
ವಾಷಿಂಗ್ಟನ್, 13 ಆಗಸ್ಟ್ (ಹಿ.ಸ.):
ಆ್ಯಂಕರ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ನಿಕಟ ಹಾಗೂ ವಿಶ್ವಾಸಾರ್ಹ ಸಹಚರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಶೀಘ್ರದಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಅವರು ವೈಟ್‌ಹೌಸ್‌ನಿಂದ ನಿರ್ಗಮಿಸಲಿದ್ದಾರೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ತಿಳಿಸಿದ್ದಾರೆ.
ಲೆವಿಟ್ ಅವರ ನಿರ್ಧಾರವನ್ನು ಸ್ವಾಗತಿಸಿರುವ ಟ್ರಂಪ್, ಅವರು ಇನ್ನು ಮುಂದೆ ಕುಟುಂಬ ಹಾಗೂ ತಮ್ಮ ಪುಟ್ಟ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ ಎಂದು ಹೇಳಿದ್ದಾರೆ. ಲೆವಿಟ್ ಅವರು ತಮ್ಮ ಬಾಹ್ಯ ಸಲಹೆಗಾರರಲ್ಲಿ ಪ್ರಮುಖರಾಗಿರಲಿದ್ದು, ರಿಪಬ್ಲಿಕನ್ ಪಕ್ಷದ ಪ್ರಭಾವಿ ಧ್ವನಿಯಾಗಿ ಮುಂದುವರಿಯಲಿದ್ದಾರೆ. 2026ರ ಮಧ್ಯಂತರ ಚುನಾವಣೆಗಳಲ್ಲಿಯೂ ಅವರು ಪಕ್ಷಕ್ಕೆ ನೆರವಾಗಲಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ವೈಟ್‌ಹೌಸ್‌ನಲ್ಲಿ ಲೆವಿಟ್ ಉತ್ತಮ ನಾಯಕತ್ವ ನೀಡಿದ್ದಾರೆ. 2018ರಿಂದ ನ್ಯಾಯ, ಸ್ವಾತಂತ್ರ್ಯ ಮತ್ತು ಮುಕ್ತತೆಗಾಗಿ ಅವರು ಹೋರಾಡಿದ್ದು, 2024ರ ಐತಿಹಾಸಿಕ ಚುನಾವಣಾ ಪ್ರಚಾರದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದ್ದಾರೆ.
ಮಧ್ಯಂತರ ಚುನಾವಣೆಗಳಿಗೆ ಮೂರು ತಿಂಗಳಿಗಿಂತ ಕಡಿಮೆ ಅವಧಿ ಬಾಕಿಯಿರುವ ಸಂದರ್ಭದಲ್ಲಿ ಲೆವಿಟ್ ಅವರ ನಿರ್ಗಮನವು ವೈಟ್‌ಹೌಸ್‌ನಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಸಿಎನ್ಎನ್ ವರದಿ ಹೇಳಿದೆ. ಇರಾನ್‌ನೊಂದಿಗಿನ ಸಂಘರ್ಷ ಮತ್ತು ಏರುತ್ತಿರುವ ಇಂಧನ ಬೆಲೆಗಳ ನಡುವೆ ಟ್ರಂಪ್ ಅವರ ಜನಪ್ರಿಯತೆ ಕುಸಿದಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.
28 ವರ್ಷದ ಲೆವಿಟ್ ವೈಟ್‌ಹೌಸ್‌ನ ಇತಿಹಾಸದಲ್ಲೇ ಅತ್ಯಂತ ಕಿರಿಯ ಪತ್ರಿಕಾ ಕಾರ್ಯದರ್ಶಿಯಾಗಿ ದಾಖಲೆ ನಿರ್ಮಿಸಿದ್ದಾರೆ. ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಅವರು ಅತ್ಯಂತ ಪ್ರಭಾವಶಾಲಿ ಅಧಿಕಾರಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. ಅಧ್ಯಕ್ಷರು ಮತ್ತು ಅವರ ನೀತಿಗಳನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಲ್ಲದೆ, ಕಠಿಣ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರೊಂದಿಗೆ ವಾಗ್ವಾದ ನಡೆಸಿದ ಸಂದರ್ಭಗಳೂ ಇದ್ದವು.
ಟ್ರಂಪ್ ಅವರ ಘೋಷಣೆಯ ಬಳಿಕ ಪ್ರತಿಕ್ರಿಯಿಸಿರುವ ಲೆವಿಟ್, ಮಗಳ ಜನನದ ಬಳಿಕ ವೈಟ್‌ಹೌಸ್‌ಗೆ ಮರಳಿದಾಗ ಉತ್ತಮ ತಾಯಿಯಾಗುವ ಕುರಿತು ಹೆಚ್ಚಿನ ಗಮನಹರಿಸಬೇಕೆಂಬ ಭಾವನೆ ಮೂಡಿತ್ತು ಎಂದು ಹೇಳಿದ್ದಾರೆ. ವೈಟ್‌ಹೌಸ್ ತೊರೆಯುವ ನಿರ್ಧಾರದಿಂದ ಸಂತೋಷವೂ ಇದೆ, ದುಃಖವೂ ಇದೆ ಎಂದು ಅವರು ತಿಳಿಸಿದ್ದಾರೆ.
ಮೇ 1ರಂದು ಮಗಳು ವಿವಿಯಾನಾ ಜನಿಸಿದ ಬಳಿಕ ಲೆವಿಟ್ ಸುಮಾರು ಒಂದು ತಿಂಗಳ ಕಾಲ ರಜೆ ಪಡೆದಿದ್ದರು. ಇದಕ್ಕೂ ಮೊದಲು 2024ರ ಜುಲೈನಲ್ಲಿ ಮೊದಲ ಮಗುವಿನ ಜನನದ ಸಂದರ್ಭದಲ್ಲಿ ಕೇವಲ ನಾಲ್ಕು ದಿನಗಳ ರಜೆ ಪಡೆದಿದ್ದರು.
ಟ್ರಂಪ್ ಅವರ ಮೊದಲ ಅವಧಿ ಮುಗಿದ ಬಳಿಕ ಲೆವಿಟ್ ತಮ್ಮ ತವರು ರಾಜ್ಯ ನ್ಯೂ ಹ್ಯಾಂಪ್‌ಶೈರ್‌ನಿಂದ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಬಳಿಕ 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಅವರ ವಿಶ್ವಾಸಾರ್ಹ ಮುಖವಾಗಿ ಹೊರಹೊಮ್ಮಿದ್ದರು.
2026ರ ಮಧ್ಯಂತರ ಚುನಾವಣೆಗಳ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವೈಟ್‌ಹೌಸ್‌ನ ಹೊರಗಿನಿಂದ ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷದ ಪರವಾಗಿ ಪ್ರಮುಖ ಸಂದೇಶವಾಹಕರಾಗಿ ಲೆವಿಟ್ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಅವರ ಸ್ಥಾನಕ್ಕೆ ಯಾರು ನೇಮಕಗೊಳ್ಳಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.