
ಕೋಲಾರ, ಜು. ೨೭ (ಹಿ.ಸ.):
ಆ್ಯಂಕರ್ : ಮಡಿಲು ಶಾಲೆ, ಕೋಲಾರ ಹಾಗೂ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಲೀಡ್ – ಇನ್ಫ್ಲುಯೆನ್ಸ್ – ಇನ್ಸ್ಪೈರ್ ನಾಯಕತ್ವ ಕಾರ್ಯಾಗಾರವನ್ನು ಮಡಿಲು ಶಾಲೆ ಕೋಲಾರದಲ್ಲಿ ಆಯೋಜಿಸಲಾಗಿತ್ತು. ಒಂದು ದಿನದ ನಾಯಕತ್ವ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಅಧಿಕಾರ ಅಥವಾ ಹುದ್ದೆಯಿಲ್ಲದಿದ್ದರೂ ಸಮಾಜದಲ್ಲಿ ಪ್ರಭಾವ ಬೀರುವ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ಪರಿಚಯಾತ್ಮಕ ಚಟುವಟಿಕೆಗಳ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಪರಿಚಯದೊಂದಿಗೆ ತಮ್ಮಲ್ಲಿರುವ ಉತ್ತಮ ಗುಣಗಳನ್ನು ಹಂಚಿಕೊಂಡರು. ನಂತರ ನಾಯಕತ್ವ ಎಂದರೇನು, ನಾಯಕತ್ವ ಎಲ್ಲರಿಂದಲೂ ಸಾಧ್ಯವೇ ಹಾಗೂ ಈ ಕಾರ್ಯಾಗಾರದ ಉದ್ದೇಶವೇನು ಎಂಬ ವಿಷಯಗಳ ಕುರಿತು ಸಂವಾದ ನಡೆಯಿತು.
ನನ್ನ ನಾಯಕತ್ವದ ಕಥೆ ಎಂಬ ಚಟುವಟಿಕೆಯಲ್ಲಿ, ಯಾವುದೇ ಅಧಿಕೃತ ಅಧಿಕಾರವಿಲ್ಲದಿದ್ದರೂ ತಮ್ಮ ಜೀವನದಲ್ಲಿ ಇತರರ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ ಅಥವಾ ಸಮಸ್ಯೆ ಪರಿಹರಿಸಿದ ಅನುಭವಗಳನ್ನು ಭಾಗವಹಿಸಿದವರು ಹಂಚಿಕೊಂಡರು. ಇದರಿಂದ ನಾಯಕತ್ವವು ಹುದ್ದೆಯಿಂದಲ್ಲ, ಜವಾಬ್ದಾರಿ ಮತ್ತು ಪ್ರಭಾವದಿಂದ ಆರಂಭವಾಗುತ್ತದೆ ಎಂಬ ಸಂದೇಶ ಸ್ಪಷ್ಟವಾಯಿತು.
ಕಾರ್ಯಾಗಾರದಲ್ಲಿ ಪ್ರೇರಣೆ ನೀಡಿದ ನಾಯಕರ ಗುಣಲಕ್ಷಣಗಳ ಕುರಿತು ಚಿಂತನೆ ನಡೆಸಲಾಯಿತು. ಪ್ರಾಮಾಣಿಕತೆ, ಧೈರ್ಯ, ಕರುಣೆ, ದೃಷ್ಟಿಕೋನ, ಸೇವಾ ಮನೋಭಾವ, ಆಲಿಸುವ ಗುಣ ಮತ್ತು ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯದಂತಹ ನಾಯಕತ್ವದ ಮೌಲ್ಯಗಳನ್ನು ಗುರುತಿಸಲಾಯಿತು.
ನಂತರ ನಡೆದ ಅಧಿವೇಶನದಲ್ಲಿ ನಾಯಕತ್ವ ಮತ್ತು ಅಧಿಕಾರ, ನಾಯಕತ್ವ ಮತ್ತು ನಿರ್ವಹಣೆ, ಹುದ್ದೆ ಮತ್ತು ಪ್ರಭಾವ, ಶಕ್ತಿ ಮತ್ತು ಸೇವೆ ನಡುವಿನ ವ್ಯತ್ಯಾಸಗಳನ್ನು ಉದಾಹರಣೆಗಳೊಂದಿಗೆ ವಿವರಿಸಲಾಯಿತು. ಕುಟುಂಬ, ಕೆಲಸದ ಸ್ಥಳ, ಗ್ರಾಮ ಹಾಗೂ ಸಮುದಾಯದಲ್ಲಿ ನಾಯಕತ್ವದ ಮಹತ್ವವನ್ನು ಚರ್ಚಿಸಲಾಯಿತು.
ಮಧ್ಯಾಹ್ನದ ಅಧಿವೇಶನದಲ್ಲಿ ನನ್ನ ತಂಡ, ನನ್ನ ಸಂಸ್ಥೆ ಮತ್ತು ನನ್ನ ಸಮುದಾಯ ಎಂಬ ಮೂರು ನಾಯಕತ್ವದ ವಲಯಗಳ ಮೂಲಕ ಭಾಗವಹಿಸಿದವರು ತಮ್ಮ ಪ್ರಭಾವದ ವ್ಯಾಪ್ತಿಯನ್ನು ಗುರುತಿಸಿದರು. ಧೈರ್ಯ, ಸ್ವತಂತ್ರ ಚಿಂತನೆ, ಉತ್ಸಾಹ, ಕಾರ್ಯತಂತ್ರ, ಸಹಭಾಗಿತ್ವ ನಿರ್ಮಾಣ, ಸಮಯಪ್ರಜ್ಞೆ, ಜನರ ಬಗ್ಗೆ ಕಾಳಜಿ ಮತ್ತು ಜಾಲ ನಿರ್ಮಾಣ ಸೇರಿದಂತೆ ಎಂಟು ಪ್ರಮುಖ ನಾಯಕತ್ವ ಗುಣಗಳ ಕುರಿತು ಚರ್ಚೆ ನಡೆಯಿತು.
ಕೊನೆಯಲ್ಲಿ ಪ್ರತಿಯೊಬ್ಬರೂ ಮುಂದಿನ ೩೦ ದಿನಗಳಲ್ಲಿ ಕೈಗೊಳ್ಳುವ ಒಂದು ನಾಯಕತ್ವದ ಸಂಕಲ್ಪವನ್ನು ಬರೆದು ಹಂಚಿಕೊಂಡರು. ನಾಯಕತ್ವವೆಂದರೆ ಅಧಿಕಾರದಲ್ಲಿರುವುದಲ್ಲ; ಜವಾಬ್ದಾರಿಯನ್ನು ಸ್ವೀಕರಿಸುವುದಾಗಿದೆ ಎಂಬ ಸಂದೇಶದೊಂದಿಗೆ ಕಾರ್ಯಾಗಾರ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಕೋಲಾರ ರೋಟರಿ ಸಂಸ್ಥೆ ಕಾರ್ಯದರ್ಶಿ ರೋ. ಬಿ ಕೆ ನಾಗರಾಜ್ ಉದ್ಘಾಟಿಸಿದರು. ಮಡಿಲು ಶಾಲೆಯ ಅನಿತಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಕಾರ್ಯಕ್ರಮವು ಹರಿ ಸ್ಮರಣ್ ಮತ್ತು ವರುಣ್ ರವರು ಪಠಿಸಿದ ಮೇಧಾ ಸೂಕ್ತದಿಂದ ಪ್ರಾರಂಭವಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶೈಲಜಾ ಶಂಕರನಾರಾಯಣ, ಸೀನಿಯರ್ ಸ್ಟೇಟ್ ಅಸೋಸಿಯೇಟ್, ಫೌಂಡೇಶನ್ ಫಾರ್ ರೆಸ್ಪಾನ್ಸಿವ್ ಗವರ್ನೆನ್ಸ್ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಫಾರ್ ರೆಸ್ಪಾನ್ಸಿವ್ ಗವರ್ನೆನ್ಸ್ನ ಬಿಜಾಪುರ, ಎಚ್.ಡಿ ಕೋಟೆ ಹಾಗೂ ಮುಳಬಾಗಿಲು ತಾಲೂಕಿನ ತಂಡದ ಸದಸ್ಯರು ಹಾಜರಿದ್ದರು. ಹಾಗೆ ಮಡಿಲು ಶಾಲೆಯ ಮುಖ್ಯಸ್ಥೆ ಸೌಮ್ಯ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್