ರಷ್ಯಾದಿಂದ ಕೀವ್ ಮೇಲೆ ಭೀಕರ ಕ್ಷಿಪಣಿ ದಾಳಿ
ಕೀವ್, 06 ಜುಲೈ (ಹಿ.ಸ.): ಆ್ಯಂಕರ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭಾನುವಾರ ಮಧ್ಯರಾತ್ರಿಯ ನಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ಭಾರೀ ದಾಳಿ ನಡೆಸಿದೆ. ಮುಂಜಾನೆವರೆಗೂ ದಾಳಿ ಮುಂದುವರಿದಿದ್ದು, ನಗರದ ವಿವಿಧ ಭಾಗಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸ
Attack


ಕೀವ್, 06 ಜುಲೈ (ಹಿ.ಸ.):

ಆ್ಯಂಕರ್:

ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭಾನುವಾರ ಮಧ್ಯರಾತ್ರಿಯ ನಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ಭಾರೀ ದಾಳಿ ನಡೆಸಿದೆ. ಮುಂಜಾನೆವರೆಗೂ ದಾಳಿ ಮುಂದುವರಿದಿದ್ದು, ನಗರದ ವಿವಿಧ ಭಾಗಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ. ಕನಿಷ್ಠ ಏಳು ಮಂದಿ ಗಾಯಗೊಂಡಿದ್ದು, ಬಹುಮಹಡಿ ವಸತಿ ಕಟ್ಟಡಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಕ ಹಾನಿಯಾಗಿದೆ.

ಉಕ್ರೇನ್ ವಾಯುಪಡೆ ನೀಡಿರುವ ಮಾಹಿತಿಯಂತೆ, ಟರ್ಕಿಯ ಅಂಕಾರಾದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಗೂ ಮುನ್ನ ಈ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಶೃಂಗಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಕೀವ್ ನಗರದ ಮೇಯರ್ ವಿಟಾಲಿ ಕ್ಲಿಟ್ಸ್ಕೋ ಅವರು, ರಷ್ಯಾ ಡ್ರೋನ್‌ಗಳು ಹಾಗೂ ಕ್ರೂಸ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ. ನಗರದ ಪೊಡಿಲ್ಸ್ಕಿ ಜಿಲ್ಲೆಯಲ್ಲಿ ಬಹುಮಹಡಿ ವಸತಿ ಕಟ್ಟಡವು ತೀವ್ರ ಹಾನಿಗೊಳಗಾಗಿದ್ದು, ಅದರೊಳಗೆ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಕೀವ್ ಸಿಟಿ ಮಿಲಿಟರಿ ಆಡಳಿತದ ಮುಖ್ಯಸ್ಥ ಟಿಮುರ್ ತಕಾಚೆಂಕೊ ಅವರ ಪ್ರಕಾರ, ಕಟ್ಟಡದ 7ನೇ ಮತ್ತು 9ನೇ ಮಹಡಿಗಳ ನಡುವಿನ ಭಾಗವು ಭಾಗಶಃ ಕುಸಿದಿದೆ. ಇದೇ ವೇಳೆ ಡಾರ್ನಿಟ್ಸ್ಕಿ ಜಿಲ್ಲೆಯಲ್ಲಿ ಮೂರು ಅಪಾರ್ಟ್‌ಮೆಂಟ್ ಕಟ್ಟಡಗಳಿಗೂ ಹಾನಿಯಾಗಿದೆ. ರಾಜಧಾನಿಯ ಹೊರವಲಯದ ಬುಚಾ ಪ್ರದೇಶದಲ್ಲಿಯೂ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳೀಯ ಕಾಲಮಾನ ರಾತ್ರಿ ಸುಮಾರು 1.40ಕ್ಕೆ ಮೊದಲ ಸ್ಫೋಟ ಸಂಭವಿಸಿದ್ದು, ಬಳಿಕ 2.10 ಮತ್ತು 3.15ರ ವೇಳೆಗೆ ಮತ್ತೊಮ್ಮೆ ಕ್ಷಿಪಣಿ ದಾಳಿಗಳು ನಡೆದವು. ಭಾರೀ ಸ್ಫೋಟಗಳಿಂದ ಬೆಚ್ಚಿಬಿದ್ದ ಸಾವಿರಾರು ನಾಗರಿಕರು ಸುರಕ್ಷತೆಗಾಗಿ ನಗರದ ಭೂಗತ ಮೆಟ್ರೋ ನಿಲ್ದಾಣಗಳಿಗೆ ಧಾವಿಸಿದರು.

ದಾಳಿಗೆ ಕೆಲವೇ ಗಂಟೆಗಳ ಮೊದಲು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ರಷ್ಯಾ ಮತ್ತೊಂದು ದೊಡ್ಡ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಎಚ್ಚರಿಕೆ ನೀಡಿದ್ದರು. ಕಳೆದ ವಾರ ನಡೆದ ರಷ್ಯಾದ ಮತ್ತೊಂದು ಭೀಕರ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದರು.

ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ತಕ್ಷಣ ಹಾಗೂ ನ್ಯಾಟೋ ಶೃಂಗಸಭೆಗೆ ಮುನ್ನ ರಷ್ಯಾ ಉದ್ದೇಶಪೂರ್ವಕವಾಗಿ ಭೀತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ಕಳೆದ ಒಂದು ವಾರದಲ್ಲಿ ಉಕ್ರೇನ್ ಮೇಲೆ ಸುಮಾರು 2,200 ಡ್ರೋನ್‌ಗಳು, 1,730ಕ್ಕೂ ಹೆಚ್ಚು ಮಾರ್ಗದರ್ಶಿತ ವೈಮಾನಿಕ ಬಾಂಬ್‌ಗಳು ಮತ್ತು 106 ಕ್ಷಿಪಣಿಗಳ ದಾಳಿ ನಡೆದಿದೆ ಎಂದು ಅವರು ತಿಳಿಸಿದರು. ಅಲ್ಲದೆ, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯುವ ಸಾಮರ್ಥ್ಯ ಉಕ್ರೇನ್ ಬಳಿ ಇನ್ನೂ ಸಾಕಷ್ಟು ಕೊರತೆಯಿದೆ ಎಂದು ಒಪ್ಪಿಕೊಂಡರು.

ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಒಳನಾಡಿನ ತೈಲ ಸಂಸ್ಕರಣಾಗಾರಗಳು, ಬಂದರುಗಳು ಹಾಗೂ ಸೇನಾ ಕಾರ್ಖಾನೆಗಳಂತಹ ಪ್ರಮುಖ ಮೂಲಸೌಕರ್ಯಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದೆ.

ಇದೇ ವೇಳೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 90 ನಿಮಿಷಗಳ ದೂರವಾಣಿ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ವೇಳೆ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ನೆರವಾಗುವ ಪ್ರಸ್ತಾವನೆಯನ್ನು ಟ್ರಂಪ್ ಮತ್ತೊಮ್ಮೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ರಷ್ಯಾದ ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ನೆರೆಯ ಪೋಲೆಂಡ್ ತನ್ನ ವಾಯುಪ್ರದೇಶದ ಭದ್ರತೆಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯುದ್ಧ ವಿಮಾನಗಳನ್ನು ನಿಯೋಜಿಸಿದೆ.

ರಷ್ಯಾ–ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಟರ್ಕಿಯ ಅಂಕಾರಾದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ ಈ ಸಂಘರ್ಷವೇ ಪ್ರಮುಖ ಚರ್ಚಾ ವಿಷಯವಾಗುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande