
ಕೋಲಾರ, 04 ಆಗಸ್ಟ್ (ಹಿ.ಸ):
ಆ್ಯಂಕರ್ : ದೇಶದ ಭದ್ರಬುನಾದಿಯಾಗಿರುವ ಪ್ರಾಥಮಿಕ ಶಿಕ್ಷಣವು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಶಿಕ್ಷಕರ ಕೈಯಲ್ಲಿ ಪೆನ್ನು ಇರುವವರೆಗೆ ಸಮಾಜದಲ್ಲಿ ಬೆಳಕು ಇರುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಶಿಕ್ಷಕರ ಸೇವೆಯನ್ನು ಬಣ್ಣಿಸಿದರು.
ನಗರದ ಬುದ್ಧ ಮಂದಿರದಲ್ಲಿ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ಅವರ ವೃತ್ತಿಯಿಂದ ನಿವೃತ್ತಿ ಸಂದರ್ಭದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ದೇಶದ ಭದ್ರಬುನಾದಿಯಾಗಿದೆ. ಶಿಕ್ಷಕರ ಸೇವೆ ಮುಗಿದರೂ ಸಂಬಂಧ ಮುಗಿಯುವುದಿಲ್ಲ. ಒಮ್ಮೆ ಶಿಕ್ಷಕರಾದರೆ ಎಂದಿಗೂ ಶಿಕ್ಷಕರೇ ನೂರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆ ಕೊಡುವ ಅವರ ಕಾರ್ಯ ಶ್ಲಾಘನೀಯ. ಸರ್ಕಾರಿ ಸೇವೆಯ ಜೊತೆಯಲಿ ಸಮನ್ವಯ ಸಮಿತಿಯಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಸಂಘಟನೆಗೆ ಶಕ್ತಿಯಾಗಿ ಜಿ.ಶ್ರೀನಿವಾಸ್ ಉತ್ತಮ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಸರ್ಕಾರಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ ಸರ್ಕಾರಿ ಕೆಲಸ ಮಾಡುವಾಗ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಸರ್ಕಾರಿ ಕೆಲಸ ದೇವರ ಕೆಲಸ ಎಂಬ ನಾಡು ನುಡಿಯಂತೆ ಸೇವೆಯೇ ನಮ್ಮ ಪರಮೋಚ್ಚ ಗುರಿ ಆದಾಗ ಮಾತ್ರ ಸೇವೆಯಲ್ಲಿ ಸಂತೃಪ್ತಿ ಕಾಣಲು ಸಾಧ್ಯ ಎಂದರು.
ಡಯಟ್ ಉಪನ್ಯಾಸಕ ಬಾಲಾಜಿ ಮಾತನಾಡಿ ಶಿಕ್ಷಕರಿಗೆ ಅಲ್ಲದೆ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದ ಜಿ. ಶ್ರೀನಿವಾಸ್ ಅವರ ಸೇವೆ ಅಮೂಲ್ಯ ಅವರು ಸಂಘಟನೆಗಳಲ್ಲಿ ನಾಯಕತ್ವ ನೀಡಿದ್ದೆ ಅಲ್ಲದೆ ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಆಗಿದ್ದರು ಎಂದರು.
ಜಿಲ್ಲಾ ಗೌರವಾಧ್ಯಕ್ಷ ಜಿ ಶ್ರೀನಿವಾಸ್ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ಜಾಗ್ರತಿ ನೌಕರರ ೬ನೇ ಜಾಗೃತ ನೌಕರರ ಐಕ್ಯತಾ ಸಮಾವೇಶ ಆಗಸ್ಟ್ ೨೮ ರಂದು ಬೆಂಗಳೂರಿನ ಅರಮನೆ ಆವರಣದ ಶೃಂಗಾರ ಪ್ಯಾಲೇಸ್ನಲ್ಲಿ ನಡೆಯಲಿದೆ. ರಾಜ್ಯಮಟ್ಟದ ೬ನೇ ಐಕ್ಯತಾ ಸಮಾವೇಶದಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಮನವಿ ಮಾಡಿದರು.
ಜಿಲ್ಲಾ ಸಮಿತಿಯ ಅಧ್ಯಕ್ಷ ಎನ್. ಮುನಿರಾಜು ಮಾತನಾಡಿ, ಸರ್ಕಾರಿ ನೌಕರರಿಗೆ ಸೇವೆ ಮುಗಿದರೂ ಸಂಬಂಧ ಮುಗಿಯುವುದಿಲ್ಲ. ಸೇವಾ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಈ ಮೂಲಕ ಸಂಘಟಿತರಾಗಬೇಕು ನಮ್ಮ ಹಕ್ಕು, ಒತ್ತಾಯಗಳನ್ನು ಸರ್ಕಾರದ ಮುಂದೆ ಇರಿಸಿ ಈಡೇರಿಸಿಕೊಳ್ಳುವುದು ಒಳಿತು ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಸದಸ್ಯರುಗಳು ಸರ್ಕಾರಿ ನೌಕರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್