
ಮುಂಬಯಿ, 06 ಜುಲೈ (ಹಿ.ಸ.):
ಆ್ಯಂಕರ್:
ಮಹಾರಾಷ್ಟ್ರದ ಮುಂಬೈ–ಪುಣೆ ರೈಲು ಮಾರ್ಗದಲ್ಲಿರುವ ಠಾಕುರ್ವಾಡಿ ರೈಲು ನಿಲ್ದಾಣದ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದ ಭೂಕುಸಿತದಿಂದ ರೈಲು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮಧ್ಯ ರೈಲ್ವೆ 14 ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, ಹಳಿಗಳ ದುರಸ್ತಿ ಕಾರ್ಯವನ್ನು ತುರ್ತುವಾಗಿ ಕೈಗೊಂಡಿದೆ.
ಮಧ್ಯ ರೈಲ್ವೆಯ ವಕ್ತಾರ ಸ್ವಪ್ರಿಲ್ ನೀಲಾ ಅವರ ಮಾಹಿತಿ ಪ್ರಕಾರ, ಲೋಣಾವಳಾ ವಿಭಾಗದಲ್ಲಿ ಕಳೆದ ರಾತ್ರಿ 400 ಮಿ.ಮೀ. ಹಾಗೂ ಸೋಮವಾರ ಬೆಳಿಗ್ಗೆ ಕೇವಲ ಮೂರು ಗಂಟೆಗಳಲ್ಲಿ 145 ಮಿ.ಮೀ. ದಾಖಲೆಯ ಮಳೆಯಾಗಿದೆ. ಈ ಭಾರೀ ಮಳೆಯ ಪರಿಣಾಮ ಠಾಕುರ್ವಾಡಿ ನಿಲ್ದಾಣದ ಸಮೀಪ ರೈಲು ಹಳಿಯ ಪಕ್ಕದಲ್ಲಿ ಭೂಕುಸಿತ ಸಂಭವಿಸಿ, ಹಳಿ ಹಾನಿಗೊಳಗಾಗಿದೆ.
ಇದರಿಂದ ಮುಂಬೈ–ಪುಣೆ ಹಾಗೂ ಮುಂಬೈ–ನಾಸಿಕ್ ಮಾರ್ಗಗಳ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿರುವ ರೈಲ್ವೆ ತಾಂತ್ರಿಕ ತಂಡಗಳು ಹಳಿ ಪುನರ್‌ಸ್ಥಾಪನೆಗಾಗಿ ದುರಸ್ತಿ ಕಾರ್ಯದಲ್ಲಿ ತೊಡಗಿವೆ.
ಘಟನೆಯ ಹಿನ್ನೆಲೆಯಲ್ಲಿ ಒಟ್ಟು 14 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಅವುಗಳಲ್ಲಿ ಸಿಎಸ್ಎಂಟಿ–ಪುಣೆ, ಪುಣೆ–ಸೊಲ್ಲಾಪುರ, ಸೊಲ್ಲಾಪುರ–ಪುಣೆ, ಪುಣೆ–ಸಿಎಸ್ಎಂಟಿ, ಸಿಎಸ್ಎಂಟಿ–ಧುಳೆ ಸೇರಿದಂತೆ ಹಲವು ಪ್ರಮುಖ ರೈಲುಗಳು ಸೇರಿವೆ.
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಎಲೆಕ್ಟ್ರಾನಿಕ್ ಮಾಧ್ಯಮ, ನಿಲ್ದಾಣಗಳ ಸೂಚನಾ ಫಲಕಗಳು ಹಾಗೂ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳ ಮೂಲಕ ರೈಲು ಸಂಚಾರದ ಮಾಹಿತಿಯನ್ನು ನಿರಂತರವಾಗಿ ನವೀಕರಿಸುತ್ತಿದೆ. ಪ್ರಯಾಣಿಕರು ತಮ್ಮ ಪ್ರಯಾಣ ಆರಂಭಿಸುವ ಮೊದಲು ರೈಲುಗಳ ವೇಳಾಪಟ್ಟಿ ಮತ್ತು ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.