
ಕೋಲಾರ, ಜು.೨೭ (ಹಿ.ಸ):
ಆ್ಯಂಕರ್ : ಗಡಿನಾಡು ಭಾಗದ ಅಪರೂಪದ ಜಾನಪದ ಕಲೆಗಳು ಹಾಗೂ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಯುವಜನತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಮ್ಮ ಪರಂಪರೆಯ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹೇಳಿದರು.
ಮಾಲೂರು ತಾಲ್ಲೂಕಿನ ಸೀಗೆಪುರ ಕೋಡಿಹಳ್ಳಿ ಸಮೀಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆ ಜಯಮಂಗಲ ಅವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ ‘ಗಡಿನಾಡು ಸಾಂಸ್ಕೃತಿಕ ಕಲಾ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋಡಿಹಳ್ಳಿ ಹಿರಿಯ ಮುಖಂಡ ಕೆಂಪಣ್ಣ ಮಾತನಾಡಿ, ಸಂಸ್ಕೃತಿಯು ಸಮಾಜದ ಜೀವನಾಡಿಯಾಗಿದ್ದು, ಗ್ರಾಮೀಣ ಪ್ರದೇಶದ ಕಲಾವಿದರಿಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ದೊರೆಯುತ್ತಿರುವುದು ಸಂತಸದ ವಿಚಾರ ಎಂದರು. ಗಡಿನಾಡು ಕಲಾ ಸಂಭ್ರಮದಂತಹ ಕಾರ್ಯಕ್ರಮಗಳು ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ತಾಳಕುಂಟೆ ಹಿರಿಯ ಮುಖಂಡ ವೆಂಕಟಸ್ವಾಮಿ ಮಾತನಾಡಿ, ಕಲೆ ಮತ್ತು ಸಾಹಿತ್ಯವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಐಕ್ಯತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಲೂರು ಭಾಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾರುಡಿಗೊಂಬೆ, ಸೋಮನಕುಣಿತ, ಕೀಲುಕುದುರೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು. ಗಗನ್ ಕುಮಾರ್ ಅವರ ಗಾರುಡಿಗೊಂಬೆ, ಬಲರಾಮ್ ಮತ್ತು ತಂಡದ ಸೋಮನಕುಣಿತ, ಮಾದಯ್ಯ ಮತ್ತು ತಂಡದ ಕೀಲುಕುದುರೆ ನೃತ್ಯ ಹಾಗೂ ಮನೋಹರ ಮತ್ತು ತಂಡದ ಡ್ರಮ್ಸ್ ವಾದನ ವಿಶೇಷ ಆಕರ್ಷಣೆಯಾಗಿತ್ತು.
ಇದೇ ವೇಳೆ ಬಿ. ವೆಂಕಟಾಚಲಪತಿ ಅವರ ಸುಗಮ ಸಂಗೀತ, ಅನುಷಾ ಮತ್ತು ತಂಡದ ಭರತನಾಟ್ಯ ಹಾಗೂ ಮೈತ್ರಿ ಮತ್ತು ತಂಡದ ಸಮೂಹ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಪಡೆದವು.
ಕಾರ್ಯಕ್ರಮದಲ್ಲಿ ಪ್ರದೀಪ್, ಹೋರಾಟಗಾರ ಕೆ. ಮುನಿರಾಜು ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್