ರಾಮಮಂದಿರ ಕಾಣಿಕೆ ದುರುಪಯೋಗ ಆರೋಪ:ವಿಹೆಚ್ಪಿಗೆ ಕಾಂಗ್ರೆಸ್ ತಿರುಗೇಟು
ನವದೆಹಲಿ, 06 ಜುಲೈ (ಹಿ.ಸ.): ಆ್ಯಂಕರ್: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ರಾಮಮಂದಿರ ಕಾಣಿಕೆ ದುರುಪಯೋಗ ಆರೋಪದ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ತೆಗೆದುಕೊಂಡಿರುವ ನಿಲುವನ್ನು ತೀವ್ರವಾಗಿ ಟೀಕಿಸಿದ್ದಾರೆ. ವಿಪಕ್ಷ ನಾಯಕರ
ಕೆ.ಸಿ.ವೇಣುಗೋಪಾಲ ಸಂಗ್ರಹ ಚಿತ್ರ


ನವದೆಹಲಿ, 06 ಜುಲೈ (ಹಿ.ಸ.):

ಆ್ಯಂಕರ್:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ರಾಮಮಂದಿರ ಕಾಣಿಕೆ ದುರುಪಯೋಗ ಆರೋಪದ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ತೆಗೆದುಕೊಂಡಿರುವ ನಿಲುವನ್ನು ತೀವ್ರವಾಗಿ ಟೀಕಿಸಿದ್ದಾರೆ. ವಿಪಕ್ಷ ನಾಯಕರ ವಿರುದ್ಧ ವಿಚಾರಣೆ ನಡೆಸಬೇಕು ಎಂಬ ವಿಹೆಚ್‌ಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಕಳ್ಳನೇ ಕೋಟ್ವಾಲ್‌ಗೆ ಬುದ್ಧಿ ಹೇಳುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ವೇಣುಗೋಪಾಲ್, ರಾಮಮಂದಿರ ಟ್ರಸ್ಟ್ ಅನ್ನು ನರೇಂದ್ರ ಮೋದಿ ಸರ್ಕಾರವೇ ರಚಿಸಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಚಂಪತ್ ರಾಯ್ ಅವರು ವಿಹೆಚ್‌ಪಿಯ ಉಪಾಧ್ಯಕ್ಷರೂ ಹಾಗೂ ಆರ್‌ಎಸ್‌ಎಸ್ ಪ್ರಚಾರಕರೂ ಆಗಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷರು ಪ್ರಧಾನಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರಿಗೆ ಬಿಜೆಪಿ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ ಎಂದು ಹೇಳಿದ್ದಾರೆ.

ಕೇಂದ್ರ ಹಾಗೂ ಉತ್ತರ ಪ್ರದೇಶ ಎರಡೂ ಕಡೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವಾಗ, ಪ್ರಿಯಾಂಕಾ ಗಾಂಧಿ ವಾದ್ರಾ, ಅಖಿಲೇಶ್ ಯಾದವ್ ಅಥವಾ ಇತರ ವಿಪಕ್ಷ ನಾಯಕರ ಪಾತ್ರವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿಹೆಚ್‌ಪಿಯ ವಿಶ್ವಾಸಾರ್ಹತೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ ವೇಣುಗೋಪಾಲ್, ರಾಮಮಂದಿರ ಚಳವಳಿಯು ಬಹುಕಾಲದಿಂದಲೇ ಕಾಣಿಕೆ ಹಣ ದುರುಪಯೋಗದ ಆರೋಪಗಳನ್ನು ಎದುರಿಸುತ್ತಿದೆ ಎಂದು ಹೇಳಿದರು. ಇತ್ತೀಚಿನ ವರದಿಗಳು ಕೂಡ ಭಕ್ತರ ನಂಬಿಕೆಯನ್ನು ರಾಜಕೀಯ ಹಾಗೂ ಆರ್ಥಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ಮತ್ತೆ ಮುನ್ನೆಲೆಗೆ ತಂದಿವೆ ಎಂದು ಅವರು ಆರೋಪಿಸಿದರು.

ಮಂದಿರದ ಪಾವಿತ್ರ್ಯದ ಬಗ್ಗೆ ವಿಹೆಚ್‌ಪಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಈ ಆರೋಪದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಮ್ಮದೇ ಸಂಘಟನೆಯವರ ವಿರುದ್ಧ ಕ್ರಮಕ್ಕೆ ಆಗ್ರಹಿಸದೇ ಇರುವುದೇಕೆ ಎಂದು ಅವರು ಪ್ರಶ್ನಿಸಿದರು.

ರಾಮಮಂದಿರ ನಿರ್ಮಾಣದ ಶ್ರೇಯಸ್ಸು ಪಡೆಯಲು ಬಿಜೆಪಿ ನಾಯಕತ್ವ ಮುಂಚೂಣಿಯಲ್ಲಿತ್ತು. ಆದರೆ ಈಗ ತಾವೇ ನೇಮಿಸಿರುವ ಟ್ರಸ್ಟ್ ತನಿಖೆಯ ವ್ಯಾಪ್ತಿಗೆ ಬಂದಿರುವಾಗ ಮೌನ ವಹಿಸಿದೆ ಎಂದು ಟೀಕಿಸಿದರು. ಗಂಭೀರ ಆರೋಪಗಳಿಂದ ಸಂಕಷ್ಟಕ್ಕೆ ಸಿಲುಕಿರುವ ವಿಹೆಚ್‌ಪಿ ಈಗ ಗಮನ ಬೇರೆಡೆ ಸೆಳೆಯಲು ಹಾಗೂ ಟೀಕಾಕಾರರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಮಮಂದಿರ ಕಾಣಿಕೆ ದುರುಪಯೋಗ ಪ್ರಕರಣವನ್ನು ಭಾರತದ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂಬ ಕಾಂಗ್ರೆಸ್‌ನ ಬೇಡಿಕೆಯನ್ನು ವೇಣುಗೋಪಾಲ್ ಪುನರುಚ್ಚರಿಸಿದರು. ಪ್ರಸ್ತುತ ರಚಿಸಲಾದ ಎಸ್‌ಐಟಿ ನಿಜವಾದ ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಉಲ್ಲೇಖನೀಯವಾಗಿ, ಕಳೆದ ಶನಿವಾರ ವಿಹೆಚ್‌ಪಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಆಲೋಕ್ ಕುಮಾರ್ ಅವರು ಆಶುತೋಷ್ ತಿವಾರಿ ಅವರಿಗೆ ಪತ್ರ ಬರೆದು, ಪ್ರಿಯಾಂಕಾ ಗಾಂಧಿ ವಾದ್ರಾ, ರಾಮ್ ಗೋಪಾಲ್ ಯಾದವ್, ಸಂಜಯ್ ಸಿಂಗ್ ಹಾಗೂ ಅರವಿಂದ ಕೇಜ್ರಿವಾಲ್ ಅವರು ನೀಡಿರುವ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಾಯಕರನ್ನು ವಿಚಾರಣೆ ನಡೆಸಿ, ಅವರು ಮಾಡಿದ ಆರೋಪಗಳಿಗೆ ಆಧಾರವೇನು ಎಂಬುದನ್ನು ಪತ್ತೆಹಚ್ಚುವಂತೆ ಪತ್ರದಲ್ಲಿ ಆಗ್ರಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande