
ನವದೆಹಲಿ, 27 ಜುಲೈ (ಹಿ.ಸ.):
ಆ್ಯಂಕರ್:
ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೂ ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆ ತಿದ್ದುಪಡಿ ಮಸೂದೆ- 2026 ಅನ್ನು ಮಂಡಿಸಿದೆ. ಸಂಸತ್ತಿನಲ್ಲಿ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಮಹತ್ವದ ಮಸೂದೆಯನ್ನು ಮಂಡಿಸಿದರು. ಆದರೆ, ವಿರೋಧ ಪಕ್ಷಗಳ ಆಕ್ರೋಶ ಹಾಗೂ ಘೋಷಣೆಗಳು ಮುಂದುವರಿದ ಕಾರಣ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು. ಇದೇ ವೇಳೆ ರಾಜ್ಯಸಭೆಯ ಕಲಾಪವೂ ಸಹ ಗದ್ದಲದ ಕಾರಣದಿಂದ ಅದೇ ಸಮಯದವರೆಗೆ ಮುಂದೂಡಲ್ಪಟ್ಟಿತು.
ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಉಭಯ ಸದನಗಳ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಸದನದ ಬಾವಿಗೆ ಇಳಿದು ತೀವ್ರ ಪ್ರತಿಭಟನೆ ನಡೆಸಿದರು. ಗದ್ದಲದ ಕಾರಣ ಮೊದಲು ಮಧ್ಯಾಹ್ನ 12 ಗಂಟೆಯವರೆಗೆ ಕಲಾಪವನ್ನು ಮುಂದೂಡಲಾಯಿತು. ನಂತರ 12 ಗಂಟೆಗೆ ಕಲಾಪ ಪುನರಾರಂಭಗೊಂಡರೂ ವಿರೋಧ ಪಕ್ಷಗಳ ಪ್ರತಿಭಟನೆಯಲ್ಲಿ ನಿಲ್ಲದ ಕಾರಣ, ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಬೇಕಾಯಿತು.
ಮಸೂದೆಯ ಪ್ರಮುಖ ಅಂಶಗಳು:
ಕೇಂದ್ರ ಸರ್ಕಾರವು 2024ರಲ್ಲಿ ಜಾರಿಗೆ ತಂದಿದ್ದ ಮೂಲ ಕಾನೂನಿಗೆ ಮತ್ತಷ್ಟು ಬಲ ತುಂಬಲು ಮತ್ತು ಕಠಿಣ ನಿಯಮಗಳನ್ನು ತರಲು ಈ ಹೊಸ ತಿದ್ದುಪಡಿ ಮಸೂದೆಯನ್ನು ತರಲಾಗಿದೆ.
ಕಠಿಣ ಶಿಕ್ಷೆ ಮತ್ತು ದಂಡ: ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಅತ್ಯಂತ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸುವ ಕಠಿಣ ನಿಬಂಧನೆಗಳನ್ನು ಪ್ರಸ್ತಾಪಿಸಲಾಗಿದೆ.
ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್: ಪರೀಕ್ಷಾ ಅಕ್ರಮ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಅಧಿಕಾರ ನೀಡುವ ಪ್ರಸ್ತಾವನೆ ಇದರಲ್ಲಿದೆ.
ಇಂತಹ ಪ್ರಕರಣಗಳ ವಿಚಾರಣೆ ಪ್ರತಿದಿನ ನಡೆಯಲಿದೆ. ಕೇಂದ್ರ ಸರ್ಕಾರ ಹಾಗೂ ಅದರ ವಿವಿಧ ನೇಮಕಾತಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೆ ಈ ಕಾಯ್ದೆ ಅನ್ವಯಿಸಲಿದೆ. ಯುಪಿಎಸ್ಸಿ , ಎಸ್ಎಸ್ಸಿ, ರೈಲ್ವೆ, ಬ್ಯಾಂಕಿಂಗ್ ನೇಮಕಾತಿಗಳು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಇತರೆ ಪ್ರವೇಶ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಇದರ ವ್ಯಾಪ್ತಿಗೆ ಬರಲಿವೆ.
ದೇಶವ್ಯಾಪಿ ಭಾರಿ ಸಂಚಲನ ಮೂಡಿಸಿದ್ದ 'ನೀಟ್' ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಹಾಗೂ ವಿದ್ಯಾರ್ಥಿ ಹೋರಾಟಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕಠಿಣ ತಿದ್ದುಪಡಿಗೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 23ರಂದೇ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸುವುದಾಗಿ ಘೋಷಿಸಿದ್ದರು. ಅಲ್ಲದೆ, ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚಿಸುವುದಾಗಿಯೂ ಪ್ರಕಟಿಸಲಾಗಿತ್ತು.
ಸಂಸತ್ತಿನಲ್ಲಿ ಧರ್ಮೇಂದ್ರ ಪ್ರಧಾನ್ಗೆ ಸ್ವಾಗತ:
ಇದೇ ವೇಳೆ, ನೀಟ್ ಪತ್ರಿಕೆ ಸೋರಿಕೆ ವಿವಾದದ ನೈತಿಕ ಹೊಣೆ ಹೊತ್ತು ಜುಲೈ 25 ರಂದು ತಮ್ಮ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಬಳಿಕ ಮೊದಲ ಬಾರಿಗೆ ಸಂಸತ್ ಭವನಕ್ಕೆ ಆಗಮಿಸಿದರು. ಎನ್ಡಿಎ ಮೈತ್ರಿಕೂಟದ ಸಂಸತ್ ಸದಸ್ಯರು ಅವರನ್ನು ಶಾಲು ಹೊದಿಸಿ, ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ 'ಧರ್ಮೇಂದ್ರ ಪ್ರಧಾನ್ ಜಿಂದಾಬಾದ್' ಎನ್ನುವ ಘೋಷಣೆಗಳನ್ನು ಕೂಗುತ್ತಾ ಅವರನ್ನು ಸಂಸತ್ ಭವನದ ಒಳಗೆ ಕರೆದೊಯ್ಯಲಾಯಿತು.
ಕಳೆದ ಮೇ 3, 2026ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಬೃಹತ್ ಹಗರಣದ ಕುರಿತು ಕೇಂದ್ರ ತನಿಖಾ ದಳ ತನಿಖೆ ಮುಂದುವರಿಸಿದ್ದು, ಇದುವರೆಗೆ 13 ಆರೋಪಿಗಳನ್ನು ಬಂಧಿಸಿದೆ. ತನಿಖಾ ಸಂಸ್ಥೆಯು ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII