


ಆ್ಯಂಕರ್ : ಬಹುಮುಖಿ ವ್ಯಕ್ತಿತ್ವದ ರಮೇಶ ಸುರ್ವೆ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಪ್ರತಿಭಾವಂತ. ಸೂರ್ಯವಂಶ ಕ್ಷತ್ರಿಯ ಅಗಿರುವ ಇವರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಅಕೆಡೆಮಿಕ್ ಸಾಧನೆ ಮಾಡಿದವರು. ಹತ್ತಾರು ಕ್ಷೇತ್ರಗಳಲ್ಲಿ, 50 ವರ್ಷದ ಸಾಧಕರು. ಚಿತ್ರನಟರಾಗಲು ಬೆಂಗಳೂರಿಗೆ ಬಂದು, ಆದರ್ಶ ಫಿಲಂ ಇನ್ಸಟಿಟ್ಯೂಟ್ನಲ್ಲಿ ತರಭೇತಿಗೆ ಸೇರಿದಾಗ, ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಬಿ.ವಿ. ಕಾರಂತ ಹಾಗೂ ಗಿರೀಶ್ ಕಾಸರವಳ್ಳಿ ಗರಡಿಯಲ್ಲಿ ಆಶ್ರಯ ಪಡೆದವರು. ಇಲ್ಲಿ ಲಂಕೇಶ್, ಗಿರೀಶ್ ಕಾರ್ನಾಡ್ರ ಶಿಷ್ಯರಾಗಿ ಗುರುತಿಸಿಕೊಂಡವರು.
ಸಿಂಧನೂರು, ಯಲಬುರ್ಗಾ, ಮಸ್ಕಿಗಳಲ್ಲಿ ಓದುವಾಗಲೇ ಸಾಂಸ್ಕøತಿಕ ತುಡಿತ, ನಾಟಕ, ಸಿನೆಮಾ, ಖಯಾಲಿ ಅಂಟಿಸಿಕೊಂಡು ಮನೆಯಿಂದ ಓಡಿ ಹೋಗಿ, ಅಂದಿನ ಕುಕನೂರಿನ ರಹಮಾನವ್ವ ಕಂಪನಿ, ಗದಗಿನ ಶ್ರೀ ಮಹಾಂತೇಶ ಶಾಸ್ತ್ರಿ ನಾಟಕ ಕಂಪನಿ, ಹಾರಾಪೂರ ರಾಮರಾವ್ ದೇಸಾಯಿ ನಾಟಕ ಕಂಪನಿ, ಬೀದರಿನ ಬನಶಂಕರಿ ನಾಟಕ ಸಂಘದಲ್ಲಿ, ನಟರಾಗಿ, ರಂಗಕರ್ಮಿಯಾಗಿ ದುಡಿದವರು. ಸಿನಿಮಾ ಸೆಳೆತಕ್ಕೊಳಗಾಗಿ ಬೆಂಗಳೂರು ಸೇರಿದ ರಮೇಶ ಸುರ್ವೆ, ಪ್ರಾರಂಭದಲ್ಲಿ ಸಾದ್ಯವಾಗದೆ ಬದುಕು ಕಟ್ಟಿಕೊಳ್ಳಲು ಹೆಣಗಿದರು. ಚಿತ್ರರಂಗ ಕೈಗೆಟುಕದ ಗಗನ ಕುಸುಮವಾದಾಗ, ಪತ್ರಕರ್ತರಾಗಿ, ಸಾಂಸ್ಕøತಿಕ ಸಂಘಟಕರಾಗಿ, ಸಾಮಾಜಿಕ ಹೋರಾಟಗಾರರಾಗಿ, ಕನ್ನಡ ಪರ ಹೋರಾಟಗಾರರಾಗಿ, ಸಾಹಿತ್ಯ ಕೃತಿ ರಚನೆಯಲ್ಲಿ ತಮ್ಮ ವಿಚಾರ ಧಾರೆ ಹರಿಬಿಟ್ಟರು.
ಸುರ್ವೆ ಪತ್ರಿಕೆ, ಇಂಜಿನಿಯರ್ಸ್ ಡೈರಿ, ಸುರ್ವೆ ನ್ಯೂಸ್ ಸೋರ್ಸ ಸುದ್ಧಿ ಸಂಸ್ಥೆ, ಸುರ್ವೆ ನ್ಯೂಸ್ ಯು ಟ್ಯೂಬ್ ಚಾನಲ್ಗಳಲ್ಲಿ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದರು. ಸುರ್ವೆ ಕಲ್ಚರಲ್ ಅಕಾಡೆಮಿ ಮೂಲಕ, ಸುರ್ವೆಯವರು ಕರ್ನಾಟಕದ 1.50 ಲಕ್ಷ ಪ್ರತಿಭೆಗಳಿಗೆ ರಾಜಧಾನಿಯಲ್ಲಿ ವೇದಿಕೆ ಹಾಗೂ ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಬೆನ್ನು ತಟ್ಟಿದವರು. ಇದುವರೆಗೆ 500ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ 10 ಲಕ್ಷ ನಗದು ಬಹುಮಾನ ನೀಡಿದ ಹೆಗ್ಗಳಿಕೆ ಇವರದು. 11 ಮಕ್ಕಳ ಸಾಹಿತ್ಯ ಸಮ್ಮೇಳನ, 12 ಕವಿ ಸಮ್ಮೇಳನ, 10 ರಾಷ್ಟ್ರಿಯ ನಾಟ್ಯ ಮೇಳ, 75 ಕ್ಕೂ ಹೆಚ್ಚು ಕಲಾ ಪ್ರತಿಭೋತ್ಸವ, 150 ಕ್ಕೂ ಹೆಚ್ಚು ವಿಚಾರ ಸಂಕಿರಣ ಮತ್ತು ಪ್ರಶಸ್ತಿ ಪ್ರದಾನದ ರೂವಾರಿಗಳು. 250 ನಾಟಕ, ತಲಾ 4 ನಾಟಕಗಳ 18 ನಾಟಕೋತ್ಸವಗಳು, ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರ ಸಮಾವೇಶದ ಸಂಘಟಿತರು.
30 ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಉಪನ್ಯಾಸ, ಪ್ರವಾಸ ಕ್ಯಾಂಪೆನ್, ಚುನಾವಣಾ ಕ್ಯಾಂಪೆನ್ ಮಾಡಿದವರು. ತಾಜ್ಮಹಲ್ ಮುಂದೆ ಕವಿಗೋಷ್ಠಿ ನಡೆಯಿಸಿದ ಸಾಹಸಿ ಕೂಡಾ.
ಇದುವರೆಗೆ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಗಳ ಕವಿಗಳ ಕವನಗಳನ್ನು ಸಂಗ್ರಹಿಸಿ “ಕವಿಗಳ ಕಣ್ಣಲ್ಲಿ ವಿಶ್ವೇಶ್ವರಯ್ಯ” ಹಾಗೂ “ಬಹುಜನರ ಕವಿತೆಗಳು” ಸಂಕಲನ ಹೊರತಂದಿದ್ದಾರೆ. ಇವರ ಸರ್ವಾಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಸಮ್ಮೇಳನ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ, ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ ಜರುಗಿವೆ.
ಸ್ವತಃ 16ಕ್ಕೂ ಕೃತಿ ಬರೆದಿದ್ದಾರೆ. ಅವರದೇ ಸಾಹಿತ್ಯದ ಮೋಹದ ಬಲೆಯಲ್ಲಿ, ಬಯಕೆಯ ಭಾವದುಂಬಿ, ಶ್ರೀ ಕನ್ನಿಕಾ ಪರಮೇಶ್ವರಿ ಗೀತೆಗಳ ಅಲ್ಬಮ್ ಗುಚ್ಚದಲ್ಲಿ, 30 ಹಾಡುಗಳನ್ನು ರೂಪಿದ್ದಾರೆ. 27 ವರ್ಷಗಳ ನಂತರ ತಮ್ಮ ಕನಸಿನ ಸಿನಿಮಾ ಮಂದಾಕಿನಿ ಚಿತ್ರ ನನಸಾಗಿ, 2008ರಲ್ಲಿ ರಾಜ್ಯ ಚಲನಚಿತ್ರ ಹಿನ್ನಲೆ ಗಾಯನಕ್ಕೆ ಪ್ರಶಸ್ತಿ ಬರುವಂತೆ ಸಾಹಿತ್ಯ ರಚಿಸಿದವರು. ಮಂದಾಕಿನಿ ಇವರ ನಿರ್ದೇಶನದ ಪ್ರಥಮ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.
ಪತ್ರಿಕೆ, ಸಂಘಟನೆ ಮೂಲಕ ಸಮಾಜದ ವಿವಿಧ ವರ್ಗಗಳಿಗೆ ಗುರುತಿಸಿದ ಕೀರ್ತಿ ಇವರದು. ಇದುವರೆಗೆ 75 ರಾಜ್ಯಮಟ್ಟದ ಪ್ರಶಸ್ತಿಗಳು, 8 ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. 120ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಪ್ರಸ್ತುತ ಅವರ “ಪ್ರಜಾಮುಖಿ ಕವಿತೆಗಳು” ಸಮಗ್ರವಾಗಿದ್ದು, ವೈವಿದ್ಯಮಯವಾದ ಕಾವ್ಯ ಪ್ರಾಕಾರವನ್ನು ಹೊಂದಿದೆ. ಅನೇಕ ವಿಮರ್ಶಕರ ಮನ ಗೆದ್ದಿದೆ.
ಪತ್ರಿಕೋದ್ಯಮ ಸಾಧನೆಯ ವಿವರ :
ಅವರು ಸಿಂಧನೂರಿನಲ್ಲಿ 1975ರಲ್ಲಿ ಪಿಯುಸಿ ಓದುವಾಗ, ಮೂಲತಃ ಕವಿಯಾಗಿದ್ದ ಅವರನ್ನು ಪತ್ರಕರ್ತನಾಗಿಸಿದ್ದು ದಿ|| ಪಾಟೀಲ್ಪುಟ್ಟಪ್ಪನವರು. ಅವರ ಶಿಷ್ಯ ನರಸಿಂಹಗುಡಿ ಸಿಂಧನೂರಿನ “ದುಡಿಮೆ” ಪತ್ರಿಕೆಯಲ್ಲಿ ಬರೆಯಲು ಅವಕಾಶ ಕೊಟ್ಟರು. ಇದರ ಪ್ರಭಾವದಿಂದ, ಗದಗಿನ ಎಂ. ಶಿರಹಟ್ಟಿ ಸಂಪಾದಕತ್ವದ ವಾಸವಿ ಪತ್ರಿಕೆಗೆ, ಸಿನಿಮಾ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ಪಿಯುಸಿ ಮುಗಿಸಿ, ಬೆಂಗಳೂರಿಗೆ ಹೋದನಂತರ “ಜನವಾಣಿ” ಸಂಜೆ ದಿನಪತ್ರಿಕೆಯಲ್ಲಿ ಸಿನಿಮಾ ವರದಿಗಾರರಾಗಿ, ಕೆಲಕಾಲ ಕೆಲಸ ಮಾಡಿದರು. ಜಾಣಗೆರೆ ವೆಂಕಟರಾಮಯ್ಯನವರ “ಮೂಕಿಟಾಕಿ”, ನಾರಾಯಾಣಸ್ವಾಮಿ ಸಂಪಾದಕತ್ವದ “ವಿನೋದವಾಣಿ”ಯಲ್ಲಿ ಬರಹಗಾರರಾಗಿ, ಅಂಕಣಕಾರರಾಗಿ, ಉಪಸಂಪಾದಕರಾಗಿದ್ದರು. ಬಿ. ನಾರಾಯಣರವರ ಜೊತೆ “ಸಂಕೋಲೆ” ಪತ್ರಿಕೆ ರಾಜ್ಯಮಟ್ಟದಲ್ಲಿ ಹೊರಡಿಸಿದಾಗ ಸಹಾಯಕರಾಗಿದ್ದರು. ದೇಶ ಸುತ್ತು ಕೋಶ ಓದು ಎಂಬ ಅಭಿರುಚಿಗೆ, ಅವರು ಇದುವರೆಗೆ 15 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಓದಿರಬಹುದು. ಈಗಲು ಅವರ ಮನೆಯ ಗ್ರಂಥಾಲಯದಲ್ಲಿ ಆರೇಳು ಸಾವಿರ ಪುಸ್ತಕಗಳಿವೆ.
1985ರಲ್ಲಿ “ಸುರ್ವೆ ಪತ್ರಿಕೆ” 1989ರಲ್ಲಿ “ಇಂಜಿನಿಯರ್ಸ್ ಡೈರಿ” ಅವರದೆ ಸಂಪಾದಕತ್ವದಲ್ಲಿ ಪ್ರಕಟವಾದವು. ಪತ್ರಕರ್ತರಾಗಿ 51 ವರ್ಷ, ಸಂಪಾದಕರಾಗಿ 41 ವರ್ಷ, ಈಗ ಅವರಿಗೆ 69 ವರ್ಷ. ನಾಲ್ಕೈದು ಸಾವಿರಕ್ಕೂ ಹೆಚ್ಚು ಸಮಾಜಮುಖಿ ಲೇಖನಗಳನ್ನು ಕರ್ನಾಟಕದ ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ಬರೆದಿದ್ದಾರೆ. ರಾಜ್ಯದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ನಮ್ಮ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ನ ಮೂಲ ಕಲ್ಪನೆ ರಮೇಶ ಸುರ್ವೆಯವರದು. 2001ರಲ್ಲೆ ಅವರು ಬೆಂಗಳೂರಿಗೆ ಕಪಲ್ಕಾರ್ಡ್ ಯೋಜನೆ ರೂಪಿಸಿ, ಅಂದಿನ ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೇಮಾ ಕಾರಿಯಪ್ಪನವರಿಗೆ ಸಲ್ಲಿಸಿದ್ದರು. ಅದೆ ಮುಂದೆ ಆಧಾರ್ಕಾರ್ಡ್ ಅಗಿ ಬದಲಾಗಿದೆ. ಇದು ಅವರ ಪತ್ರಿಕೋದ್ಯಮ ಇತಿಹಾಸ. ಹಿಂದೆ ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಿದ್ದರು. ಅಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶಸ್ತಿ ನೀಡಿದ್ದು ದಾಖಲೆ.
1976-2026 ಕಾಕತಾಳಿಯವಾಗಿ ಅವರ ಜಿಲ್ಲೆ ಕೊಪ್ಪಳದಿಂದ, ಪತ್ರಿಕೋದ್ಯಮ ಸೇವೆಗಾಗಿ ಅವರನ್ನು ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸುತ್ತಿದ್ದಾರೆ. ದಿನಾಂಕ 25-ಜುಲೈ-2026, ಸಂಜೆ 6 ಗಂಟೆಗೆ, ಕುಷ್ಟಗಿಯ ಹಿರೇಮನ್ನಾಪುರದಲ್ಲಿ ನಡೆಯುವ, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಈ ಗೌರವವನ್ನು ರಮೇಶ ಸುರ್ವೆಯವರು ಸ್ವೀಕರಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್