ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜಕೀಯ ಪಕ್ಷಗಳ ಸಹಕಾರಕ್ಕೆ ಮನವಿ
ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜಕೀಯ ಪಕ್ಷಗಳ ಸಹಕಾರಕ್ಕೆ ಮನವಿ
ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಂಗಳವಾರ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದರು.


ಕೋಲಾರ, 04 ಆಗಸ್ಟ್ (ಹಿ.ಸ.):

ಆ್ಯಂಕರ್ : ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಕೇವಲ ಆಡಳಿತ ಯಂತ್ರದ ಜವಾಬ್ದಾರಿಯಲ್ಲ. ಇದರಲ್ಲಿ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಕೈಬಿಟ್ಟು ಹೋಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಹೊಸ ಮತದಾರರ ಸೇರ್ಪಡೆಗೆ ‘ನಮೂನೆ ೬' ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಹಾಗೂ ಮತದಾರರ ಪಟ್ಟಿ ದೋಷಮುಕ್ತವಾಗಿರಬೇಕು ಎಂದು ಅವರು ಅಧಿಕಾರಿಗಳು ಹಾಗೂ ಪಕ್ಷಗಳ ಮುಖಂಡರಿಗೆ ಕಿವಿಮಾತು ಹೇಳಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಚುನಾವಣಾ ನಮೂನೆಗಳನ್ನು ಶೇ. ೧೦೦ರಷ್ಟು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಬಿಎಲ್ಒಗಳು ಕಡ್ಡಾಯವಾಗಿ ಮಾಡಬೇಕಿರುವ ಬೂತ್ ಮಟ್ಟದ ಮೀಟಿಂಗ್ ನಡಾವಳಿಗಳ ಅಪ್ಲೋಡ್ ಕಾರ್ಯ ವಿಳಂಬವಾಗಿದೆ. ಜಿಲ್ಲೆಯ ಒಟ್ಟು ೧,೫೩೮ ಮತಗಟ್ಟೆಗಳ ಪೈಕಿ ಕೇವಲ ೧೫೫ ಕಡೆ ಮಾತ್ರ ಈ ಕಾರ್ಯ ಪೂರ್ಣಗೊಂಡಿದೆ. ಜನವರಿ ೮ರೊಳಗೆ ಈ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಿದ್ದು, ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರಿಗೆ ಬಿಎಲ್ಒಗಳೊಂದಿಗೆ ಸಮನ್ವಯ ಸಾಧಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಡಿಸಿ ತಾಕೀತು ಮಾಡಿದರು.

ಸುಗಮ ಮತದಾನಕ್ಕೆ ಅನುಕೂಲವಾಗುವಂತೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಗರಿಷ್ಠ ೧,೨೦೦ ಮತದಾರರಿಗೊಂದು ಮತಗಟ್ಟೆ ನಿಗದಿಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ೧,೨೦೦ಕ್ಕೂ ಹೆಚ್ಚು ಮತದಾರರಿರುವ ೪೦ ಮತಗಟ್ಟೆಗಳನ್ನು ವಿಭಜಿಸಿ ಹೊಸ ಮತಗಟ್ಟೆಗಳನ್ನು ಸೃಷ್ಟಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ ೧,೫೩೮ ರಿಂದ ೧,೫೭೮ಕ್ಕೆ ಏರಿಕೆಯಾಗಲಿದೆ. ಹೊಸದಾಗಿ ಕೋಲಾರ-೯, ಮುಳಬಾಗಿಲು-೧೦, ಮಾಲೂರು-೮, ಬಂಗಾರಪೇಟೆ-೬, ಶ್ರೀನಿವಾಸಪುರ-೪ ಹಾಗೂ ಕೆಜಿಎಫ್ನಲ್ಲಿ ೩ ಮತಗಟ್ಟೆಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿವೆ. ಜೊತೆಗೆ ಶಿಥಿಲಗೊಂಡಿರುವ ಕಟ್ಟಡಗಳಿಂದ ಮತಗಟ್ಟೆಗಳನ್ನು ಪಕ್ಕದ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ನಾಮಕರಣ ಬದಲಾದ ಕಟ್ಟಡಗಳ ಹೆಸರನ್ನು ನವೀಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮರಣ ಹೊಂದಿದ ೨೮,೯೭೯, ಬೇರೆಡೆಗೆ ಸ್ಥಳಾಂತರಗೊಂಡ ೪೧,೨೩೮ ಹಾಗೂ ಗೈರುಹಾಜರಾದ ೮೮,೩೪೯ ಮತದಾರರ ಹೆಸರುಗಳನ್ನು ಪಟ್ಟಿಯಿಂದ ನಿಯಮಾನುಸಾರ ಕೈಬಿಡಲಾಗುತ್ತಿದೆ. ಮರಣ ಪ್ರಮಾಣಪತ್ರ ಮತ್ತು ಕುಟುಂಬಸ್ಥರ ದೃಢೀಕರಣದ ಆಧಾರದ ಮೇಲೆಯೇ ಮೃತರ ಹೆಸರನ್ನು ಪಟ್ಟಿಯಿಂದ ಅಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಗೆ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಚುನಾವಣೆ ಶಾಖೆಯ ಅಧಿಕಾರಿ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande