ರಷ್ಯಾ ಮೇಲೆ ಉಕ್ರೇನ್ನ ಭಾರೀ ಡ್ರೋನ್ ದಾಳಿ
ಮಾಸ್ಕೋ/ಕೀವ್, 05 ಜುಲೈ (ಹಿ.ಸ.): ಆ್ಯಂಕರ್: ರಷ್ಯಾ ವಿರುದ್ಧ ಉಕ್ರೇನ್ ಮತ್ತೊಮ್ಮೆ ಭಾರೀ ಪ್ರಮಾಣದ ಡ್ರೋನ್ ದಾಳಿ ನಡೆಸಿದ್ದು, ಸೇಂಟ್ ಪೀಟರ್ಸ್‌ಬರ್ಗ್ ಸಮೀಪದ ತೈಲ ಸಂಸ್ಕರಣಾಗಾರ ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಈ ದಾಳಿಯಲ್ಲಿ ಸುಮಾರು 500 ದೂರ
ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಸಮೀಪದ ತೈಲ ಸಂಸ್ಕರಣಾಗಾರದ ಮೇಲೆ ದಾಳಿ


ಮಾಸ್ಕೋ/ಕೀವ್, 05 ಜುಲೈ (ಹಿ.ಸ.):

ಆ್ಯಂಕರ್:

ರಷ್ಯಾ ವಿರುದ್ಧ ಉಕ್ರೇನ್ ಮತ್ತೊಮ್ಮೆ ಭಾರೀ ಪ್ರಮಾಣದ ಡ್ರೋನ್ ದಾಳಿ ನಡೆಸಿದ್ದು, ಸೇಂಟ್ ಪೀಟರ್ಸ್‌ಬರ್ಗ್ ಸಮೀಪದ ತೈಲ ಸಂಸ್ಕರಣಾಗಾರ ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಈ ದಾಳಿಯಲ್ಲಿ ಸುಮಾರು 500 ದೂರ ವ್ಯಾಪ್ತಿಯ ಡ್ರೋನ್‌ಗಳನ್ನು ಬಳಸಲಾಗಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದಾಳಿಯ ವಿಡಿಯೊವನ್ನು ಹಂಚಿಕೊಂಡಿದ್ದು, ಸೇಂಟ್ ಪೀಟರ್ಸ್‌ಬರ್ಗ್ ಬಂದರಿನ ತೈಲ ಸಂಗ್ರಹಣಾ ಕೇಂದ್ರದಿಂದ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಅದರಲ್ಲಿ ಕಾಣಿಸುತ್ತವೆ.

ಅಮೆರಿಕದ ಎಬಿಸಿ ನ್ಯೂಸ್ ವರದಿ ಪ್ರಕಾರ, ಸೇಂಟ್ ಪೀಟರ್ಸ್‌ಬರ್ಗ್ ಬಂದರಿನ ತೈಲ ಸೌಲಭ್ಯಗಳ ಜೊತೆಗೆ ಕ್ರೋನ್‌ಸ್ಟಾಡ್ ನೌಕಾನೆಲೆ ಸುತ್ತಮುತ್ತಲಿನ ಸೇನಾ ಮೂಲಸೌಕರ್ಯಗಳ ಮೇಲೂ ಯಶಸ್ವಿ ದಾಳಿ ನಡೆಸಲಾಗಿದೆ ಎಂದು ಜೆಲೆನ್ಸ್ಕಿ ತಿಳಿಸಿದ್ದಾರೆ. ರಷ್ಯಾದ ರಾಜಧಾನಿ ಮಾಸ್ಕೋವನ್ನೇ ಸುಮಾರು 200 ಡ್ರೋನ್‌ಗಳು ಗುರಿಯಾಗಿಸಿಕೊಂಡಿದ್ದವು ಎಂದು ನಗರದ ಮೇಯರ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉಕ್ರೇನ್, ರಷ್ಯಾದ ಒಳಭಾಗದಲ್ಲಿರುವ ತೈಲ ಸಂಸ್ಕರಣಾಗಾರಗಳು, ಇಂಧನ ಮೂಲಸೌಕರ್ಯಗಳು ಹಾಗೂ ರಕ್ಷಣಾ ಕೈಗಾರಿಕೆಗಳಿಗೆ ನಿರಂತರವಾಗಿ ದೂರ ವ್ಯಾಪ್ತಿಯ ಡ್ರೋನ್ ದಾಳಿಗಳನ್ನು ನಡೆಸುತ್ತಿದ್ದು, ರಷ್ಯಾದ ಸರಬರಾಜು ವ್ಯವಸ್ಥೆಗೆ ತೀವ್ರ ಹೊಡೆತ ನೀಡುವ ಪ್ರಯತ್ನ ಮಾಡುತ್ತಿದೆ.

ಈ ದಾಳಿಗಳ ಪರಿಣಾಮವಾಗಿ ರಷ್ಯಾದ ಹಲವು ಪ್ರದೇಶಗಳಲ್ಲಿ ಇಂಧನ ಕೊರತೆ ಉಂಟಾಗಿದ್ದು, ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಉದ್ದ ಸಾಲುಗಳು ಕಂಡುಬಂದಿವೆ. ಆಕ್ರಮಿತ ಕ್ರಿಮಿಯಾದಲ್ಲಿಯೂ ಇಂಧನ ಅಭಾವ ತಲೆದೋರಿದ್ದು, ಅಲ್ಲಿನ ಆಡಳಿತ ತುರ್ತು ಪರಿಸ್ಥಿತಿ ಘೋಷಿಸಿದೆ. ವಿದ್ಯುತ್ ವ್ಯತ್ಯಯ ಮತ್ತು ಭದ್ರತಾ ಕಾರಣಗಳಿಂದ ಕೆಲ ಪ್ರದೇಶಗಳಲ್ಲಿ ಕರ್ಫ್ಯೂ ಕೂಡ ಜಾರಿಯಲ್ಲಿದೆ.

ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇನಾ ಸಮವಸ್ತ್ರ ಧರಿಸಿ ಮುಂಚೂಣಿ ಸೇನಾ ನೆಲೆಗೆ ಭೇಟಿ ನೀಡಿದರು. ಇದೇ ವೇಳೆ, ಪೂರ್ವ ಡೊನ್‌ಬಾಸ್ ಪ್ರದೇಶದ ಪ್ರಮುಖ ರಕ್ಷಣಾ ಕೇಂದ್ರವಾದ ಕೋಸ್ಟಿಯಾಂಟಿನಿವ್ಕಾ ನಗರವನ್ನು ತಮ್ಮ ಪಡೆಗಳು ವಶಪಡಿಸಿಕೊಂಡಿವೆ ಎಂದು ರಷ್ಯಾ ಸೇನೆ ಶನಿವಾರ ಹೇಳಿಕೊಂಡಿದೆ. ಈ ಮಾಹಿತಿ ದೃಢಪಟ್ಟರೆ, ಪ್ರಸಕ್ತ ವರ್ಷದಲ್ಲಿ ಯುದ್ಧರಂಗದಲ್ಲಿ ರಷ್ಯಾಕ್ಕೆ ದೊರೆಯುವ ಮೊದಲ ಮಹತ್ವದ ಯಶಸ್ಸಾಗಲಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಪೋಲೆಂಡ್‌ನ ರಕ್ಷಣಾ ವಿಶ್ಲೇಷಕ ಹಾಗೂ ರೋಚನ್ ಕನ್ಸಲ್ಟಿಂಗ್ ನಿರ್ದೇಶಕ ಕಾನ್ರಾಡ್ ಮುಜಿಕಾ ಅವರ ಪ್ರಕಾರ, ರಷ್ಯಾ ಇನ್ನೂ ನಿಧಾನಗತಿಯಲ್ಲಿ ಮುನ್ನಡೆಯುತ್ತಿದ್ದು, ಮೇ ತಿಂಗಳಲ್ಲಿ ವಶಪಡಿಸಿಕೊಂಡ ಪ್ರದೇಶಕ್ಕಿಂತ ಹೆಚ್ಚಿನ ಭೂಭಾಗವನ್ನು ನಂತರ ಕಳೆದುಕೊಂಡಿರುವ ಸಾಧ್ಯತೆಯೂ ಇದೆ. ಸ್ವತಂತ್ರ ವಿಶ್ಲೇಷಕರು ಹಾಗೂ ಪಾಶ್ಚಾತ್ಯ ಗುಪ್ತಚರ ವರದಿಗಳ ಪ್ರಕಾರ, ಈ ಯುದ್ಧದಲ್ಲಿ ರಷ್ಯಾ ಸೇನೆಗೆ ಭಾರೀ ಪ್ರಮಾಣದ ಮಾನವ ಮತ್ತು ಸೈನಿಕ ನಷ್ಟ ಉಂಟಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande