
ಚಂಡೀಗಢ, 27 ಜುಲೈ (ಹಿ.ಸ.):
ಆ್ಯಂಕರ್:
ಪಂಜಾಬ್ನ ಸಂಗ್ರೂರು ನಗರದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಚೇರಿಯ ಮೇಲೆ ದುಷ್ಕರ್ಮಿಗಳು ಮಧ್ಯರಾತ್ರಿ ಪೆಟ್ರೋಲ್ ಬಾಂಬ್ ಬಳಸಿ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ದಾಳಿಯಿಂದ ಕಚೇರಿಯ ಗೋಡೆಯ ಒಂದು ಭಾಗ ಹಾನಿಗೀಡಾಗಿದೆ. ಪೊಲೀಸರ ಮಾಹಿತಿ ಪ್ರಕಾರ,ಕಳೆದ ಸೋಮವಾರ ಬೆಳಿಗ್ಗೆ 2:30 ರಿಂದ 3:00 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿದೆ. ಪ್ರಾಥಮಿಕ ತನಿಖೆಯಿಂದ, ದುಷ್ಕರ್ಮಿಗಳು ಗಾಜಿನ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಅದನ್ನು ಕಚೇರಿ ಆವರಣದ ಒಳಗೆ ಎಸೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಸಂಗ್ರೂರು ಎಸ್ಪಿ ದೇವೇಂದ್ರ ಅತ್ರಿ ಹೇಳಿಕೆ:
ಸಂಗ್ರೂರು ಎಸ್ಪಿ ದೇವೇಂದ್ರ ಅತ್ರಿ ಮಾತನಾಡಿ, ಸೋಮವಾರ ಬೆಳಿಗ್ಗೆ ಬಿಜೆಪಿ ಕಚೇರಿ ಮೇಲೆ ಬಾಂಬ್ ಎಸೆದು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ತಕ್ಷಣವೇ ಡಿಎಸ್ಪಿ ದಲ್ಬೀರ್ ಸಿಂಗ್ ಹಾಗೂ ಠಾಣಾಧಿಕಾರಿ ನೇತೃತ್ವದ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದವು ಎಂದರು. ಬಾಟಲಿಯನ್ನು ಹೊರಗಿನ ಉದ್ಯಾನವನದ ಗೋಡೆಯ ಮೇಲಿನಿಂದ ಎಸೆದಿರುವುದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಕಟ್ಟಡದ ಎರಡು ಭಾಗಗಳ ಮಧ್ಯೆ ಬಾಂಬ್ ಬಿದ್ದಿದ್ದು, ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಗುರುತುಗಳು ಪತ್ತೆಯಾಗಿವೆ. ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಿಜೆಪಿ ನಾಯಕರ ಆತಂಕ:
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂಗ್ರೂರು ಬಿಜೆಪಿ ಮುಖಂಡ ರಣದೀಪ್ ದಿಯೋಲ್, ಸೋಮವಾರ ಬೆಳಿಗ್ಗೆ ಕಚೇರಿಯ ಮೇಲ್ವಿಚಾರಕ ಕಚೇರಿಯಲ್ಲಿ ಬೆಂಕಿ ಬಿದ್ದಿರುವುದನ್ನು ಗಮನಿಸಿ ಫೋಟೋಗಳನ್ನು ಕಳುಹಿಸಿದರು. ಕೂಡಲೇ ನಾನು ಈ ವಿಷಯವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಕೇವಲ್ ಧಿಲ್ಲೋನ್ ಅವರ ಗಮನಕ್ಕೆ ತಂದೆ ಎಂದು ತಿಳಿಸಿದರು.
ಪ್ರಕರಣದ ಗಂಭೀರತೆ ಪರಿಗಣಿಸಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಕಚೇರಿಯ ಸುತ್ತಲೂ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಇದಕ್ಕೂ ಮುನ್ನ 2026ರ ಏಪ್ರಿಲ್ 1ರಂದು ಚಂಡೀಗಢದಲ್ಲಿರುವ ಬಿಜೆಪಿ ಮುಖ್ಯ ಕಚೇರಿಯ ಮೇಲೂ ಗ್ರೆನೇಡ್ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII