
ಜಕಾರ್ತಾ (ಇಂಡೋನೇಷ್ಯಾ), 15 ಆಗಸ್ಟ್ (ಹಿ.ಸ.):
ಆ್ಯಂಕರ್:
ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದ ಕರಾವಳಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವು ಮನೆಗಳು ಹಾಗೂ ಸಾರ್ವಜನಿಕ ಕಟ್ಟಡಗಳು ಹಾನಿಗೊಳಗಾಗಿವೆ.
ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ಎಂಡೆ ನಗರದಿಂದ ಸುಮಾರು 68 ಕಿ.ಮೀ. ವಾಯವ್ಯಕ್ಕೆ ಬೆಳಗ್ಗೆ 6ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಭೂಕಂಪದ ತೀವ್ರತೆ 7.7ರಷ್ಟಿತ್ತು. ಬಳಿಕ ಹಲವು ಬಾರಿ ಭೂಕಂಪನದ ನಂತರದ ಕಂಪನಗಳು ಸಂಭವಿಸಿವೆ.
ಭೂಕಂಪದ ಹಿನ್ನೆಲೆಯಲ್ಲಿ ಸುನಾಮಿ ಆತಂಕ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಬಳಿಕ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಲಾಯಿತು. ಕರಾವಳಿ ಪ್ರದೇಶದ ಜನರು ಸಮುದ್ರ ತೀರದಿಂದ ದೂರವಿದ್ದು, ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿತ್ತು.
ಸಿಕ್ಕಾ ಜಿಲ್ಲೆಯ ತಾಲಿಬುರಾ ಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪದ ತೀವ್ರ ಪರಿಣಾಮ ಕಂಡುಬಂದಿದೆ. ಮಂಗ್ಗರಾಯ್ ರೀಜೆನ್ಸಿಯ ವೆಸ್ಟ್ ಸಿಬಲ್ ಜಿಲ್ಲೆಯ ಲೆಂಡಾ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದಿದೆ. ಹಲವು ಮನೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಭೂಕಂಪದ ವೇಳೆ ನಿದ್ದೆಯಲ್ಲಿದ್ದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಕಟ್ಟಡಗಳು ಕುಸಿಯುತ್ತಿರುವುದು ಹಾಗೂ ಆತಂಕಗೊಂಡ ಜನರು ಓಡುತ್ತಿರುವುದು ಕಂಡುಬಂದಿದೆ.
ಫ್ಲೋರೆಸ್ ದ್ವೀಪವು ಜ್ವಾಲಾಮುಖಿ ಸರೋವರಗಳು ಹಾಗೂ ಕೊಮೊಡೊ ರಾಷ್ಟ್ರೀಯ ಉದ್ಯಾನವನದ ಪ್ರವೇಶದ್ವಾರವಾಗಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಭೌಗೋಳಿಕವಾಗಿ ಸಕ್ರಿಯ ಪ್ರದೇಶದಲ್ಲಿರುವ ಇಂಡೋನೇಷ್ಯಾದಲ್ಲಿ ಹಿಂದೆ ಹಲವು ಬಾರಿ ಪ್ರಬಲ ಭೂಕಂಪಗಳು ಸಂಭವಿಸಿವೆ. 2004ರಲ್ಲಿ ಸುಮಾತ್ರಾ ದ್ವೀಪದಲ್ಲಿ 9.1 ತೀವ್ರತೆಯ ಭೂಕಂಪ ಹಾಗೂ ಸುನಾಮಿ ಸಂಭವಿಸಿ ಎರಡು ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.