
ಗದಗ, 04 ಆಗಸ್ಟ್ (ಹಿ.ಸ.)
ಆ್ಯಂಕರ್ - ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿಯಂತಹ ಅಮಾನವೀಯ ಸಾಮಾಜಿಕ ಪಿಡುಗುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ವಿವಿಧ ಇಲಾಖೆಗಳು, ಕಾನೂನು ಜಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್. ಶಿವನಗೌಡ್ರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉದಯೋನ್ಮುಖ ಸ್ವಯಂಸೇವಾ ಸಂಸ್ಥೆ, ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿ ಕಾರ್ಮಿಕ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿ ಮುಕ್ತ ಕರ್ನಾಟಕ – ನಮ್ಮ ಸಂಕಲ್ಪ, ನಮ್ಮ ಜವಾಬ್ದಾರಿ ಎಂಬ ಘೋಷವಾಕ್ಯದಡಿ ಆರಂಭಗೊಂಡ ಅಭಿಯಾನವು ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಜೀತ ಪದ್ಧತಿಯಿಂದ ಮುಕ್ತರಾದ ಸಂತ್ರಸ್ತರ ಅನುಭವಗಳನ್ನು ನೇರವಾಗಿ ಆಲಿಸಿರುವುದಾಗಿ ತಿಳಿಸಿದ ಅವರು, ಗದಗ ಜಿಲ್ಲೆಯಲ್ಲಿಯೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಈ ಸಾಮಾಜಿಕ ಪಿಡುಗು ನಿರ್ಮೂಲನೆಗೆ ಸಮಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆಲಸಕ್ಕೆ ತಕ್ಕ ನ್ಯಾಯಯುತ ವೇತನ ನೀಡದೆ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಕೂಡ ಜೀತ ಪದ್ಧತಿಯ ಒಂದು ರೂಪವಾಗಿದೆ ಎಂದು ಅವರು ತಿಳಿಸಿದರು. ಇಂತಹ ಶೋಷಣೆಯ ವಿರುದ್ಧ ಪ್ರತಿಯೊಬ್ಬ ನಾಗರಿಕ ಜಾಗೃತರಾಗಬೇಕಿದ್ದು, ವಿಶೇಷವಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿ ತಡೆಗಟ್ಟುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿಯಂತಹ ಕೃತ್ಯಗಳು ಹೆಚ್ಚಾಗಿ ರಹಸ್ಯವಾಗಿ ನಡೆಯುವುದರಿಂದ ಅವುಗಳನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಸಂತ್ರಸ್ತರನ್ನು ಕೇವಲ ರಕ್ಷಿಸುವುದಷ್ಟೇ ಸಾಕಾಗುವುದಿಲ್ಲ. ಅವರಿಗೆ ಬಿಡುಗಡೆ ಪ್ರಮಾಣಪತ್ರ, ಆರ್ಥಿಕ ನೆರವು, ಕೌಶಲ್ಯಾಭಿವೃದ್ಧಿ ತರಬೇತಿ, ಉದ್ಯೋಗಾವಕಾಶ ಹಾಗೂ ಸಮಾಜದಲ್ಲಿ ಪುನರ್ವಸತಿ ಕಲ್ಪಿಸಿದಾಗ ಮಾತ್ರ ನಿಜವಾದ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಹಕ್ಕುಗಳನ್ನು ಕಸಿದುಕೊಂಡು ಕಡಿಮೆ ವೇತನ ನೀಡಿ ದುಡಿಸಿಕೊಳ್ಳುವುದು, ಮಾನವೀಯತೆ ಇಲ್ಲದೆ ಶ್ರಮ ಶೋಷಣೆ ಮಾಡುವುದು ಸಹ ಜೀತ ಪದ್ಧತಿಯ ಒಂದು ರೂಪವಾಗಿದೆ ಎಂದು ಹೇಳಿದರು.
ಇಂತಹ ಘಟನೆಗಳನ್ನು ಕಂಡು ಕೂಡ ಮೌನವಾಗಿರುವುದು ದೊಡ್ಡ ಅಪರಾಧವಾಗಿದ್ದು, ಸಾರ್ವಜನಿಕರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು. ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೀತ ಪದ್ಧತಿಯ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿಲ್ಲ. ಆದರೆ ಇತ್ತೀಚೆಗೆ ಬಂದಿದ್ದ ಒಂದು ದೂರಿನ ಪರಿಶೀಲನೆ ವೇಳೆ ಅದು ಬಾದಾಮಿ ವ್ಯಾಪ್ತಿಗೆ ಸೇರಿದ್ದು, ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಂತ್ರಸ್ತರನ್ನು ಬಿಡುಗಡೆಗೊಳಿಸಿ ಅಗತ್ಯ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗದಗ ಜಿಲ್ಲೆಯನ್ನು ಸಂಪೂರ್ಣ ಜೀತ ಪದ್ಧತಿ ಮುಕ್ತ ಜಿಲ್ಲೆಯನ್ನಾಗಿಸುವುದು ನಮ್ಮ ಸಂಕಲ್ಪವಾಗಿದೆ. ಈ ಜಾಗೃತಿ ಅಭಿಯಾನವು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಪರಿಣಾಮಕಾರಿ ವೇದಿಕೆಯಾಗಲಿದೆ. ಜಿಲ್ಲಾಡಳಿತ ಸದಾ ಸಂತ್ರಸ್ತರ ಬೆಂಬಲಕ್ಕೆ ನಿಲ್ಲಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಉದಯೋನ್ಮುಖ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ವೈ. ಪಕ್ಕಣ್ಣ ಬೆಳೇರಿ ಮಾತನಾಡಿ, ತಾವು 2018ರಲ್ಲಿ ಜೀತ ಪದ್ಧತಿಯಿಂದ ಬಿಡುಗಡೆಯಾಗಿ ನಂತರ ಇತರ ಸಂತ್ರಸ್ತರೊಂದಿಗೆ ಸೇರಿ ಅಖಿಲ ಕರ್ನಾಟಕ ಜೀತ ಮುಕ್ತ ಸಂಘವನ್ನು ಸ್ಥಾಪಿಸಿರುವುದಾಗಿ ತಿಳಿಸಿದರು. ಯಾರೂ ಉದ್ಯೋಗದ ಆಸೆಯಿಂದ ಊರು ಬಿಟ್ಟು ಹೋಗಿ ಜೀತ ಪದ್ಧತಿ ಹಾಗೂ ಮಾನವ ಕಳ್ಳಸಾಗಾಣಿಕೆಯ ಬಲಿಯಾಗಬಾರದು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ ಭವನದಿಂದ ವಾಹನ ಜಾಥಾ ಆರಂಭಗೊಂಡು ಲಕ್ಕುಂಡಿ, ನಾಗರಾಳ, ಹಳಿಕೇರಿ, ಮಾರ್ಕೆಟ್ ಪ್ರದೇಶ, ಗದಗ ಟೌನ್ ಹಾಗೂ ಇಟಿಗಿ ಸೇರಿದಂತೆ ವಿವಿಧ ಭಾಗಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿ ವಿರೋಧಿ ಜಾಗೃತಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರೆ, ಜಿ-ಸ್ಕ್ವಾಡ್ ತಂಡದವರು ಕಿರು ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧಾ ಮಣ್ಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ನೀಲಗುಂದ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸಂದೀಪ್ ಪಾಟೀಲ್, ಬಿ.ಜೆ.ಎಂ. ಸ್ವಯಂಸೇವಾ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ವೇಣುಗೋಪಾಲ, ಸಮಾಜ ಸೇವಕಿ ಚಿತ್ರಾ ವಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP