

ನವದೆಹಲಿ, ಜುಲೈ 27(ಹಿ.ಸ.):
ಆ್ಯಂಕರ್:
ಜುಲೈ 20ರಂದು ಜಂತರ್-ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮಕ್ಕೆ ಸಂಬಂಧಿಸಿ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ಆಗ್ರಹಿಸಿ, ಸಂಸತ್ತಿನ ಮಕರ ದ್ವಾರದಲ್ಲಿ ಇಂದು ಬೆಳಿಗ್ಗೆ ಪ್ರತಿಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದರು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಗೃಹ ಸಚಿವರು ನೇರ ಹೊಣೆಗಾರರು ಎಂದು ಆರೋಪಿಸಿದ ಪ್ರತಿಪಕ್ಷ, ಈ ವಿಚಾರವನ್ನು ಸಂಸತ್ತಿನ ಒಳಗೂ ಹೊರಗೂ ಪ್ರಬಲವಾಗಿ ಪ್ರಸ್ತಾಪಿಸುವುದಾಗಿ ತಿಳಿಸಿತು.
ಇದಕ್ಕೂ ಮುನ್ನ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಮೋದ್ ತಿವಾರಿ, ಸಯ್ಯದ್ ನಾಸಿರ್ ಹುಸೇನ್, ಕೆ.ಸಿ. ವೇಣುಗೋಪಾಲ್, ಗೌರವ್ ಗೊಗೊಯಿ, ಜೈರಾಮ್ ರಮೇಶ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ವಿಚಾರವನ್ನು ನಿರಂತರವಾಗಿ ಮುಂದಿಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಗಮನಾರ್ಹವಾಗಿ, ಜುಲೈ 20ರಂದು ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಂಸತ್ ಚಲೋ ಮೆರವಣಿಗೆ ನಡೆಸಿದ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ, ಪೆಲ್ಲೆಟ್ ಗನ್ ಬಳಸಿದರೆಂಬ ಆರೋಪ ಕೇಳಿಬಂದಿತ್ತು. ಈ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಅಂದಿನಿಂದ ಪ್ರತಿಪಕ್ಷ ವಿದ್ಯಾರ್ಥಿಗಳ ಪರವಾಗಿ ಸರ್ಕಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.