
ನವದೆಹಲಿ, 06 ಜುಲೈ (ಹಿ.ಸ.):
ಆ್ಯಂಕರ್:
ರಾಹುಲ್ ಗಾಂಧಿ ಅವರು ರಾಜಸ್ಥಾನದ ಸ್ಥಳೀಯ ಬಸ್ ಹಾಗೂ ಟ್ರಕ್ ಕವಚ ನಿರ್ಮಾಣಗಾರರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳು ಮತ್ತು ಉದ್ಯಮ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿದರು.
ಈ ಕುರಿತು ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ವಿರುದ್ಧದ ನೀತಿಗಳಿಂದ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವುಗಳ ಬೆಳವಣಿಗೆಗೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು.
ರಾಜಸ್ಥಾನದ ಈ ಕಾರ್ಮಿಕರ ಕೌಶಲ್ಯವು ವಿಶ್ವಮಟ್ಟದ್ದಾಗಿದ್ದು, ಫೆರಾರಿ ಮತ್ತು ರೋಲ್ಸ್-ರಾಯ್ಸ್ ಮೋಟಾರ್ ಕಾರ್ಸ್ ಕಂಪನಿಗಳ ಮಟ್ಟದ ಗುಣಮಟ್ಟದ ಕೆಲಸ ಮಾಡುವ ಸಾಮರ್ಥ್ಯ ಅವರಲ್ಲಿದೆ. ಆದರೆ ಅವರಿಗೆ ಅಗತ್ಯವಾದ ಗೌರವ ಮತ್ತು ಬೆಂಬಲ ನೀಡುವ ಬದಲು, ನಿಯಮಗಳ ಭಾರವನ್ನು ಹೇರುವ ಮೂಲಕ ಸಂಕಷ್ಟಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದರು.
ಸಣ್ಣ ಕೈಗಾರಿಕೆಗಳು ಮುಚ್ಚಿದಾಗ ಕೇವಲ ಕಾರ್ಖಾನೆಗಳಷ್ಟೇ ಅಲ್ಲ, ದೇಶದ ಪ್ರತಿಭೆ ಮತ್ತು ಕೌಶಲ್ಯವೂ ನಷ್ಟವಾಗುತ್ತದೆ. ಸಾವಿರಾರು ಶ್ರಮಜೀವಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ಈ ರೀತಿಯ ಕುಶಲ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ತಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.