರ ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್ ಬಗ್ಗೆ ಮಾತನಾಡಲಿ ಎಂದು ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಸಂವಿಧಾನದ 178ನೇ ವಿಧಿಯ ಪ್ರಕಾರ ವಿಧಾನಸಭೆಯ ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರನ್ನು ವಿಧಾನಸಭೆಯೇ ಆಯ್ಕೆ ಮಾಡುತ್ತದೆ. 182ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಯನ್ನು ವಿಧಾನಪರಿಷತ್ತೇ ಆಯ್ಕೆ ಮಾಡುತ್ತದೆ. ಈ ಕನಿಷ್ಠ ಸಾಂವಿಧಾನಿಕ ಜ್ಞಾನವೂ ಇಲ್ಲದೆ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಕೇವಲ ತನ್ನ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿ ಪ್ರಕಟಿಸಿದೆ ಅಷ್ಟೇ ಹೊರತು, ಅವರನ್ನು ಯಾವುದೇ ಸಾಂವಿಧಾನಿಕ ಹುದ್ದೆಗೆ ನೇಮಕ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸದನದಲ್ಲಿ ನಡೆಯಬೇಕಾದ ಅಧಿಕೃತ ಚುನಾವಣೆ ಮತ್ತು ಪಕ್ಷದ ಅಭ್ಯರ್ಥಿಗಳ ಘೋಷಣೆ ಎರಡು ವಿಭಿನ್ನ ಪ್ರಕ್ರಿಯೆಗಳು. ಈ ವ್ಯತ್ಯಾಸ ಅರಿಯದೆ ಸಂವಿಧಾನ ವಿರೋಧ ಎಂದು ಆರೋಪಿಸುವುದು ಅಜ್ಞಾನದ ಪ್ರದರ್ಶನ ಎಂದು ಹೇಳಿದರು.
ಬಿಜೆಪಿಯೇ ಈ ಹಿಂದೆ ಇದೇ ರೀತಿಯ ಕ್ರಮ ಅನುಸರಿಸಿದೆ ಎಂದು ನೆನಪಿಸಿದ ಅವರು, 2019ರಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಚುನಾವಣೆಗೆ ಮುನ್ನವೇ ಬಿಜೆಪಿ ಘೋಷಿಸಿತ್ತು. 2024ರಲ್ಲಿ ಲೋಕಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಓಂ ಬಿರ್ಲಾ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಮುಂಚಿತವಾಗಿ ಪ್ರಕಟಿಸಲಾಗಿತ್ತು. 2026ರಲ್ಲಿ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ನಾಯಕರು ಸ್ಪೀಕರ್ ಅಭ್ಯರ್ಥಿಯನ್ನು ಸದನದ ಚುನಾವಣೆಗೂ ಮುನ್ನವೇ ಘೋಷಿಸಿದ್ದರು ಎಂದು ಉದಾಹರಣೆಗಳನ್ನು ನೀಡಿದರು.
ಹೀಗಿರುವಾಗ ಬಿಜೆಪಿ ಮಾಡಿದರೆ ಅದು ಅಭ್ಯರ್ಥಿಯ ಆಯ್ಕೆ, ಕಾಂಗ್ರೆಸ್ ಮಾಡಿದರೆ ಮಾತ್ರ ಸಂವಿಧಾನ ವಿರೋಧ ಎನ್ನುವುದು ದ್ವಂದ್ವ ನಿಲುವು ಎಂದು ಹರಿಪ್ರಸಾದ್ ಆರೋಪಿಸಿದರು.
ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯನ್ನೂ ಪ್ರಸ್ತಾಪಿಸಿದ ಅವರು, ಮತದಾನದ ಹಕ್ಕಿಲ್ಲದ 12 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಸೇರಿಸಿಕೊಂಡು ಕೇವಲ ಆರು ಮತಗಳ ಅಂತರದಲ್ಲಿ ಗೆದ್ದ ಎಂ. ಕೆ. ಪ್ರಾಣೇಶ್ ಅವರನ್ನು ವಿಧಾನಪರಿಷತ್ತಿನ ಉಪಸಭಾಪತಿಯಾಗಿ ಕೂರಿಸಿದಾಗ ಬಿಜೆಪಿಗೆ ಸಂವಿಧಾನ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.
ನಂತರ ನ್ಯಾಯಾಲಯವೇ ಸಾಂವಿಧಾನಿಕ ಅಕ್ರಮವನ್ನು ಉಳಿಸಲು ಮತದಾನದ ಗೌಪ್ಯತೆಯನ್ನು ನೆಪವಾಗಿ ಬಳಸಲಾಗದು ಎಂದು ಹೇಳಿ ಆ ಚುನಾವಣೆಯನ್ನು ರದ್ದುಗೊಳಿಸಿದೆ. ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ತಂದು ಪಡೆದ ಸ್ಥಾನವನ್ನು ಸಾಂವಿಧಾನಿಕ ಹುದ್ದೆಗೆ ಮೆಟ್ಟಿಲಾಗಿ ಬಳಸಿಕೊಂಡ ಬಿಜೆಪಿ, ನ್ಯಾಯಾಲಯದ ತೀರ್ಪಿನ ಬಳಿಕ ರಾಜ್ಯದ ಜನರ ಕ್ಷಮೆ ಕೇಳಬೇಕಿತ್ತು ಎಂದು ಹರಿಪ್ರಸಾದ್ ಹೇಳಿದರು.
ಅಸಿಂಧು ಮತಗಳ ಆಧಾರದ ಮೇಲೆ ಗೆದ್ದವರನ್ನು ಸಾಂವಿಧಾನಿಕ ಹುದ್ದೆಯಲ್ಲಿ ಕೂರಿಸಲು ನಾಚಿಕೆಪಡದವರು, ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಘೋಷಣೆಯನ್ನು ನೆಪ ಮಾಡಿಕೊಂಡು ಸಂವಿಧಾನದ ಬಗ್ಗೆ ಪಾಠ ಹೇಳಲು ಮುಂದಾಗಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಪಾಠ ಅಗತ್ಯವಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ತಮ್ಮ ಹೇಳಿಕೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.