ಮ್ಯಾನ್ಮಾರ್ ಗಡಿಯಲ್ಲಿ ಯುದ್ಧ ಪರಿಸ್ಥಿತಿ
ಬಾಂಗ್ಲಾದೇಶದಲ್ಲಿ ಹೊಸ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಆತಂಕ
ಮ್ಯಾನ್ಮಾರ್ ಗಡಿಯಲ್ಲಿ ಯುದ್ಧ ಪರಿಸ್ಥಿತಿ


ಢಾಕಾ, 04 ಜುಲೈ (ಹಿ.ಸ.):

ಆ್ಯಂಕರ್:

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನೆ ಮತ್ತು ಸಶಸ್ತ್ರ ಗುಂಪುಗಳ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ–ಮ್ಯಾನ್ಮಾರ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ಭಾಗದ ಟೆಕ್ನಾಫ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರು ಹಿಂಸಾಚಾರದಿಂದಾಗಿ ಮತ್ತೊಮ್ಮೆ ಸಾವಿರಾರು ರೋಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶದತ್ತ ವಲಸೆ ಬರಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಹಾಗೂ ರಖೈನ್‌ನಲ್ಲಿ ಇರುವ ತಮ್ಮ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರುವ ರೋಹಿಂಗ್ಯಾ ಸಮುದಾಯದವರ ಮಾಹಿತಿ ಪ್ರಕಾರ, ಕಳೆದ ಎರಡು ದಿನಗಳಿಂದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳ ಶಬ್ದ ಕೇಳಿಬರುತ್ತಿದೆ. ಮ್ಯಾನ್ಮಾರ್ ಸೇನೆಯು ಮೌಂಗ್‌ಡಾವ್, ಬುಥಿಡಾಂಗ್ ಸೇರಿದಂತೆ ಅರಕಾನ್ ಆರ್ಮಿಯ ನಿಯಂತ್ರಣದಲ್ಲಿರುವ ಹಲವು ಪ್ರದೇಶಗಳಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.

ಗಡಿಯಲ್ಲಿರುವ ಶಾಹ್ ಪೊರಿರ್ ದ್ವೀಪದ ನಿವಾಸಿ ಶಾಹ್ ಆಲಂ ಮಾತನಾಡಿ, ಸ್ಫೋಟಗಳ ತೀವ್ರತೆಗೆ ಮನೆಗಳೇ ಭೂಕಂಪ ಸಂಭವಿಸಿದಂತೆ ನಡುಗಿದವು ಎಂದು ಹೇಳಿದ್ದಾರೆ.

ಇದಾಗ್ಯೂ, ಸಾವಿರಾರು ರೋಹಿಂಗ್ಯಾ ಜನರು ನಾಫ್ ನದಿಯ ದಡದಲ್ಲಿ ಬಾಂಗ್ಲಾದೇಶ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ ಎಂಬ ವರದಿಗಳಿಗೆ ಬಾಂಗ್ಲಾದೇಶ ಸರ್ಕಾರ ಅಧಿಕೃತ ದೃಢೀಕರಣ ನೀಡಿಲ್ಲ. ಗಡಿ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಕ್ಸ್ ಬಜಾರ್‌ನ ಬಾಲುಖಾಲಿ ನಿರಾಶ್ರಿತರ ಶಿಬಿರದಲ್ಲಿರುವ ರೋಹಿಂಗ್ಯಾ ಸಮುದಾಯದ ಮುಖಂಡರೊಬ್ಬರು, ಮೌಂಗ್‌ಡಾವ್ ಪ್ರದೇಶದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅನೇಕ ಕುಟುಂಬಗಳು ಸುರಕ್ಷಿತ ಸ್ಥಳಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಬಾಂಗ್ಲಾದೇಶದಲ್ಲಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. 2017ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಬಳಿಕ ಲಕ್ಷಾಂತರ ಮಂದಿ ತಮ್ಮ ನೆಲೆಯನ್ನು ತೊರೆದು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದರು. ಇದೀಗ ರಖೈನ್‌ನಲ್ಲಿ ಮತ್ತೆ ಹಿಂಸಾಚಾರ ಉಲ್ಬಣವಾಗಿರುವುದು ಗಡಿ ಭದ್ರತೆ ಮತ್ತು ಮಾನವೀಯ ಬಿಕ್ಕಟ್ಟಿನ ಕುರಿತು ಹೊಸ ಆತಂಕಕ್ಕೆ ಕಾರಣವಾಗಿದೆ.

ಟೆಕ್ನಾಫ್ ಉಪಜಿಲ್ಲಾ ಆಡಳಿತದ ಪ್ರಕಾರ, ಇದುವರೆಗೆ ಹೊಸದಾಗಿ ಯಾವುದೇ ಅಕ್ರಮ ಗಡಿ ಪ್ರವೇಶ ಪ್ರಕರಣ ಅಧಿಕೃತವಾಗಿ ದಾಖಲಾಗಿಲ್ಲ. ಆದರೆ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ನಾಫ್ ನದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಿದ್ದು, ಭದ್ರತೆಯನ್ನು ಹೆಚ್ಚಿಸಿದೆ.

ಇದೇ ವೇಳೆ ಮ್ಯಾನ್ಮಾರ್‌ನಲ್ಲಿನ ಸಂಘರ್ಷದ ಪರಿಣಾಮ ನೆರೆಯ ಥೈಲ್ಯಾಂಡ್ ಮೇಲೂ ಬಿದ್ದಿದೆ. ಮ್ಯಾನ್ಮಾರ್ ಸೇನೆ ಮತ್ತು ಕರೇನ್ ನ್ಯಾಷನಲ್ ಲಿಬರೇಷನ್ ಆರ್ಮಿ ನಡುವಿನ ಘರ್ಷಣೆಯ ವೇಳೆ ಗಡಿ ದಾಟಿ ನಡೆದ ಗುಂಡಿನ ದಾಳಿಯಿಂದ ಥೈಲ್ಯಾಂಡ್‌ನ ಟಾಕ್ ಪ್ರಾಂತ್ಯದಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಥೈ ಅಧಿಕಾರಿಗಳು ಮ್ಯಾನ್ಮಾರ್‌ಗೆ ಸಂಪರ್ಕಿಸುವ ಎಲ್ಲಾ ಗಡಿ ಮಾರ್ಗಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande