ದಡ್ಡಿ ಭತ್ತ: ವಿನಮ್ರತೆಯ ಪಾಠ
ಬೆಂಗಳೂರು, 24 ಜುಲೈ (ಹಿ.ಸ.): ದಡ್ಡಿ ಭತ್ತ: ವಿನಮ್ರತೆಯ ಪಾಠ ಪಿ. ಚಂದ್ರಿಕಾಲೇಖಕರು. ನಾಯಕತ್ವವೆಂದರೆ ಅಧಿಕಾರ ಪ್ರದರ್ಶನವಲ್ಲ, ಆತ್ಮಾವಲೋಕನದೊಂದಿಗೆ ಜನರ ಸೇವೆ ಮಾಡುವ ಮನೋಭಾವ. ಇಂತಹ ಅಪರೂಪದ ನಾಯಕತ್ವಕ್ಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನದಲ್ಲಿರುವ ಒಂದು ಪ್ರಸಂಗ ಅತ್ಯುತ್ತಮ ಉ
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಗ್ರಹ ಚಿತ್ರ


ಬೆಂಗಳೂರು, 24 ಜುಲೈ (ಹಿ.ಸ.):

ದಡ್ಡಿ ಭತ್ತ: ವಿನಮ್ರತೆಯ ಪಾಠ

ಪಿ. ಚಂದ್ರಿಕಾಲೇಖಕರು.

ನಾಯಕತ್ವವೆಂದರೆ ಅಧಿಕಾರ ಪ್ರದರ್ಶನವಲ್ಲ, ಆತ್ಮಾವಲೋಕನದೊಂದಿಗೆ ಜನರ ಸೇವೆ ಮಾಡುವ ಮನೋಭಾವ. ಇಂತಹ ಅಪರೂಪದ ನಾಯಕತ್ವಕ್ಕೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನದಲ್ಲಿರುವ ಒಂದು ಪ್ರಸಂಗ ಅತ್ಯುತ್ತಮ ಉದಾಹರಣೆಯಾಗಿ ಹೇಳಲಾಗುತ್ತದೆ.

ಅರಮನೆಯಲ್ಲಿ ಕೆಲಸಕ್ಕೆ ನೇಮಕಗೊಂಡಿದ್ದ ಒಬ್ಬ ಸರಳ ಮಹಿಳೆಯನ್ನು ಎಲ್ಲರೂ ದಡ್ಡಿ ಎಂದು ಕರೆಯುತ್ತಿದ್ದರು. ಆಕೆಗೆ ರಾಜರು ನೀಡಿದ್ದ ಕೆಲಸ ಮಾತ್ರ ವಿಶಿಷ್ಟವಾಗಿತ್ತು. ಪ್ರತಿದಿನ ಬೆಳಿಗ್ಗೆ ಅರಸರು ಅರಮನೆಯಿಂದ ಹೊರಬರುವಾಗ ಅವರ ಎದುರು ನಿಂತು, ನೀನು ಈ ಕೆಲಸ ಮಾಡಿಲ್ಲ, ಆ ಕೆಲಸ ಮಾಡಿಲ್ಲ. ನಿನ್ನ ಆಡಳಿತದಲ್ಲಿ ಜನ ಕಷ್ಟಪಡುತ್ತಿದ್ದಾರೆ ಎಂದು ನಿರ್ಭಯವಾಗಿ ಟೀಕಿಸಬೇಕಿತ್ತು.

ಅರಮನೆಯವರು, ಮಂತ್ರಿಗಳು ಮತ್ತು ಪ್ರಜೆಗಳು ರಾಜರನ್ನು ಹೊಗಳುತ್ತಿದ್ದಾಗ, ಈ ಮಹಿಳೆ ಮಾತ್ರ ದಿನವೂ ರಾಜರನ್ನು ಬೈಯುವುದನ್ನು ಕಂಡು ಎಲ್ಲರೂ ಆಶ್ಚರ್ಯಪಡುತ್ತಿದ್ದರು. ಒಮ್ಮೆ ಅಸ್ಥಾನಾಧಿಕಾರಿಯೊಬ್ಬರು ರಾಜರನ್ನು ಪ್ರಶ್ನಿಸಿದರು. ಇಷ್ಟೊಂದು ಜ್ಞಾನಿಗಳು, ಮಂತ್ರಿಗಳು, ರಾಜಗುರುಗಳು ನಿಮ್ಮ ಸುತ್ತಲಿದ್ದರೂ, ಒಬ್ಬ ಸಾಮಾನ್ಯ ಮಹಿಳೆಯಿಂದ ನಿಮ್ಮನ್ನು ನೀವು ಯಾಕೆ ಬೈಯಿಸಿಕೊಳ್ಳುತ್ತೀರಿ? ಎಂದು ಕೇಳಿದರು.

ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಉತ್ತರವೇ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ. ಲೋಕವೆಲ್ಲಾ ನನ್ನನ್ನು ಹೊಗಳುವಾಗ ಅಹಂಕಾರ ತಲೆಗೇರುವ ಸಾಧ್ಯತೆ ಇದೆ. ಆದರೆ ನನ್ನ ತಪ್ಪುಗಳನ್ನು ನೆನಪಿಸುವವರು ಯಾರಾದರೂ ಇರಬೇಕು. ಈ ಮಹಿಳೆಗೆ ನನ್ನ ಸ್ಥಾನಮಾನ ಎಂಬ ಭಯವಿಲ್ಲ. ಅವಳು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾಳೆ. ಪ್ರತಿದಿನವೂ ನನ್ನಲ್ಲಿ ಇನ್ನೂ ಸಾಕಷ್ಟು ಕೆಲಸ ಬಾಕಿಯಿದೆ, ನಾನು ಪರಿಪೂರ್ಣನಲ್ಲ ಎಂಬ ಅರಿವನ್ನು ಮೂಡಿಸುತ್ತಾಳೆ. ಆದ್ದರಿಂದ ನಾನು ಆಕೆಗೆ ಕೃತಜ್ಞನಾಗಿದ್ದೇನೆ ಎಂದು ರಾಜರು ಹೇಳಿದರು.

ಈ ಕೃತಜ್ಞತೆಯ ಸಂಕೇತವಾಗಿ, ಬರಗಾಲದಲ್ಲಿಯೂ ಉತ್ತಮವಾಗಿ ಬೆಳೆಯುವ ಭತ್ತದ ಒಂದು ತಳಿಗೆ ದಡ್ಡಿ ಭತ್ತ ಎಂದು ಹೆಸರಿಟ್ಟರು ಎಂಬುದು ಈ ಕಥೆಯ ಸಾರ.

ಈ ಪ್ರಸಂಗದ ಐತಿಹಾಸಿಕ ನಿಖರತೆಯ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದರೂ, ಇದರಲ್ಲಿರುವ ಸಂದೇಶ ಮಾತ್ರ ಶಾಶ್ವತವಾಗಿದೆ. ಅಧಿಕಾರದಲ್ಲಿರುವವರು ಹೊಗಳಿಕೆಗಿಂತ ಟೀಕೆಯನ್ನು ಆಲಿಸಿದಾಗ, ಅಹಂಕಾರಕ್ಕಿಂತ ವಿನಮ್ರತೆಯನ್ನು ಬೆಳೆಸಿದಾಗ ಮತ್ತು ಆತ್ಮಾವಲೋಕನಕ್ಕೆ ಅವಕಾಶ ನೀಡಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ.

ವಿನಮ್ರತೆ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ತಪ್ಪುಗಳನ್ನು ಒಪ್ಪಿಕೊಳ್ಳುವ ಧೈರ್ಯ, ಟೀಕೆಗಳನ್ನು ಸ್ವೀಕರಿಸುವ ಮನಸ್ಸು ಮತ್ತು ಜನರ ನೋವಿಗೆ ಸ್ಪಂದಿಸುವ ಗುಣವೇ ನಿಜವಾದ ನಾಯಕತ್ವದ ಲಕ್ಷಣಗಳು. ಅದಕ್ಕಾಗಿಯೇ ದಡ್ಡಿ ಭತ್ತ ಕೇವಲ ಒಂದು ಭತ್ತದ ತಳಿಯ ಹೆಸರಲ್ಲ; ಅದು ವಿನಮ್ರತೆ, ಆತ್ಮಾವಲೋಕನ ಮತ್ತು ಜನಪರ ಆಡಳಿತದ ಪ್ರತೀಕವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande