
ಬೆಂಗಳೂರು, 04 ಆಗಸ್ಟ್ (ಹಿ.ಸ.):
ಆ್ಯಂಕರ್:
ಕಾಂಗ್ರೆಸ್ ಮಹಿಳೆಯರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರೂ, ಅಧಿಕಾರ ಹಂಚಿಕೆಯಲ್ಲಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಾಂಗ್ರೆಸ್‌ನ ಮಹಿಳಾ ಹಕ್ಕುಗಳ ಪರ ನಿಲುವಿನ ಮುಖವಾಡ ಕಳಚಿಬಿದ್ದಿದೆ ಎಂದು ಟೀಕಿಸಿರುವ ಅವರು, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವರ್ಷಗಳ ಕಾಲ ವಿಳಂಬಗೊಳಿಸಿದ್ದ ಕಾಂಗ್ರೆಸ್, ಈಗ ಕರ್ನಾಟಕದಲ್ಲೂ ಒಬಿಸಿ ಮಹಿಳಾ ಶಾಸಕಿಗೆ ಸಚಿವ ಸಂಪುಟದಲ್ಲಿ ಅವಕಾಶ ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.
ಅಧಿಕೃತ ಪಟ್ಟಿಯಲ್ಲಿ ಹೆಸರು ಪ್ರಕಟವಾದ ಬಳಿಕವೂ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ನೀಡದೆ ಒಬಿಸಿ ಮಹಿಳಾ ನಾಯಕಿಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಸಬಲೀಕರಣ, ಸಮಾನ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ಮಾತುಗಳನ್ನಾಡುವ ಕಾಂಗ್ರೆಸ್, ವಾಸ್ತವದಲ್ಲಿ ಮಹಿಳಾ ವಿರೋಧಿ, ಒಬಿಸಿ ವಿರೋಧಿ ಮತ್ತು ಸಾಮಾಜಿಕ ನ್ಯಾಯ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಸಾಮಾಜಿಕ ನ್ಯಾಯವನ್ನು ಕೇವಲ ರಾಜಕೀಯ ಘೋಷಣೆಯಾಗಿ ಬಳಸುವುದನ್ನು ನಿಲ್ಲಿಸಬೇಕು ಎಂದು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.