
ವಾಷಿಂಗ್ಟನ್/ತೆಹ್ರಾನ್, 15 ಜುಲೈ (ಹಿ.ಸ.):
ಆ್ಯಂಕರ್:
ಅಮೆರಿಕವು ಇರಾನ್‌ನ ಪ್ರಮುಖ ಬಂದರುಗಳ ಮೇಲೆ ನೌಕಾ ನಿರ್ಬಂಧ ಆರಂಭಿಸಿರುವುದಾಗಿ ತಿಳಿಸಿದೆ. 20ಕ್ಕೂ ಹೆಚ್ಚು ಯುದ್ಧನೌಕೆಗಳು ಹಾಗೂ ನೂರಾರು ಸೇನಾ ವಿಮಾನಗಳನ್ನು ನಿಯೋಜಿಸಿ, ಇರಾನ್ ಕರಾವಳಿ ಮತ್ತು ಬಂದರುಗಳ ಮೂಲಕ ಸಂಚರಿಸುವ ಹಡಗುಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಅಮೆರಿಕದ ಮಧ್ಯ ಕಮಾಂಡ್ (ಸೆಂಟ್‌ಕಾಂ) ಮಾಹಿತಿ ನೀಡಿದೆ.
ಇದಕ್ಕೆ ಪ್ರತಿಯಾಗಿ, ಬಹ್ರೇನ್, ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಹೋರ್ಮುಜ್ ಜಲಸಂಧಿಯಲ್ಲಿದ್ದ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಸಾಗಣೆ ಮತ್ತು ಸಮುದ್ರ ವ್ಯಾಪಾರಕ್ಕೆ ಆತಂಕ ಎದುರಾಗಿದೆ. ಕಳೆದ ಎರಡು ದಿನಗಳಲ್ಲಿ ಕಚ್ಚಾ ತೈಲದ ಬೆಲೆಗಳು ಏರಿಕೆ ಕಂಡಿವೆ.
ಅಮೆರಿಕವು ಇರಾನ್‌ನ ಬುಶೆಹರ್, ಚಾಬಹಾರ್, ಜಾಸ್ಕ್, ಕೋನಾರಕ್, ಅಬು ಮೂಸಾ ಹಾಗೂ ಬಂದರ್ ಅಬ್ಬಾಸ್ ಪ್ರದೇಶಗಳಲ್ಲಿನ ಸೇನಾ ಮೂಲಸೌಕರ್ಯ, ಕ್ಷಿಪಣಿ ಉಡಾವಣೆ ಕೇಂದ್ರಗಳು, ಡ್ರೋನ್ ತಾಣಗಳು ಮತ್ತು ನೌಕಾ ಸಾಮರ್ಥ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಇದರ ನಡುವೆ, ಇರಾನ್‌ಗೆ ಸಂಬಂಧಿಸಿದ ಹಡಗು ಸಾಗಣೆ ಉದ್ಯಮಿ ಮೊಹಮ್ಮದ್ ಹುಸೇನ್ ಶಾಮ್ಖಾನಿ ಮತ್ತು ಅವರಿಗೆ ಸಂಬಂಧಿಸಿದ ಹಲವು ವ್ಯಕ್ತಿಗಳು, ಕಂಪನಿಗಳು ಹಾಗೂ ಹಡಗುಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.
ಬಂದರ್ ಅಬ್ಬಾಸ್ ಮತ್ತು ಸಿರಿಕ್ ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ವರದಿಯಾಗಿದೆ. ಕುವೈತ್ ತನ್ನ ವಾಯುಪ್ರದೇಶದತ್ತ ಬಂದ ಹಲವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಪ್ರಾದೇಶಿಕ ಭದ್ರತೆ ಮತ್ತು ಜಾಗತಿಕ ಇಂಧನ ಪೂರೈಕೆಯ ಬಗ್ಗೆ ಆತಂಕ ಹೆಚ್ಚಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.