ಪುಸ್ತಕಾಲಯಗಳಲ್ಲಿ ಯುವಕರ ಹೆಚ್ಚಿದ ಭಾಗವಹಿಸುವಿಕೆಯೇ ರಾಷ್ಟ್ರದ ಉಜ್ವಲ ಭವಿಷ್ಯದ ಆಧಾರ: ಅಮಿತ್ ಶಾ
ನವದೆಹಲಿ, 11 ಜುಲೈ (ಹಿ.ಸ.): ಆ್ಯಂಕರ್: ದೇಶದ ಭವಿಷ್ಯವನ್ನು ಅದರ ಆರ್ಥಿಕ ಸಮೃದ್ಧಿಯಿಂದಲ್ಲ, ಪುಸ್ತಕಾಲಯಗಳಿಗೆ ಭೇಟಿ ನೀಡುವ ಯುವಕರ ಸಂಖ್ಯೆಯಿಂದ ಅಳೆಯಬೇಕು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದರು. ನವದೆಹಲಿಯಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಹೆಸರಿನಲ್ಲಿ ನಿರ್ಮಿಸಲಾದ
ಅಮಿತ್ ಶಾ


ನವದೆಹಲಿ, 11 ಜುಲೈ (ಹಿ.ಸ.):

ಆ್ಯಂಕರ್:

ದೇಶದ ಭವಿಷ್ಯವನ್ನು ಅದರ ಆರ್ಥಿಕ ಸಮೃದ್ಧಿಯಿಂದಲ್ಲ, ಪುಸ್ತಕಾಲಯಗಳಿಗೆ ಭೇಟಿ ನೀಡುವ ಯುವಕರ ಸಂಖ್ಯೆಯಿಂದ ಅಳೆಯಬೇಕು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ನವದೆಹಲಿಯಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಹೆಸರಿನಲ್ಲಿ ನಿರ್ಮಿಸಲಾದ ಸಾರ್ವಜನಿಕ ಪುಸ್ತಕಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಮತ್ತು ವಿವೇಕವೇ ರಾಷ್ಟ್ರ ನಿರ್ಮಾಣದ ನಿಜವಾದ ಶಕ್ತಿಯಾಗಿದ್ದು, ಅದರ ಪ್ರಮುಖ ಮೂಲ ಪುಸ್ತಕಾಲಯಗಳಾಗಿವೆ ಎಂದು ಹೇಳಿದರು.

ಯುವಕರು ನಿಯಮಿತವಾಗಿ ಪುಸ್ತಕಾಲಯಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಯಾವುದೇ ವಿಷಯದ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಅದರ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಕೇಳಿದ ಮಾತುಗಳಿಗಿಂತ ಪುಸ್ತಕಗಳಲ್ಲಿರುವ ಪ್ರಮಾಣಿಕ ಮಾಹಿತಿಯೇ ವ್ಯಕ್ತಿತ್ವ ಮತ್ತು ಚಿಂತನೆಗೆ ಬಲ ನೀಡುತ್ತದೆ ಎಂದು ಅವರು ತಿಳಿಸಿದರು.

ಗಾಂಧಿನಗರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಮೂರುರಿಂದ ನಾಲ್ಕು ಸಾವಿರ ಪುಸ್ತಕಗಳನ್ನು ಹೊಂದಿರುವ ಪುಸ್ತಕಾಲಯಗಳನ್ನು ಸ್ಥಾಪಿಸಲಾಗಿದ್ದು, ಅವುಗಳನ್ನು ಕೇಂದ್ರ ಗ್ರಂಥಾಲಯದೊಂದಿಗೆ ಸಂಪರ್ಕಿಸಲಾಗಿದೆ. ಜೊತೆಗೆ ಮೊಬೈಲ್ ಪುಸ್ತಕಾಲಯ ವಾಹನಗಳ ಮೂಲಕ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಗ್ರಾಮ ಮಟ್ಟದಲ್ಲೇ ತಲುಪಿಸಲಾಗುತ್ತಿದೆ ಎಂದು ಶಾ ವಿವರಿಸಿದರು.

ದೆಹಲಿ ಸರ್ಕಾರವು ಎಲ್ಲಾ ಸಾರ್ವಜನಿಕ ಪುಸ್ತಕಾಲಯಗಳನ್ನು ಡಿಜಿಟಲ್ ಮೂಲಕ ಪರಸ್ಪರ ಸಂಪರ್ಕಿಸುವಂತೆ ಸಲಹೆ ನೀಡಿದ ಅವರು, ಈ ನೂತನ ಎರಡು ಮಹಡಿಗಳ ಪುಸ್ತಕಾಲಯದಲ್ಲಿ 32 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಪ್ರತ್ಯೇಕ ಅಧ್ಯಯನ ಕೊಠಡಿಗಳು, ಆಧುನಿಕ ಓದುಗ ಮಂದಿರ, ಬಹುಉದ್ದೇಶ ಸಭಾಂಗಣ, ಉಚಿತ ವೈ-ಫೈ ಹಾಗೂ ಒಂದು ಕೋಟಿಗೂ ಅಧಿಕ ಇ-ಪುಸ್ತಕಗಳ ಸೌಲಭ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ, ಸ್ವಾತಂತ್ರ್ಯ ಹೋರಾಟದಿಂದ ತುರ್ತು ಪರಿಸ್ಥಿತಿಯ ವಿರುದ್ಧದ ಪ್ರಜಾಪ್ರಭುತ್ವದ ಹೋರಾಟದವರೆಗೆ ಅವರ ಕೊಡುಗೆ ದೇಶಕ್ಕೆ ಸದಾ ಪ್ರೇರಣೆಯಾಗಲಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande