
ನವದೆಹಲಿ, 11 ಜುಲೈ (ಹಿ.ಸ.):
ಆ್ಯಂಕರ್:
ಭಾರತೀಯ ನೌಕಾಪಡೆಯ ಸಮುದ್ರ ಪಡೆಗೆ ಮತ್ತೊಂದು ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ಯುದ್ಧನೌಕೆ ಐಎನ್ಎಸ್ ಮಹೇಂದ್ರಗಿರಿ ಶನಿವಾರ ಅಧಿಕೃತವಾಗಿ ಸೇರ್ಪಡೆಯಾಯಿತು. ವಿಶಾಖಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯುದ್ಧನೌಕೆಯನ್ನು ನೌಕಾಪಡೆಗೆ ಸಮರ್ಪಿಸಿದರು.
ಪ್ರಾಜೆಕ್ಟ್–17ಎ ಅಡಿಯಲ್ಲಿ ನಿರ್ಮಿಸಲಾದ ಆರನೇ ಸ್ಟೆಲ್ತ್ ಫ್ರಿಗೇಟ್ ಆಗಿರುವ ಮಹೇಂದ್ರಗಿರಿ 6,670 ಟನ್ ಸಾಮರ್ಥ್ಯ ಹೊಂದಿದ್ದು, ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ವಿಭಾಗದಲ್ಲಿ ರೂಪುಗೊಂಡು, ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್‌ನಲ್ಲಿ ನಿರ್ಮಾಣವಾಗಿದೆ. ನೌಕೆಯಲ್ಲಿ ಶೇ.75ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳು ಮತ್ತು ತಂತ್ರಜ್ಞಾನ ಬಳಸಲಾಗಿದೆ.
ಸೂಪರ್‌ಸೋನಿಕ್ ಮೇಲ್ಮೈ-ಮೇಲ್ಮೈ ಕ್ಷಿಪಣಿಗಳು, ಮಧ್ಯಮ ದೂರದ ಮೇಲ್ಮೈ-ವಾಯು ಕ್ಷಿಪಣಿಗಳು ಹಾಗೂ ಜಲಾಂತರ್ಗಾಮಿ ವಿರೋಧಿ ಯುದ್ಧ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೌಕೆ ಹೊಂದಿದೆ. ಸುಧಾರಿತ ಯುದ್ಧ ನಿರ್ವಹಣಾ ವ್ಯವಸ್ಥೆಯ ಮೂಲಕ ವಿವಿಧ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಸಾಮರ್ಥ್ಯ ಇದಕ್ಕಿದೆ.
ಸಂಯುಕ್ತ ಡೀಸೆಲ್ ಅಥವಾ ಅನಿಲ ಚಾಲನಾ ವ್ಯವಸ್ಥೆಯೊಂದಿಗೆ ನಿರ್ಮಿಸಲಾದ ಮಹೇಂದ್ರಗಿರಿ ಹೆಚ್ಚಿನ ವೇಗ, ದೀರ್ಘ ಕಾರ್ಯಾಚರಣೆ ಹಾಗೂ ಬಹುಮುಖ ಸಮುದ್ರ ಕಾರ್ಯಗಳಿಗೆ ಸೂಕ್ತವಾಗಿದೆ. ಯುದ್ಧ ಕಾರ್ಯಾಚರಣೆಗಳ ಜೊತೆಗೆ ಮಾನವೀಯ ನೆರವು ಮತ್ತು ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಲ್ಲಿಯೂ ಈ ನೌಕೆಯನ್ನು ಬಳಸಬಹುದಾಗಿದೆ.
ನೌಕಾಪಡೆಯ ಪೂರ್ವ ಕಮಾಂಡ್‌ನಲ್ಲಿ ಕಾರ್ಯನಿರ್ವಹಿಸಲಿರುವ ಮಹೇಂದ್ರಗಿರಿ ಸೇರ್ಪಡೆಯಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಕಣ್ಗಾವಲು ಹಾಗೂ ಕಾರ್ಯಾಚರಣಾ ಸಾಮರ್ಥ್ಯ ಮತ್ತಷ್ಟು ಬಲವಾಗಲಿದೆ.
ನೌಕಾಪಡೆಯ ಕ್ಯಾಪ್ಟನ್ ವಿವೇಕ್ ಮಧ್ವಾಲ್ ಮಾತನಾಡಿ, ಫಾರ್ಸಿ ಕೊಲ್ಲಿ, ಮಲಕ್ಕಾ ಜಲಸಂಧಿ ಸೇರಿದಂತೆ ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಕಷ್ಟದ ಸಮಯದಲ್ಲಿ ರಕ್ಷಣಾ ಹಾಗೂ ಮಾನವೀಯ ನೆರವು ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಮಹೇಂದ್ರಗಿರಿ ಸೇರ್ಪಡೆಯಿಂದ ನೌಕಾಪಡೆಯ ಶಕ್ತಿ ಮತ್ತು ಆತ್ಮನಿರ್ಭರ ಭಾರತದ ಸಂಕಲ್ಪ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಕಳೆದ ವರ್ಷದಿಂದ ಇದುವರೆಗೆ ಭಾರತೀಯ ನೌಕಾಪಡೆ 12 ಯುದ್ಧನೌಕೆಗಳು, ಒಂದು ಜಲಾಂತರ್ಗಾಮಿ ಹಾಗೂ ಒಂದು ವಿಮಾನ ದಳವನ್ನು ಸೇರ್ಪಡೆ ಮಾಡಿಕೊಂಡಿದ್ದು, ಮಹೇಂದ್ರಗಿರಿ ಭಾರತದ ಸ್ವದೇಶಿ ರಕ್ಷಣಾ ಉತ್ಪಾದನಾ ಸಾಮರ್ಥ್ಯದ ಮತ್ತೊಂದು ಮೈಲಿಗಲ್ಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.