
ಗದಗ, 04 ಆಗಸ್ಟ್ (ಹಿ.ಸ.)
ಆ್ಯಂಕರ್:- ರಾಜ್ಯದ ನೂತನ ಸಚಿವ ಸಂಪುಟ ರಚನೆ ಮತ್ತು ಅದರ ಪ್ರಕ್ರಿಯೆಯನ್ನು ತೀವ್ರವಾಗಿ ಟೀಕಿಸಿರುವ ಮಾಜಿ ಸಚಿವ ಸಿ.ಸಿ. ಪಾಟೀಲ್, ಸಚಿವ ಸಂಪುಟ ರಚನೆಯು ಮುಖ್ಯಮಂತ್ರಿಯ ಪರಮಾಧಿಕಾರವಾಗಿದ್ದರೂ, ಈ ಬಾರಿ ನಡೆದಿರುವ ಬೆಳವಣಿಗೆಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದು ಹೇಳಿದರು.
ಗದಗ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೋ, ಕೆ.ಸಿ. ವೇಣುಗೋಪಾಲ್ ಅವರೋ, ರಣದೀಪ್ ಸಿಂಗ್ ಸುರ್ಜೇವಾಲಾ ಅವರೋ ಅಥವಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೋ ಎಂಬ ಜಿಜ್ಞಾಸೆ ರಾಜ್ಯದ ಜನರಲ್ಲಿ ಮೂಡಿದೆ ಎಂದು ಹೇಳಿದರು.
ಯಾವುದೇ ಪಕ್ಷದ ಮುಖ್ಯಮಂತ್ರಿಯಾಗಿದ್ದರೂ ಹೈಕಮಾಂಡ್ ಜೊತೆ ಚರ್ಚಿಸಿ, ಸಲಹೆ ಪಡೆದು ಸಚಿವ ಸಂಪುಟ ರಚಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಲೆಟರ್ಹೆಡ್ನಲ್ಲಿ ಸಚಿವರ ಪಟ್ಟಿ ಪ್ರಕಟವಾಗಿ, ಕಾಂಗ್ರೆಸ್ ಅಧ್ಯಕ್ಷರು ಆ ಪಟ್ಟಿಯನ್ನು ಅಂಗೀಕರಿಸಿದ್ದಾರೆ ಎಂಬ ರೀತಿಯಲ್ಲಿ ಪತ್ರ ಹೊರಬಿದ್ದಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.
ಪತ್ರದ ಕೆಳಭಾಗದಲ್ಲಿ ಕೆ.ಸಿ. ವೇಣುಗೋಪಾಲ್ ಅವರ ಸಹಿ ಇರುವುದನ್ನು ಉಲ್ಲೇಖಿಸಿದ ಅವರು, ವೇಣುಗೋಪಾಲ್ ಅವರ ಹಸ್ತಕ್ಷೇಪದಿಂದಲೇ ಕಾಂಗ್ರೆಸ್ ಪಕ್ಷ ಇಂದು ಈ ಪರಿಸ್ಥಿತಿಗೆ ಬಂದಿದೆ. ಅವರು ಆಗಾಗ ರಾಜ್ಯಕ್ಕೆ ಬರುತ್ತಾರೆ. ಆದರೆ ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಾರೆ ಎಂಬುದು ದೇವರಿಗೇ ಗೊತ್ತು ಎಂದು ವ್ಯಂಗ್ಯವಾಡಿದರು.
ಸಂವಿಧಾನಬದ್ಧ ಹುದ್ದೆಗಳಾದ ವಿಧಾನಸಭೆಯ ಸ್ಪೀಕರ್ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗಳ ಆಯ್ಕೆ ಚುನಾಯಿತ ಸದಸ್ಯರ ಮೂಲಕ ನಡೆಯಬೇಕಾದ ಪ್ರಕ್ರಿಯೆಯಾಗಿದ್ದು, ಹೈಕಮಾಂಡ್ ಅವರ ಹೆಸರನ್ನೂ ಮೊದಲೇ ಪ್ರಕಟಿಸಿರುವುದು ಸಂವಿಧಾನಕ್ಕೆ ಅನುಗುಣವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದರು.
ಸಚಿವ ಸಂಪುಟದಲ್ಲಿ ಕಳಂಕಿತರಿಗೆ ಮತ್ತೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ ಅವರು, ಹಲವು ಹಿರಿಯ ಸಚಿವರನ್ನು ಕೈಬಿಡಲಾಗಿದೆ ಎಂದು ಟೀಕಿಸಿದರು. ಗದಗ ಸೇರಿದಂತೆ ಸುಮಾರು ಹತ್ತು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಶವಂತರಾಯಗೌಡ ಅವರು ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿದ ಸಿ.ಸಿ. ಪಾಟೀಲ್, ಇದು ಕಾಂಗ್ರೆಸ್ ಸರ್ಕಾರವೇ ಅಥವಾ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರ್ಕಾರವೇ ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದ ವಿಚಾರವನ್ನೂ ಪ್ರಸ್ತಾಪಿಸಿ, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಇಷ್ಟೊಂದು ಗೊಂದಲದ ನಡುವೆ ಸಚಿವ ಸಂಪುಟ ರಚನೆಯಾಗಿರುವುದರಿಂದ ರಾಜ್ಯಕ್ಕೆ ಸುಭದ್ರ ಆಡಳಿತ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಉತ್ತರ ನೀಡಬೇಕಾಗಿದೆ ಎಂದರು.
ಮಹಿಳಾ ಮೀಸಲಾತಿ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಮಾತನಾಡುತ್ತಿದ್ದು, ಈ ಸಚಿವ ಸಂಪುಟದಲ್ಲಿ 20 ಸ್ಥಾನಗಳ ಪೈಕಿ ಒಬ್ಬ ಮಹಿಳೆಗೂ ಅವಕಾಶ ನೀಡದಿರುವುದು ಪಕ್ಷದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಅದೇ ವೇಳೆ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬರಗಾಲ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಆಗ್ರಹಿಸಿದರು. ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ, ಅಗತ್ಯ ನೆರವು ಹಾಗೂ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP