
ನವದೆಹಲಿ, 15 ಜುಲೈ (ಹಿ.ಸ.):
ಆ್ಯಂಕರ್:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಾತೃತ್ವ ವಿಮರ್ಶೆ ವಿಷಯದ ಕುರಿತು ದೇಶದ ವಿವಿಧ ಕ್ಷೇತ್ರಗಳ ಮಹಿಳಾ ಪ್ರತಿನಿಧಿಗಳೊಂದಿಗೆ ಜುಲೈ 24ರಂದು ನವದೆಹಲಿಯ ಅಂತಾರಾಷ್ಟ್ರೀಯ ಅಂಬೇಡ್ಕರ್ ಕೇಂದ್ರದಲ್ಲಿ ವಿಶೇಷ ಸಂವಾದ ನಡೆಸಲಿದ್ದಾರೆ.
ವಿಶ್ವಮಾಂಗಲ್ಯ ಸಭೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 700ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸುಮಾರು ಎರಡರಿಂದ ಎರಡೂವರೆ ಗಂಟೆಗಳ ಕಾಲ ನಡೆಯುವ ಸಂವಾದದಲ್ಲಿ ಮಾತೃತ್ವ, ಕುಟುಂಬ ವ್ಯವಸ್ಥೆ, ಸಮಾಜ ನಿರ್ಮಾಣ ಹಾಗೂ ರಾಷ್ಟ್ರ ಜೀವನದಲ್ಲಿ ಮಹಿಳೆಯರ ಪಾತ್ರ ಕುರಿತು ಮೋಹನ್ ಭಾಗವತ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಶ್ನೋತ್ತರ ಅವಧಿಯೂ ಇದ್ದು, ಮಹಿಳೆಯರು ನೇರವಾಗಿ ಪ್ರಶ್ನೆಗಳನ್ನು ಕೇಳಲು ಅವಕಾಶ ಕಲ್ಪಿಸಲಾಗಿದೆ.
ಬುಧವಾರ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವಮಾಂಗಲ್ಯ ಸಭೆಯ ರಾಷ್ಟ್ರೀಯ ಸಂಘಟನಾ ಸಚಿವೆ ಡಾ. ವೃಷಾಲಿ ಜೋಶಿ ಈ ಮಾಹಿತಿ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮ ಐತಿಹಾಸಿಕ ಮಹತ್ವ ಹೊಂದಿದ್ದು, ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಸರಸಂಘಚಾಲಕರು ದೇಶದ ಪ್ರಬುದ್ಧ ಮಹಿಳೆಯರೊಂದಿಗೆ ಮಾತೃತ್ವ ವಿಮರ್ಶೆ ವಿಷಯದ ಕುರಿತು ಮುಕ್ತ ಸಂವಾದ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ, ಸಾಮಾಜಿಕ ಸೇವೆ, ಸಂಸ್ಕೃತಿ, ಸಾಹಿತ್ಯ, ವೈದ್ಯಕೀಯ, ನ್ಯಾಯಾಂಗ, ಆಡಳಿತ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೇ ಮಾದರಿಯ ಮತ್ತೊಂದು ಸಂವಾದವನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗುತ್ತಿದ್ದು, ಸುಮಾರು 1,300 ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಮಾಜದಲ್ಲಿ ಮಾತೃತ್ವದ ಪಾತ್ರ, ಕುಟುಂಬ ವ್ಯವಸ್ಥೆ, ಸಂಸ್ಕಾರ ನಿರ್ಮಾಣ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಕುರಿತು ವ್ಯಾಪಕ ಚರ್ಚೆಗೆ ವೇದಿಕೆ ಕಲ್ಪಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಡಾ. ವೃಷಾಲಿ ಜೋಶಿ ತಿಳಿಸಿದರು.
ಪ್ರಸ್ತುತ ವಿಶ್ವಮಾಂಗಲ್ಯ ಸಭೆಯು ದೇಶದ 33 ಪ್ರಾಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 3,500 ಜವಾಬ್ದಾರಿಯುತ ಕಾರ್ಯಕರ್ತೆಯರು ಹಾಗೂ 6 ಲಕ್ಷ ಮಹಿಳೆಯರು ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಇತ್ತೀಚೆಗೆ 23 ಪ್ರಾಂತಗಳಲ್ಲಿ ನಡೆದ ಮಹಿಳಾ ಅಧಿವೇಶನಗಳಲ್ಲಿ ಸುಮಾರು 35 ಸಾವಿರ ಮಹಿಳೆಯರು ಭಾಗವಹಿಸಿದ್ದು, ಆ ಸಂವಾದಗಳ ಆಧಾರದ ಮೇಲೆ ಮುಂದಿನ ವರ್ಷಗಳಲ್ಲಿ 'ಯುಗಾನುಗುಣ ಮಾತೃತ್ವ' ವಿಷಯದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.