
ಇಸ್ಲಾಮಾಬಾದ್, 17 ಆಗಸ್ಟ್ (ಹಿ.ಸ.):
ಆ್ಯಂಕರ್:
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಸ್ವತಂತ್ರಗೊಳಿಸುವ ಉದ್ದೇಶದಿಂದ ಸಶಸ್ತ್ರ ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ), ಕಳೆದ ಎಂಟು ದಿನಗಳಲ್ಲಿ ಪಾಕಿಸ್ತಾನ ಸೇನೆಯ 26 ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ.
ಬಿಎಲ್‌ಎ ವಕ್ತಾರ ಜೈಂದ್ ಬಲೋಚ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಆ.9ರಿಂದ 16ರವರೆಗೆ ಬಲೂಚಿಸ್ತಾನದ 22 ವಿವಿಧ ಸ್ಥಳಗಳಲ್ಲಿ ಪಾಕಿಸ್ತಾನ ಸೇನೆ ಹಾಗೂ ಭದ್ರತಾ ಪಡೆಗಳ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ 26 ಸೇನಾ ಅಧಿಕಾರಿಗಳು ಹತರಾಗಿದ್ದು, ಭದ್ರತಾ ಪಡೆಗಳ ಓರ್ವ ಸದಸ್ಯನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ತಿಳಿಸಲಾಗಿದೆ.
ದಾಳಿಯ ವೇಳೆ ಪೊಲೀಸ್ ಠಾಣೆಗಳು, ಭದ್ರತಾ ಚೌಕಿಗಳು ಹಾಗೂ ಹಲವು ಸೇತುವೆಗಳನ್ನು ಸ್ಫೋಟಿಸಲಾಗಿದ್ದು, ಒಂಬತ್ತು ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಸೇನಾ ನೆಲೆಗಳು ಮತ್ತು ಪೊಲೀಸ್ ಠಾಣೆಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಲ್‌ಎ ಹೇಳಿದೆ.
ಆ.12ರಂದು ಚಗೈಯ ಚೆಥರ್ ಪೊಲೀಸ್ ಠಾಣೆಯನ್ನು ಸ್ಫೋಟಿಸಿ ಧ್ವಂಸಗೊಳಿಸಲಾಗಿದ್ದು, ಅದೇ ರಾತ್ರಿ ಕಲಾತ್‌ನ ರುಡಿಂಜೊ ಪ್ರದೇಶದಲ್ಲಿ ಸೇನಾ ವಾಹನಗಳ ಮೇಲೆ ನಡೆದ ದಾಳಿಯಲ್ಲಿ 17 ಅಧಿಕಾರಿಗಳು ಹಾಗೂ ಯೋಧರು ಮೃತಪಟ್ಟಿದ್ದಾರೆ ಎಂದು ಸಂಘಟನೆ ಹೇಳಿಕೊಂಡಿದೆ.
ಇದೇ ವೇಳೆ, ಪಾಕಿಸ್ತಾನ ಸೇನೆ ಮಸ್ತುಂಗ್ ಮತ್ತು ಖುಜ್ದಾರ್ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ದಾಳಿ ನಡೆಸಿದ್ದು, ಡ್ರೋನ್‌ಗಳನ್ನೂ ಬಳಸಿದೆ ಎಂದು ವರದಿಯಾಗಿದೆ. ಕ್ವೆಟ್ಟಾದಲ್ಲಿ ಅಫ್ಘಾನ್ ಸೇನೆಯ ಮಾಜಿ ಕಮಾಂಡರ್ ಒಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ವಸತಿ ಪ್ರದೇಶಗಳಲ್ಲೂ ಡ್ರೋನ್‌ಗಳನ್ನು ಹಾರಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.