ಭಾರತ–ಬ್ರಿಟನ್ ಆರ್ಥಿಕ ಸಹಭಾಗಿತ್ವಕ್ಕೆ ಹೊಸ ಅಧ್ಯಾಯ: ಪ್ರಧಾನಿ ಮೋದಿ
ನವದೆಹಲಿ, 15 ಜುಲೈ (ಹಿ.ಸ.): ಆ್ಯಂಕರ್: ಭಾರತ–ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿಇಟಿಎ) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ ಜಾರಿಗೆ ಬಂದಿರುವುದು ಉಭಯ ದೇಶಗಳ ಪಾಲುದಾರಿಕೆಯಲ್ಲಿ ಮಹತ್ವದ ಘಟ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶ
Pm file photo


ನವದೆಹಲಿ, 15 ಜುಲೈ (ಹಿ.ಸ.):

ಆ್ಯಂಕರ್:

ಭಾರತ–ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿಇಟಿಎ) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ ಜಾರಿಗೆ ಬಂದಿರುವುದು ಉಭಯ ದೇಶಗಳ ಪಾಲುದಾರಿಕೆಯಲ್ಲಿ ಮಹತ್ವದ ಘಟ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಈ ಎರಡೂ ಒಪ್ಪಂದಗಳು ಭಾರತ ಮತ್ತು ಬ್ರಿಟನ್ ನಡುವಿನ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದ್ದು, ಉಭಯ ದೇಶಗಳ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ತಿಳಿಸಿದ್ದಾರೆ.

ಸಿಇಟಿಎ ಒಪ್ಪಂದದಿಂದ ರೈತರು, ಉದ್ಯಮಿಗಳು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಸ ಉತ್ತೇಜನ ಸಿಗಲಿದ್ದು, ಹಲವು ಪ್ರಮುಖ ಕ್ಷೇತ್ರಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರವೇಶ ದೊರೆಯಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಜೊತೆಗೆ ತಂತ್ರಜ್ಞಾನ, ವೃತ್ತಿಪರ ಸೇವೆಗಳು ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವುದರೊಂದಿಗೆ ಭಾರತೀಯ ಪ್ರತಿಭಾವಂತರಿಗೆ ಹೆಚ್ಚಿನ ಉದ್ಯೋಗ ಮತ್ತು ಸಂಚಾರ ಅವಕಾಶಗಳು ಲಭಿಸಲಿವೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಭದ್ರತಾ ಒಪ್ಪಂದವು ತಾತ್ಕಾಲಿಕವಾಗಿ ಬ್ರಿಟನ್‌ನಲ್ಲಿ ಕೆಲಸ ಮಾಡುವ ಭಾರತೀಯ ವೃತ್ತಿಪರರಿಗೆ ಮಹತ್ವದ ನೆರವು ನೀಡಲಿದ್ದು, ಭಾರತೀಯ ಸಂಸ್ಥೆಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನೂ ಹೆಚ್ಚಿಸಲಿದೆ ಎಂದು ಮೋದಿ ಹೇಳಿದರು.

ಈ ಒಪ್ಪಂದಗಳು ಭಾರತ ಮತ್ತು ಬ್ರಿಟನ್ ಪ್ರಜಾಪ್ರಭುತ್ವಗಳ ನಡುವಿನ ಪರಸ್ಪರ ವಿಶ್ವಾಸದ ಪ್ರತೀಕವಾಗಿದ್ದು, ವ್ಯಾಪಾರ, ತಂತ್ರಜ್ಞಾನ, ಹೂಡಿಕೆ ಮತ್ತು ನವೋದ್ಯಮ ಆಧಾರಿತ ಭವಿಷ್ಯದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ. ಉಭಯ ದೇಶಗಳು ಹಂಚಿಕೆಯ ಸಮೃದ್ಧಿಗಾಗಿ ಮುಂದೆಯೂ ಜೊತೆಯಾಗಿ ಕಾರ್ಯನಿರ್ವಹಿಸಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande