
ನವದೆಹಲಿ, 15 ಜುಲೈ (ಹಿ.ಸ.):
ಆ್ಯಂಕರ್:ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯ ಹಾಗೂ ನಿರಂತರ ಏರುತ್ತಿರುವ ಹಣದುಬ್ಬರದಿಂದ ದೇಶ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಳೆದ 44 ತಿಂಗಳಲ್ಲೇ ಅತಿ ಹೆಚ್ಚು ಸಗಟು ಹಣದುಬ್ಬರ ದಾಖಲಾಗಿದ್ದು, ಇಂಧನ ಮತ್ತು ವಿದ್ಯುತ್ ದರದಲ್ಲಿ ಶೇ.27.4ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಈ ವರ್ಷದ ಬಿತ್ತನೆ ಪ್ರಮಾಣವೂ ಕಳೆದ ಮೂರು ವರ್ಷಗಳಲ್ಲೇ ಕನಿಷ್ಠ ಮಟ್ಟದಲ್ಲಿದೆ ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ಜನರು ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟ ಅನುಭವಿಸುತ್ತಿದ್ದು, ರೈತರು ಸರ್ಕಾರದ ತಪ್ಪು ನೀತಿಗಳು ಹಾಗೂ ಹವಾಮಾನದ ಪ್ರತಿಕೂಲ ಪರಿಣಾಮಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.
ಹಣದುಬ್ಬರದಿಂದ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವ ಬದಲು ಸರ್ಕಾರ ನೈಜ ಅಂಕಿ-ಅಂಶಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದರು.
ದೇಶದ ಪ್ರತಿಯೊಂದು ವರ್ಗವೂ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ತನ್ನ ಆರ್ಥಿಕ ವೈಫಲ್ಯಕ್ಕೆ ಉತ್ತರ ನೀಡಬೇಕಾಗಿದೆ ಎಂದು ಜೈರಾಮ್ ರಮೇಶ್ ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.