
ನವದೆಹಲಿ, 11 ಜುಲೈ (ಹಿ.ಸ.):
ಆ್ಯಂಕರ್:
ಪ್ರಧಾನಿ ನರೇಂದ್ರ ಮೋದಿ ಅವರ ನ್ಯೂಜಿಲೆಂಡ್ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನ್ಯೂಜಿಲೆಂಡ್‌ನ ಮಾಜಿ ಪ್ರಧಾನಿ ಡೇವಿಡ್ ಲಾಂಗ್ ಅವರನ್ನು ಸ್ಮರಿಸಿ, ಭಾರತ–ನ್ಯೂಜಿಲೆಂಡ್ ಸಂಬಂಧಗಳಿಗೆ ಹೊಸ ದಿಕ್ಕು ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಜೈರಾಮ್ ರಮೇಶ್, ಡೇವಿಡ್ ಲಾಂಗ್ ಅವರು ಜುಲೈ 1984ರಿಂದ 1989ರವರೆಗೆ ನ್ಯೂಜಿಲೆಂಡ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು, ಪ್ರಧಾನಿಯಾದ ಬಳಿಕ 1984ರ ಅಕ್ಟೋಬರ್‌ನಲ್ಲಿ ತಮ್ಮ ಮೊದಲ ವಿದೇಶ ಪ್ರವಾಸವಾಗಿ ಭಾರತಕ್ಕೆ ಬಂದಿದ್ದರು ಎಂದು ತಿಳಿಸಿದ್ದಾರೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿದ್ದ ಅವರು, ನಂತರ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೂ ಉತ್ತಮ ವೈಯಕ್ತಿಕ ಬಾಂಧವ್ಯ ಹೊಂದಿದ್ದರು ಎಂದು ಹೇಳಿದ್ದಾರೆ.
ಡೇವಿಡ್ ಲಾಂಗ್ ಅವರ ಪುತ್ರ ರಾಯ್ ಲಾಂಗ್ ಅವರಿಗೂ ಭಾರತ ಜತೆ ವಿಶೇಷ ನಂಟಿತ್ತು. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದು, ಬಳಿಕ ಭಾರತೀಯ ಮೂಲದ ಹಾಗೂ ಪ್ರಸ್ತುತ ಆಸ್ಟ್ರೇಲಿಯಾದ ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀತಾ ಭೌಮಿಕ್ ಅವರನ್ನು ವಿವಾಹವಾಗಿದ್ದರು ಎಂದು ಜೈರಾಮ್ ರಮೇಶ್ ಉಲ್ಲೇಖಿಸಿದ್ದಾರೆ.
1950ರ ದಶಕದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಉತ್ತಮ ಸಹಕಾರವಿತ್ತು. ಭಾರತದ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ನ್ಯೂಜಿಲೆಂಡ್ ನೆರವು ನೀಡಿದ್ದು, ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಯಲ್ಲಿಯೂ ಸಹಕಾರ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.
ಭಾರತದ ಶ್ವೇತ ಕ್ರಾಂತಿಯ ಹರಿಕಾರ ಡಾ. ವರ್ಗೀಸ್ ಕುರಿಯನ್ ಅವರನ್ನು 1952-53ರಲ್ಲಿ ಭಾರತ ಸರ್ಕಾರ ಫೆಲೋಶಿಪ್ ಮೂಲಕ ನ್ಯೂಜಿಲೆಂಡ್‌ಗೆ ಕಳುಹಿಸಿತ್ತು. ಅಲ್ಲಿನ ಅನುಭವಗಳು ಅವರ ಮುಂದಿನ ಕಾರ್ಯಗಳಿಗೆ ಮಹತ್ತರ ಪ್ರೇರಣೆಯಾಗಿದ್ದವು ಎಂದು ಹೇಳಿದ್ದಾರೆ.
1960 ಮತ್ತು 1970ರ ದಶಕಗಳಲ್ಲಿ ಉಭಯ ದೇಶಗಳ ಸಂಬಂಧಗಳು ನಿಧಾನಗೊಂಡಿದ್ದರೂ, ಡೇವಿಡ್ ಲಾಂಗ್ ಪ್ರಧಾನಿಯಾದ ನಂತರ ಸಂಬಂಧಗಳಲ್ಲಿ ಹೊಸ ಚೈತನ್ಯ ಮೂಡಿತು. ಇದೇ ಅವಧಿಯಲ್ಲಿ ವಿಶ್ವಪ್ರಸಿದ್ಧ ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ ಅವರನ್ನು ಭಾರತದಲ್ಲಿನ ನ್ಯೂಜಿಲೆಂಡ್ ಹೈಕಮಿಷನರ್ ಆಗಿ ನೇಮಕ ಮಾಡಲಾಗಿತ್ತು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ನವದೆಹಲಿ ರಾಜತಾಂತ್ರಿಕ ಪ್ರದೇಶದಲ್ಲಿರುವ ಒಂದು ರಸ್ತೆಗೆ ಎಡ್ಮಂಡ್ ಹಿಲರಿ ಹಾಗೂ ಮತ್ತೊಂದು ರಸ್ತೆಗೆ ಟೆನ್ಜಿಂಗ್ ನಾರ್ಗೆ ಅವರ ಹೆಸರನ್ನು ಇಡಲಾಗಿದೆ. ಈ ಇಬ್ಬರೂ 1953ರ ಮೇ 29ರಂದು ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಶಿಖರ ಏರಿ ಇತಿಹಾಸ ನಿರ್ಮಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಡೇವಿಡ್ ಲಾಂಗ್ ಅವರ ಆಡಳಿತಾವಧಿ ಭಾರತ–ನ್ಯೂಜಿಲೆಂಡ್ ಸಂಬಂಧಗಳ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.