
ನವದೆಹಲಿ, ಜುಲೈ 27(ಹಿ.ಸ.):
ಆ್ಯಂಕರ್:
ಪರೀಕ್ಷೆಗಳಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಮಂಡಿಸಿರುವ ಮಹತ್ವದ ಮಸೂದೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯದಿರುವುದು ದುರದೃಷ್ಟಕರ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಮಸೂದೆಯನ್ನು ಮಂಡಿಸಿದ್ದು, ಇತ್ತೀಚಿನ ವಿದ್ಯಾರ್ಥಿ ಚಳವಳಿಗಳ ಹಿನ್ನೆಲೆಯಲ್ಲೂ ಇದು ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾಂಗ್ರೆಸ್ ಹಾಗೂ ಕೆಲವು ವಿರೋಧ ಪಕ್ಷಗಳು ಘೋಷಣೆ ಕೂಗಿ, ಕಪ್ಪು ಫಲಕಗಳನ್ನು ಪ್ರದರ್ಶಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಮಸೂದೆ ಕುರಿತು ಚರ್ಚೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಕಾರ್ಯಪಡೆ ರಚಿಸಲಾಗಿದ್ದು, ಪೇಪರ್ ಲೀಕ್ ತಡೆಗೆ ಕಠಿಣ ಹಾಗೂ ಕಾಲಮಿತಿಯ ಕ್ರಮಗಳು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಂತಹ ನಿಯಮಗಳನ್ನು ಈ ಮಸೂದೆ ಒಳಗೊಂಡಿದೆ ಎಂದು ರಿಜಿಜು ತಿಳಿಸಿದರು.
ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರಾಜಕೀಯ ಪಕ್ಷಗಳು ಮಸೂದೆ ಕುರಿತು ಗಂಭೀರ ಮತ್ತು ಸಕಾರಾತ್ಮಕ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.