ಭಾರತದಲ್ಲಿ ಧರ್ಮ ಪರಿಷತ್ ಹಾಗೂ 'ಸನಾತನ ಮಂಡಳಿ' ರಚಿಸಬೇಕು: ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜ್
ಭೋಪಾಲ್, 11 ಜುಲೈ (ಹಿ.ಸ.): ಆ್ಯಂಕರ್: ಭಾರತದಲ್ಲಿನ ಪ್ರಮುಖ ಹಿಂದೂ ದೇವಾಲಯಗಳ ಧಾರ್ಮಿಕ ಆಡಳಿತ ಮತ್ತು ಮಾರ್ಗದರ್ಶನಕ್ಕಾಗಿ ದೇಶದ ನಾಲ್ಕು ಆಮ್ನಾಯ ಪೀಠಗಳ ಶಂಕರಾಚಾರ್ಯರು, ಪ್ರಮುಖ ವೈಷ್ಣವ ಆಚಾರ್ಯರು ಹಾಗೂ ಮಾನ್ಯ ಧರ್ಮಗುರುಗಳನ್ನು ಒಳಗೊಂಡ ''ಧರ್ಮ ಪರಿಷತ್'' ಸ್ಥಾಪನೆ ಮಾಡಬೇಕು. ಜೊತೆಗೆ ದೇಶದ
ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜ್


ಭೋಪಾಲ್, 11 ಜುಲೈ (ಹಿ.ಸ.):

ಆ್ಯಂಕರ್:

ಭಾರತದಲ್ಲಿನ ಪ್ರಮುಖ ಹಿಂದೂ ದೇವಾಲಯಗಳ ಧಾರ್ಮಿಕ ಆಡಳಿತ ಮತ್ತು ಮಾರ್ಗದರ್ಶನಕ್ಕಾಗಿ ದೇಶದ ನಾಲ್ಕು ಆಮ್ನಾಯ ಪೀಠಗಳ ಶಂಕರಾಚಾರ್ಯರು, ಪ್ರಮುಖ ವೈಷ್ಣವ ಆಚಾರ್ಯರು ಹಾಗೂ ಮಾನ್ಯ ಧರ್ಮಗುರುಗಳನ್ನು ಒಳಗೊಂಡ 'ಧರ್ಮ ಪರಿಷತ್' ಸ್ಥಾಪನೆ ಮಾಡಬೇಕು. ಜೊತೆಗೆ ದೇಶದ ದೇವಾಲಯಗಳ ಧಾರ್ಮಿಕ ಆಡಳಿತಕ್ಕಾಗಿ 'ಸನಾತನ ಧರ್ಮ ಸಂರಕ್ಷಣಾ ಸಮಿತಿ' (ಸನಾತನ ಮಂಡಳಿ) ರಚಿಸಬೇಕು ಎಂದು ದ್ವಾರಕಾ ಶಾರದಾ ಪೀಠದ ಪೀಠಾಧೀಶರಾದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದುಸ್ತಾನ್ ಸಮಾಚಾರ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣದ ಹಿನ್ನೆಲೆಯಲ್ಲಿ ದೇವಾಲಯಗಳ ಆಡಳಿತ, ದೇಣಿಗೆಗಳ ಪಾರದರ್ಶಕತೆ ಹಾಗೂ ಧಾರ್ಮಿಕ ವ್ಯವಸ್ಥೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಶಂಕರಾಚಾರ್ಯರ ಪ್ರಕಾರ, ಧರ್ಮಾಚಾರ್ಯರ ಕರ್ತವ್ಯ ಆಡಳಿತ ನಡೆಸುವುದು ಅಲ್ಲ; ಧರ್ಮ, ಶಾಸ್ತ್ರ ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿ ಮಾರ್ಗದರ್ಶನ ನೀಡುವುದಾಗಿದೆ. ಇಂತಹ ಧರ್ಮ ಪರಿಷತ್ ಕಾಲಕಾಲಕ್ಕೆ ಸಲಹೆ ನೀಡಿದರೆ ದೇವಾಲಯಗಳ ಘನತೆ, ಸಂಪ್ರದಾಯ ಹಾಗೂ ಕೋಟ್ಯಂತರ ಭಕ್ತರ ವಿಶ್ವಾಸ ಮತ್ತಷ್ಟು ಬಲವಾಗುತ್ತದೆ ಎಂದರು.

ದೇವಾಲಯಗಳ ಆಡಳಿತಕ್ಕೆ 'ಸನಾತನ ಮಂಡಳಿ'

ದೇಶದ ಎಲ್ಲಾ ದೇವಾಲಯಗಳ ಧಾರ್ಮಿಕ ನಿರ್ವಹಣೆ ಧರ್ಮಾಚಾರ್ಯರು, ವೇದಪಂಡಿತರು ಹಾಗೂ ಸಮಾಜದ ನಿಷ್ಕಳಂಕ ಮತ್ತು ಅರ್ಹ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಅವರು ಹೇಳಿದರು. ಸರ್ಕಾರ ಸಹಕಾರ ನೀಡುವುದು ಸ್ವಾಗತಾರ್ಹವಾದರೂ, ಧಾರ್ಮಿಕ ನಿಯಂತ್ರಣ ಸರ್ಕಾರದ ಕರ್ತವ್ಯವಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದ ನಾಲ್ಕು ಆಮ್ನಾಯ ಪೀಠಗಳ ಶಂಕರಾಚಾರ್ಯರು, ಐದು ಪ್ರಮುಖ ವೈಷ್ಣವ ಆಚಾರ್ಯರು ಹಾಗೂ ಇತರ ಮಾನ್ಯ ಧರ್ಮಗುರುಗಳನ್ನು ಒಳಗೊಂಡ 'ಸನಾತನ ಧರ್ಮ ಸಂರಕ್ಷಣಾ ಸಮಿತಿ' ರಚಿಸಿ, ದೇಶದ ಎಲ್ಲಾ ದೇವಾಲಯಗಳ ಧಾರ್ಮಿಕ ಆಡಳಿತವನ್ನು ಅದರ ಮಾರ್ಗದರ್ಶನದಲ್ಲಿ ನಡೆಸಬೇಕು ಎಂದು ಅವರು ಸಲಹೆ ನೀಡಿದರು.ನಾನು

ಸರ್ಕಾರದ ಕೈಯಲ್ಲಿ ಧಾರ್ಮಿಕ ಆಡಳಿತ ಇರಬಾರದು

ಸರ್ಕಾರಕ್ಕೆ ಶಾಸ್ತ್ರಜ್ಞಾನ, ಆಧ್ಯಾತ್ಮಿಕ ಅನುಭವ ಹಾಗೂ ಧಾರ್ಮಿಕ ಪರಂಪರೆಗಳ ಬಗ್ಗೆ ಪರಿಣತಿ ಇಲ್ಲ. ಧರ್ಮನಿರಪೇಕ್ಷ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರವು ಯಾವುದೇ ಧರ್ಮದ ಧಾರ್ಮಿಕ ನಿರ್ವಹಣೆಯ ಹೊಣೆ ಹೊರುವುದಿಲ್ಲ. ಸರ್ಕಾರದ ಜವಾಬ್ದಾರಿ ಆಡಳಿತ, ಭದ್ರತೆ, ನ್ಯಾಯ ಮತ್ತು ಜನಕಲ್ಯಾಣವಾಗಿದ್ದು, ದೇವಾಲಯಗಳು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು.

ದೇವಾಲಯಗಳನ್ನು ಪ್ರವಾಸಿ ತಾಣಗಳಾಗಿ ಅಲ್ಲ, ತಪೋಭೂಮಿಗಳಾಗಿ ಕಾಣಬೇಕು. ಇಲ್ಲವಾದರೆ ಗರ್ಭಗುಡಿಯ ಪಾವಿತ್ರ್ಯ ಹಾಗೂ ಸಂಪ್ರದಾಯಬದ್ಧ ಪೂಜಾ ವಿಧಾನಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ದೇವದ್ರವ್ಯದ ಸದ್ಬಳಕೆ ಆಗಬೇಕು

ದೇವಾಲಯಗಳಿಗೆ ಬರುವ ದೇಣಿಗೆಯನ್ನು (ದೇವದ್ರವ್ಯ) ದೇವಾಲಯ ಇರುವ ಜಿಲ್ಲೆಯಲ್ಲೇ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಳಸಬೇಕು ಎಂದು ಶಂಕರಾಚಾರ್ಯರು ಅಭಿಪ್ರಾಯಪಟ್ಟರು.

ಪಾಠಶಾಲೆಗಳು, ಗುರುಕುಲಗಳು, ವೇದ ವಿದ್ಯಾಲಯಗಳು, ಗೋಶಾಲೆಗಳು, ಆಸ್ಪತ್ರೆಗಳು, ಅನ್ನಕ್ಷೇತ್ರಗಳು, ಧರ್ಮಶಾಲೆಗಳು ಹಾಗೂ ಬಡವರು ಮತ್ತು ನಿರ್ಗತಿಕರ ಸೇವೆಯಂತಹ ಜನೋಪಯೋಗಿ ಕಾರ್ಯಗಳಿಗೆ ದೇವದ್ರವ್ಯವನ್ನು ಬಳಸುವುದು ಸನಾತನ ಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿದೆ ಎಂದು ಹೇಳಿದರು.

ದೇಣಿಗೆ ಕಳವು ಧರ್ಮದ ವಿರುದ್ಧದ ಅಪರಾಧ

ದೇವದ್ರವ್ಯಂ ನ ಹರ್ತವ್ಯಂ ನೋಪಭೋಗ್ಯಂ ಕದಾಚನ ಎಂಬ ಶಾಸ್ತ್ರವಾಕ್ಯವನ್ನು ಉಲ್ಲೇಖಿಸಿದ ಅವರು, ಭಗವಂತನಿಗೆ ಸಮರ್ಪಿಸಲಾದ ದೇಣಿಗೆ ದೇವದ್ರವ್ಯವಾಗುತ್ತದೆ. ಅದರಲ್ಲಿ ಕಳವು ನಡೆದಿದ್ದರೆ ಅದು ಕೇವಲ ಆರ್ಥಿಕ ಅಪರಾಧವಲ್ಲ; ಭಗವಾನ್ ಶ್ರೀರಾಮ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು.

ಈ ಪ್ರಕರಣದ ಬಗ್ಗೆ ಯಾವುದೇ ರಾಜಕೀಯ ಅಥವಾ ಅಧಿಕಾರದ ಒತ್ತಡವಿಲ್ಲದೆ ನಿಷ್ಪಕ್ಷಪಾತ, ತ್ವರಿತ ಮತ್ತು ನಿರ್ಭೀತ ತನಿಖೆ ನಡೆಸಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆಗೆ ಒಳಗಾಗಬೇಕು ಎಂದು ಅವರು ಆಗ್ರಹಿಸಿದರು.

ರಾಮಮಂದಿರ ಆಡಳಿತ ಆದರ್ಶವಾಗಬೇಕು

ರಾಮಮಂದಿರ ಟ್ರಸ್ಟ್‌ನ ರಚನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವ್ಯಕ್ತಿಗಳನ್ನು ಬದಲಾಯಿಸುವುದಲ್ಲ, ನಿಯಮಗಳು ಮತ್ತು ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದು ಹೇಳಿದರು.

ಧರ್ಮಾಚಾರ್ಯರ ಮಾರ್ಗದರ್ಶನ, ಹಣಕಾಸಿನ ಪಾರದರ್ಶಕತೆ, ನಿಯಮಿತ ಲೆಕ್ಕಪರಿಶೋಧನೆ ಹಾಗೂ ಸಾರ್ವಜನಿಕ ಹೊಣೆಗಾರಿಕೆ ಶಾಶ್ವತವಾಗಿ ಖಚಿತಪಡಿಸುವ ವ್ಯವಸ್ಥೆ ನಿರ್ಮಾಣವಾಗಬೇಕು. ರಾಮಮಂದಿರವು ಸಮಸ್ತ ಹಿಂದೂ ಸಮಾಜದ ನಂಬಿಕೆಯ ಕೇಂದ್ರವಾಗಿರುವುದರಿಂದ ಅದರ ಆಡಳಿತವೂ ದೇಶಕ್ಕೆ ಮಾದರಿಯಾಗಿರಬೇಕು ಎಂದು ಹೇಳಿದರು.

ದೇಣಿಗೆ ನಿರ್ವಹಣೆಗೆ ಐದು ತತ್ವಗಳು

ದೇವದ್ರವ್ಯದ ಪಾರದರ್ಶಕ ನಿರ್ವಹಣೆಗೆ ಐದು ಪ್ರಮುಖ ತತ್ವಗಳನ್ನು ಅವರು ಸೂಚಿಸಿದರು:

- ಪ್ರತಿಯೊಂದು ದೇಣಿಗೆಯ ಡಿಜಿಟಲ್ ಹಾಗೂ ಲಿಖಿತ ದಾಖಲಾತಿ.

- ಪ್ರತಿ ವರ್ಷ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಲೆಕ್ಕಪರಿಶೋಧನೆ.

- ಆದಾಯ-ವೆಚ್ಚದ ಸಾರ್ವಜನಿಕ ಶ್ವೇತಪತ್ರ ಪ್ರಕಟಣೆ.

- ಧರ್ಮಾಚಾರ್ಯರು ಮತ್ತು ಹಣಕಾಸು ತಜ್ಞರ ಜಂಟಿ ಮೇಲ್ವಿಚಾರಣೆ.

- ಪ್ರತಿಯೊಂದು ವೆಚ್ಚದ ಉದ್ದೇಶವನ್ನು ಭಕ್ತರಿಗೆ ಸ್ಪಷ್ಟವಾಗಿ ತಿಳಿಸುವುದು.

ಧರ್ಮದಲ್ಲಿ ರಹಸ್ಯಕ್ಕಿಂತ ಪಾವಿತ್ರ್ಯ ಮತ್ತು ಪಾರದರ್ಶಕತೆಯೇ ವಿಶ್ವಾಸದ ಮೂಲ ಎಂದು ಅವರು ಹೇಳಿದರು.

ದೇವಾಲಯದ ದೇಣಿಗೆ ಸಮಾಜದ ಕಲ್ಯಾಣಕ್ಕೆ ಬಳಕೆಯಾಗಲಿ

ದೇವಾಲಯಗಳಿಗೆ ಬರುವ ದೇಣಿಗೆಯನ್ನು ವೇದ ಶಿಕ್ಷಣ, ಗುರುಕುಲಗಳು, ಗೋಸಂರಕ್ಷಣೆ, ಸಂಸ್ಕೃತ ಭಾಷೆಯ ಅಭಿವೃದ್ಧಿ, ಧರ್ಮಪ್ರಚಾರ, ಅನ್ನದಾನ ಹಾಗೂ ಸಮಾಜದ ಕಲ್ಯಾಣ ಕಾರ್ಯಗಳಿಗೆ ಬಳಸಬೇಕು ಎಂದು ಅವರು ಸಲಹೆ ನೀಡಿದರು.

ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಭಗವಾನ್ ಶ್ರೀರಾಮರು ಕೇವಲ ಐತಿಹಾಸಿಕ ವ್ಯಕ್ತಿಯಲ್ಲ; ಧರ್ಮ, ಸತ್ಯ, ನ್ಯಾಯ, ಕರುಣೆ ಮತ್ತು ತ್ಯಾಗದ ಶಾಶ್ವತ ಆದರ್ಶ ಎಂದು ಶಂಕರಾಚಾರ್ಯರು ಹೇಳಿದರು.

ರಾಮಮಂದಿರ ನಿರ್ಮಾಣದಷ್ಟೇ ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ದೇವಾಲಯಗಳ ಪಾವಿತ್ರ್ಯ, ಪಾರದರ್ಶಕತೆ ಮತ್ತು ಧಾರ್ಮಿಕ ಮೌಲ್ಯಗಳ ರಕ್ಷಣೆಯನ್ನು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯೆಂದು ಪರಿಗಣಿಸಬೇಕು. ಧರ್ಮದ ಹೆಸರಿನಲ್ಲಿ ಭ್ರಷ್ಟಾಚಾರ, ಮೋಸ ಅಥವಾ ಸ್ವಾರ್ಥವನ್ನು ಎಂದಿಗೂ ಒಪ್ಪಿಕೊಳ್ಳಬಾರದು ಎಂದು ಅವರು ಕರೆ ನೀಡಿದರು.

ಕೊನೆಯಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಶಾಸ್ತ್ರವಾಕ್ಯವನ್ನು ಉಲ್ಲೇಖಿಸಿದ ಅವರು, ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. ಭಗವಾನ್ ಶ್ರೀರಾಮರು ದೇಶಕ್ಕೆ ಸತ್ಯ, ಧರ್ಮನಿಷ್ಠೆ, ಸದ್ಬುದ್ಧಿ ಹಾಗೂ ಮರ್ಯಾದೆಯ ಮಾರ್ಗವನ್ನು ತೋರಿಸಲಿ ಮತ್ತು ಭಾರತವು ಮತ್ತೊಮ್ಮೆ ವಿಶ್ವಕ್ಕೆ ಆಧ್ಯಾತ್ಮಿಕ ನಾಯಕತ್ವ ನೀಡುವ ರಾಷ್ಟ್ರವಾಗಲಿ ಎಂದು ಪ್ರಾರ್ಥಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande