
ತೆಹ್ರಾನ್/ವಾಷಿಂಗ್ಟನ್, 14 ಜುಲೈ (ಹಿ.ಸ.):
ಆ್ಯಂಕರ್:
ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕವು ಸತತ ಮೂರನೇ ರಾತ್ರಿ ಇರಾನ್‌ನ ಬಂದರು ನಗರಗಳು ಹಾಗೂ ಪ್ರಮುಖ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ)ಗೆ ಸೇರಿದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆ ಮೃತಪಟ್ಟಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕದ ಮಧ್ಯ ಕಮಾಂಡ್ (ಸೆಂಟ್‌ಕಾಂ) ನೀಡಿರುವ ಮಾಹಿತಿಯಂತೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಇರಾನ್‌ನ ಬಂದರ್ ಅಬ್ಬಾಸ್, ಕಿಶ್, ಕೆಶಮ್ ಹಾಗೂ ಅಬು ಮೂಸಾ ದ್ವೀಪ ಸೇರಿದಂತೆ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯ ವೇಳೆ ಭಾರೀ ಸ್ಫೋಟಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಇರಾನ್ ಕೂಡ ದಾಳಿ ನಡೆದಿರುವುದನ್ನು ದೃಢಪಡಿಸಿದೆ.
ಯುಎಇ ರಕ್ಷಣಾ ಸಚಿವಾಲಯದ ಪ್ರಕಾರ, ಹೋರ್ಮುಜ್ ಜಲಸಂಧಿಯ ಸಮೀಪ ಒಮಾನ್ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಎರಡು ಟ್ಯಾಂಕರ್‌ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಹಕ್ಕು ಯುಎಇಗೆ ಇದೆ ಎಂದು ಸಚಿವಾಲಯ ತಿಳಿಸಿದೆ.
ಇದಾದ ಬಳಿಕ ಸೆಂಟ್‌ಕಾಂ, ಇರಾನ್‌ನ ಬಂದರುಗಳಿಗೆ ಆಗಮಿಸುವ ಮತ್ತು ಅಲ್ಲಿಂದ ಹೊರಡುವ ಹಡಗುಗಳ ಮೇಲೆ ಮಂಗಳವಾರದಿಂದ ಮತ್ತೆ ನೌಕಾ ನಿರ್ಬಂಧ ಜಾರಿಗೊಳಿಸುವುದಾಗಿ ಘೋಷಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ.9ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಪ್ರಾದೇಶಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಸೌದಿ ಅರೇಬಿಯಾ ಮತ್ತು ಇರಾನ್ ಬೆಂಬಲಿತ ಹೂತಿ ಬಂಡುಕೋರರ ನಡುವೆ ಮತ್ತೆ ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳು ಆರಂಭವಾಗಿವೆ. ಸೌದಿ ಅರೇಬಿಯಾ, ಹೂತಿ ಬಂಡುಕೋರರು ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆದಿರುವುದಾಗಿ ತಿಳಿಸಿದೆ. ಮತ್ತೊಂದೆಡೆ, ಸೌದಿ ವೈಮಾನಿಕ ದಾಳಿಯಲ್ಲಿ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರಿಯಾಗಿದೆ ಎಂದು ಹೂತಿ ಸಂಘಟನೆ ಆರೋಪಿಸಿದೆ.
ವಿಮಾನ ಸಂಚಾರ ಮಾಹಿತಿಯ ಪ್ರಕಾರ, ಅಮೆರಿಕದ ಹಲವು ಮಿಲಿಟರಿ ವಿಮಾನಗಳು ಪರ್ಷಿಯನ್ ಕೊಲ್ಲಿ, ಒಮಾನ್ ಕೊಲ್ಲಿ ಹಾಗೂ ಸೌದಿ ಅರೇಬಿಯಾದ ವಾಯುಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ ಕೆಸಿ-135ಆರ್ ಹಾಗೂ ಕೆಸಿ-46ಎ ಇಂಧನ ತುಂಬುವ ವಿಮಾನಗಳು, ಇ-3ಬಿ ಸೆಂಟ್ರಿ ವಾಯು ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವಿಮಾನ, ಪಿ-8 ಪೋಸೈಡನ್ ಸಮುದ್ರ ಕಣ್ಗಾವಲು ವಿಮಾನ ಸೇರಿದಂತೆ ಹಲವು ಯುದ್ಧ ಹಾಗೂ ಗುಪ್ತಚರ ವಿಮಾನಗಳು ಸೇರಿವೆ.
ಇದೇ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಒಪ್ಪಂದದ ಷರತ್ತುಗಳನ್ನು ಪಾಲಿಸಿಲ್ಲ. ಅವರ ಮೇಲೆ ನಮ್ಮ ದಾಳಿ ಮುಂದುವರಿಯಲಿದೆ. ಅಂತಿಮವಾಗಿ ಹೋರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಲಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಅಲ್ಲದೆ, ಈ ಸಂಘರ್ಷದಲ್ಲಿ ಅಮೆರಿಕ ಬೆಂಬಲ ನೀಡುತ್ತಿರುವ ದೇಶಗಳು ಅದರ ವೆಚ್ಚವನ್ನು ಭರಿಸಬೇಕು ಎಂದೂ ಅವರು ತಿಳಿಸಿದ್ದಾರೆ.
ಇರಾನ್ ಮಾಧ್ಯಮಗಳ ವರದಿ ಪ್ರಕಾರ, ಬಂದರ್ ಅಬ್ಬಾಸ್, ಕಿಶ್, ಕೆಶಮ್ ಹಾಗೂ ಅಬು ಮೂಸಾ ದ್ವೀಪಗಳಲ್ಲಿ ಭಾರೀ ಸ್ಫೋಟಗಳಾಗಿದ್ದು, ಅಮೆರಿಕ ಡ್ರೋನ್ ದಾಳಿಗಳನ್ನು ನಡೆಸಿದೆ ಎಂದು ಇರಾನ್ ಸೇನೆ ಆರೋಪಿಸಿದೆ.
ಅಮೆರಿಕ–ಇರಾನ್ ನಡುವಿನ ಈ ಹೊಸ ಸೇನಾ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಜಾಗತಿಕ ಇಂಧನ ಸರಬರಾಜು ಹಾಗೂ ಸಮುದ್ರ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.