
ಬೆಂಗಳೂರು, 15 ಜುಲೈ (ಹಿ.ಸ.):
ಆ್ಯಂಕರ್:ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಸ್ವಇಚ್ಛೆಯಿಂದ ಭೂಮಿ ನೀಡುವ ರೈತರಿಗೆ ಮಾತ್ರ ಪರಿಹಾರ ನೀಡಿ ಭೂಮಿ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಕುರಿತು ರೈತರ ಅಹವಾಲು ಹಾಗೂ ಅಭಿಪ್ರಾಯಗಳನ್ನು ಆಲಿಸಲು ವಿಶೇಷ ಸಮಿತಿ ರಚಿಸಲಾಗುವುದು ಎಂದು ಘೋಷಿಸಿದರು. ಸಮಿತಿಯಲ್ಲಿ ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ಅಗತ್ಯವಿದ್ದರೆ ನಿವೃತ್ತ ನ್ಯಾಯಾಧೀಶರನ್ನೂ ಸೇರಿಸಿ ಎರಡು-ಮೂರು ತಿಂಗಳಲ್ಲಿ ವರದಿ ಪಡೆಯಲಾಗುವುದು ಎಂದರು.
ಜಮೀನು ನೀಡಲು ಇಚ್ಛಿಸದ ರೈತರು ತಮ್ಮ ಭೂಮಿಯಲ್ಲೇ ಮುಂದುವರಿಯಬಹುದು. ಅವರ ಮೇಲೆ ಯಾವುದೇ ಒತ್ತಡ ಅಥವಾ ಬಲವಂತ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಅಥವಾ ಧರಣಿ ನಡೆಸುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದರು.
ಹಿಂದಿನ ಸರ್ಕಾರಗಳು ರೂಪಿಸಿದ್ದ ಯೋಜನೆಯನ್ನೇ ತಮ್ಮ ಸರ್ಕಾರ ಮುಂದುವರಿಸುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ, ರೆಡ್‌ಜೋನ್ ಆದೇಶವನ್ನು ಸದ್ಯಕ್ಕೆ ಬದಲಾಯಿಸುವುದಿಲ್ಲ ಎಂದರು. ಸ್ವಇಚ್ಛೆಯಿಂದ ಭೂಮಿ ನೀಡುವವರಿಗೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಗೆ ಅಡಿಪಾಯ ಹಾಕಿದ್ದು ಅವರ ಸರ್ಕಾರವೇ ಎಂದು ಆರೋಪಿಸಿದರು. ಡಿಎಲ್ಎಫ್ ಸಂಸ್ಥೆಗೆ ಯೋಜನೆ ನೀಡಲು ಮುಂದಾಗಿದ್ದು ಹಾಗೂ ಸಂಬಂಧಿತ ಪ್ರಕ್ರಿಯೆಗಳನ್ನು ಆರಂಭಿಸಿದ್ದು ಹಿಂದಿನ ಸರ್ಕಾರವೇ ಎಂದು ದಾಖಲೆಗಳೊಂದಿಗೆ ವಿವರಿಸಿದರು.
2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 900 ಎಕರೆ ಭೂಮಿಯನ್ನು ಪರಿಹಾರ ನೀಡಿ ಸ್ವಾಧೀನಪಡಿಸಿಕೊಂಡಾಗ ವಿರೋಧ ವ್ಯಕ್ತವಾಗಿರಲಿಲ್ಲ. ಈಗ ಮಾತ್ರ ರಾಜಕೀಯ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನಗಳು ಮುಂದುವರಿಯಲಿ, ಅದಕ್ಕೂ ನಾನು ಸಿದ್ಧ. ಜನರ ಆಶೀರ್ವಾದದಿಂದಲೇ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದರು.
ರಾಜ್ಯದ ಜನರ ಹಿತವೇ ತಮ್ಮ ಸರ್ಕಾರದ ಆದ್ಯತೆಯಾಗಿದ್ದು, ಯಾವುದೇ ನಿರ್ಧಾರದಿಂದ ರೈತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಯೋಜನೆಯನ್ನು ಕೈಬಿಡುವುದಿಲ್ಲ. ಸ್ವಇಚ್ಛೆಯಿಂದ ಭೂಮಿ ನೀಡುವವರಿಂದ ಮಾತ್ರ ಭೂಮಿ ಪಡೆದು ಸರ್ಕಾರವೇ ಪಾರದರ್ಶಕವಾಗಿ ಯೋಜನೆ ಜಾರಿಗೊಳಿಸುತ್ತದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.