
ನವದೆಹಲಿ, 06 ಜುಲೈ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕರ್ನಾಟಕದ ಬೆಂಗಳೂರಿನ ಸಮೀಪದ ಕಲ್ಲುಗಣಿಯಲ್ಲಿ ಭಾರೀ ಗ್ರಾನೈಟ್ ಬಂಡೆ ಕುಸಿದು ಏಳು ವಲಸೆ ಕಾರ್ಮಿಕರು ಮೃತಪಟ್ಟ ಹಾಗೂ ಐವರು ಗಾಯಗೊಂಡ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.
ಪ್ರಕರಣದ ಕುರಿತು ಆಯೋಗವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳಿರುವ ವರದಿಯನ್ನು ಎರಡು ವಾರಗಳೊಳಗೆ ಸಲ್ಲಿಸುವಂತೆ ಸೂಚಿಸಿದೆ.
ಮಾಹಿತಿಯ ಪ್ರಕಾರ, ಜುಲೈ 2ರಂದು ಕಲ್ಲುಗಣಿಯಲ್ಲಿ ಎರಡು ಸ್ಟೋನ್ ಕ್ರಷರ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಭಾರೀ ಗ್ರಾನೈಟ್ ಬಂಡೆ ಕುಸಿದ ಪರಿಣಾಮ ಏಳು ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಐವರು ಗಾಯಗೊಂಡಿದ್ದಾರೆ. ಘಟನೆ ಸಂಭವಿಸಿದ ಸಮಯದಲ್ಲಿ ಗಣಿಯಲ್ಲಿ ಕನಿಷ್ಠ 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯಂತೆ, ಈ ದುರಂತವು ಕಲ್ಲುಗಣಿ ಮಾಲೀಕರ ನಿರ್ಲಕ್ಷ್ಯವನ್ನು ಸೂಚಿಸುವಂತಿದೆ ಎಂದು ಎನ್‌ಎಚ್‌ಆರ್‌ಸಿ ಅಭಿಪ್ರಾಯಪಟ್ಟಿದೆ. ಆದರೆ, ದುರಂತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.