
ಗದಗ, 27 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೆಚ್.ಡಿ.ಎಫ್.ಸಿ. ಲೈಫ್ (ಮುಂಬೈ) ಹಾಗೂ ಕಲಿಕೆ–ಟಾಟಾ ಟ್ರಸ್ಟ್ಸ್ (ಬೆಂಗಳೂರು) ಸಹಯೋಗದಲ್ಲಿ ನಾಲ್ಕು ವರ್ಷಗಳ ಅವಧಿಯ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಈ ಒಡಂಬಡಿಕೆಯಡಿ 2026-27ನೇ ಸಾಲಿನಿಂದ ಗದಗ ಜಿಲ್ಲೆಯ ಐದು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯ ಎಲ್ಲಾ 1,248 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಕಲಿಕೆಯ ಆಸಕ್ತಿ, ಭಾಷಾ ಕೌಶಲ್ಯ, ಸೃಜನಶೀಲತೆ, ಸಾಮಾಜಿಕ ಬೆಳವಣಿಗೆ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ರಾಧಾ ಜಿ. ಮಣ್ಣೂರ ಮಾತನಾಡಿ, ಬಾಲ್ಯದ ಮೊದಲ ವರ್ಷಗಳು ಮಗುವಿನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಆ ಹಂತದಲ್ಲಿಯೇ ಉತ್ತಮ ಶಿಕ್ಷಣ ಮತ್ತು ಕಲಿಕಾ ವಾತಾವರಣ ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಿಂದ ಅಂಗನವಾಡಿಗಳಲ್ಲಿ ಗುಣಮಟ್ಟದ ಶಾಲಾ ಪೂರ್ವ ಶಿಕ್ಷಣವನ್ನು ನೀಡಲು ಈ ಕಾರ್ಯಕ್ರಮ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ರೂಪುರೇಷೆಗಳನ್ನು ಶಿವಕುಮಾರ ಡಿ. ವಿವರಿಸಿ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಚಟುವಟಿಕೆಗಳು, ಶಿಕ್ಷಕರ ಸಾಮರ್ಥ್ಯ ವೃದ್ಧಿ, ಆಧುನಿಕ ಕಲಿಕಾ ಸಾಮಗ್ರಿಗಳ ಬಳಕೆ, ಮಕ್ಕಳ ಸ್ನೇಹಿ ಕಲಿಕಾ ವಾತಾವರಣ ನಿರ್ಮಾಣ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಸಮಗ್ರ ಯೋಜನೆಯಾಗಿದೆ ಎಂದು ತಿಳಿಸಿದರು.
ಹೆಚ್.ಡಿ.ಎಫ್.ಸಿ. ಲೈಫ್ನ ಎಸ್ವಿಪಿ–ಮಾರ್ಕೆಟಿಂಗ್ ಮತ್ತು ಸಿಎಸ್ಆರ್ ವಿಭಾಗದ ಶ್ರೀಮತಿ ರಿನಾ ಭಾತಿರ್ ಮಾತನಾಡಿ, ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಅಗತ್ಯವಿರುವ ಆರ್ಥಿಕ ನೆರವು, ತಾಂತ್ರಿಕ ಸಹಕಾರ ಹಾಗೂ ನಿರಂತರ ಮೇಲ್ವಿಚಾರಣೆಯನ್ನು ಸಂಸ್ಥೆಯು ಒದಗಿಸಲಿದೆ ಎಂದು ಹೇಳಿದರು. ಸಮಾಜಮುಖಿ ಕಾರ್ಯಗಳಿಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಗುರಿಯೊಂದಿಗೆ ಈ ಯೋಜನೆಗೆ ಕೈಜೋಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ, ಹೆಚ್.ಡಿ.ಎಫ್.ಸಿ. ಲೈಫ್ನ ರೀಜಿನಲ್ ಹೆಡ್ ಸೂರಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಕಲಿಕೆ–ಟಾಟಾ ಟ್ರಸ್ಟ್ಸ್ನ ಇಸಿಸಿಇ ಕಾರ್ಯಕ್ರಮ ಅಧಿಕಾರಿ ಕೊಟ್ರೇಶ್ ಎ. ವೈ., ಜಿಲ್ಲಾ ವ್ಯವಸ್ಥಾಪಕ ಅಶೋಕ, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ನೇತ್ರಾ ನಿರೂಪಿಸಿ, ವಂದಿಸಿದರು.
ನಾಲ್ಕು ವರ್ಷಗಳ ಈ ಮಹತ್ವದ ಯೋಜನೆಯು ಗದಗ ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಲಿದ್ದು, ಅಂಗನವಾಡಿ ಕೇಂದ್ರಗಳ ಮೂಲಕ ಸಾವಿರಾರು ಮಕ್ಕಳಿಗೆ ಉತ್ತಮ ಕಲಿಕಾ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿರೀಕ್ಷೆ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP